ರಾಜ್ ಬಿ. ಶೆಟ್ಟಿ ನಿರ್ದೇಶನದ “ಒಂದು ಮೊಟ್ಟೆಯ ಕಥೆ’ ಎಲ್ಲೆಡೆ ಸಖತ್ ಹವಾ ಎಬ್ಬಿಸುತ್ತಿದೆ. ಇದು ಸಹಜವಾಗಿಯೇ ನಿರ್ಮಾಪಕರಾದ ಪವನ್‌ಕುಮಾರ್ ಹಾಗೂ ಸುಹಾನ್‌ಗೆ ಖುಷಿಕೊಟ್ಟಿದೆ. ಚಿತ್ರ ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೂ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಅಷ್ಟೇ ಅಲ್ಲ, ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ಜನರು ಜೈ ಎಂದಿದ್ದಾರೆ. ಸಿನಿಮಾಗೆ ಸಿಕ್ಕ ಮೆಚ್ಚುಗೆ ಮೆಚ್ಚಿಕೊಂಡ ಪವನ್ ಕುಮಾರ್, ಆ ತಂಡವನ್ನು ಮಾಧ್ಯಮ ಎದುರು ಕರೆದು ಕೂರಿಸಿದ್ದರು. ಅಷ್ಟೇ ಅಲ್ಲ, ನಿರ್ದೇಶಕ ರಾಜ್ ಬಿ.ಶೆಟ್ಟಿ ತಮ್ಮ ತಂಡದ ಸದಸ್ಯರಾದ ನಿರ್ಮಾಪಕ ಸುಹಾನ್, ಕ್ಯಾಮೆರಾಮೆನ್ ಪ್ರವೀಣ್, ಕಲಾವಿದರಾದ, ಶೈಲಶ್ರೀ, ಅಮೃತಾನಾಯಕ್, ಪ್ರಕಾಶ್, ರಾಮ್‌ದಾಸ್, ವಿನೀತ್, ರಾಹುಲ್, ರಾಜೇಶ್ ಹಾಗೂ ಸಂಗೀತ ನಿರ್ದೇಶಕ ಮಿಧುನ್ ಮುಕುಂದ್ ಅವರನ್ನು ಪರಿಚಯಿಸಿಕೊಟ್ಟರು. ಎಲ್ಲರೂ
ಸಿನಿಮಾದಲ್ಲಿ ಸಿಕ್ಕ ಅವಕಾಶ ಹಾಗೂ ಅನುಭವ ಹಂಚಿಕೊಂಡರು.
ಅಂದಹಾಗೆ, ಚಿತ್ರಕ್ಕೆ ಮೊದಲ ದಿನವೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಮಲ್ಟಿಪ್ಲೆಕ್ಸ್‌ನಲ್ಲಿ ಅತಿಹೆಚ್ಚು ಪ್ರದರ್ಶನ ಕಂಡು ದಾಖಲೆ ಮಾಡಿದೆ. ಚಿತ್ರಮಂದಿರಗಳಲ್ಲೂ ಒಳ್ಳೆಯ ಗಳಿಕೆ ಮಾಡಿದೆ. ಇದು ಸಹಜವಾಗಿಯೇ ನಿರ್ಮಾಪಕ ಪವನ್‌ಕುಮಾರ್ ಹಾಗೂ ವಿತರಕ ಜಾಕ್ ಮಂಜು ಅವರಿಗೆ ಖುಷಿಕೊಟ್ಟಿದೆ.
ತಮಿಳು ಚಿತ್ರ ಪ್ರದರ್ಶನವಾಗು ಸಂಪಿಗೆ ಚಿತ್ರಮಂದಿರದಲ್ಲಿ ನಿರೀಕ್ಷಿಸದ ಗಳಿಕೆ ಆಗಿರುವುದು ಚಿತ್ರದ ಮತ್ತೂಂದು ಪ್ಲಸ್. ಕೆ.ಜಿ.ರಸ್ತೆಯ ಚಿತ್ರಮಂದಿರದಿಂದಲೂ ಚಿತ್ರಕ್ಕೆ ಈಗ ಬೇಡಿಕೆ ಬಂದಿದೆ ಎಂಬುದು ಇನ್ನೊಂದು ವಿಶೇಷ. ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ಈ ಚಿತ್ರ, ಮಂಗಳೂರಿನ ಮಲ್ಟಿಪ್ಲೆಕ್ಸ್‌ನಲ್ಲಿ 19 ಪ್ರದರ್ಶನ ಕಂಡಿದೆ. ಮುಂದಿನ ವಾರದಿಂದ ಸಿಂಗಲ್ ಥಿಯೇಟರ್‌ನಲ್ಲೂ “ಮೊಟ್ಟೆ’ ಕಾಣಿಸಿಕೊಳ್ಳಲಿದೆ. ಸದ್ಯಕ್ಕೆ ಹೈದರಾಬಾದ್, ಮುಂಬೈನಲ್ಲೂ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಮುಂದಿನ ವಾರ ವಿದೇಶದಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ನಿರ್ಮಾಪಕರಿಗಿದೆ.
ಈ ಮಧ್ಯೆ ಚಿತ್ರ ಜರ್ಮನಿ ಮತ್ತು ಗಲ್ಫ್ನಲ್ಲಿ ಬಿಡುಗಡೆಯಾಗಲಿದೆ. ಜುಲೈ 15ರಂದು ಜಮರ್ನಿಯ ಲಿವರ್ ಕುಸನ್‌ನ ಸ್ಕಾಲಾ ಸಿನಿಮಾದಲ್ಲಿ ಮೊದಲು ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಫ್ರಾಂಕ್‌ಫರ್ಟ್, ಮ್ಯೂನಿಚ್, ಬಾನ್, ಬರ್ಲಿನ್, ಹ್ಯಾಂಬರ್ಗ್ ಮುಂತಾದ ಕಡೆ ಚಿತ್ರ ಬಿಡುಗಡೆಯಾಗಿ ಪ್ರದರ್ಶನ ಕಾಣಲಿದೆ.
ಇದಾದ ಬಳಿಕ ಆಗಸ್ಟ್‌ನಲ್ಲಿ ಚಿತ್ರವು ಗಲ್ಫ್ನಲ್ಲಿ ಬಿಡುಗಡೆಯಾಗಲಿದೆ. ಹಾಗೆ ನೋಡಿದರೆ, “ಒಂದು ಮೊಟ್ಟೆಯ ಕಥೆ’ ಚಿತ್ರ
ಮೊದಲು ಬಿಡುಗಡೆಯಾಗಿದ್ದೇ ಹೊರ ದೇಶದಲ್ಲಿ. ಮೇನಲ್ಲಿ ನಡೆದ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್
ಫೆಸ್ಟಿವಲ್‌ನಲ್ಲಿ ಪ್ರೀಮಿಯರ್ ಆದ ಈ ಚಿತ್ರವು, ನಂತರ ಲಂಡನ್ ಚಿತ್ರೋತ್ಸವದಲ್ಲೂ ಬಿಡುಗಡೆಯಾಗಿತ್ತು.
ಈಗ ಚಿತ್ರ ಕರ್ನಾಟಕದಲ್ಲಿ ತೆರೆಕಂಡಿದ್ದು ಮತ್ತು ಮುಂದಿನ ದಿನಗಳಲ್ಲಿ ಹೊರದೇಶಗಳಲ್ಲಿ ಬಿಡು ಗಡೆಯಾಗಲಿದೆ. ಈ ಚಿತ್ರ ಎಷ್ಟು ದೇಶಗಳನ್ನು ಸುತ್ತಿ ಬರುತ್ತದೆ ಎಂಬ ಕುತೂಹಲ ಸದ್ಯಕ್ಕೆ ಎಲ್ಲರಿಗೂ ಇದೆ.