1979ರಲ್ಲಿ ಶಂಕರನಾಗ್ ಅಭಿನಯದ “ಒಂದಾನೊಂದು ಕಾಲದಲ್ಲಿ’ ಸಿನಿಮಾ ತೆರೆಕಂಡು ಭರ್ಜರಿ ಯಶಸ್ಸು ಕಂಡಿದ್ದು ಅನೇಕರಿಗೆ ಗೊತ್ತಿರಬಹುದು. ಈಗ ಅದೇ “ಒಂದಾನೊಂದು ಕಾಲದಲ್ಲಿ’ ಎಂಬ ಹೆಸರಿನಲ್ಲಿ ಹೊಸಬರ ಸಿನಿಮಾವೊಂದು ತಯಾರಾಗಿದ್ದು, ತೆರೆಗೆ ಬರಲು ಸಿದ್ಧವಾಗಿದೆ.
ಅಂದಹಾಗೆ, ಈ ಸಿನಿಮಾದ ಹೆಸರು ಒಂದಾನೊಂದು ಕಾಲದಲ್ಲಿ ಅಂತಿದ್ದರೂ, ಅಂದು ತೆರೆಕಂಡಿದ್ದ “ಒಂದಾನೊಂದು ಕಾಲದಲ್ಲಿ’ ಸಿನಿಮಾಕ್ಕೂ ಈಗ ತೆರೆ ಕಾಣುತ್ತಿರುವ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಪಕ್ಕಾ ರೆಟ್ರೋ ಶೈಲಿಯ ಕಥಾಹಂದರದ ಸಿನಿಮಾವಾಗಿದ್ದರಿಂದ, ಸಿನಿಮಾದ ಸಬ್ಜೆಕ್ಟ್ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ತಮ್ಮ ಸಿನಿಮಾಕ್ಕೂ “ಒಂದಾನೊಂದು ಕಾಲದಲ್ಲಿ’ ಎಂಬ ಹೆಸರನ್ನು ಇಟ್ಟುಕೊಂಡಿದೆ.
ಹಿರಿಯ ನಿರ್ದೇಶಕ ಭಗವಾನ್ ಬಳಿ ತರಬೇತಿ ಪಡೆದುಕೊಂಡಿರುವ ಎನ್. ಮಂಜುನಾಥ್ ಈ ಸಿನಿಮಾಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ, ಬರೆದು ನಿರ್ದೇಶನ ಮಾಡುವುದರ ಜೊತೆಗೆ ತೆರೆಮೇಲೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಹರ್ಷಲಹನಿ ನಾಯಕಿಯಾಗಿದ್ದು, ಉಳಿದಂತೆ ಶೋಭರಾಜ್, ಸಂಗೀತಾ, ನೀನಾಸಂ ಅಶ್ವಥ್, ಜಿ. ತರುಣ ಕುಮಾರ್ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಮುನಿ ಲಕ್ಷ್ಮೀ ವೆಂಕಟೇಶ್ವರ ಕ್ರಿಯೇಶನ್ಸ್’ ಬ್ಯಾನರ್‌ನಲ್ಲಿ ಆನೇಕಲ್ ಮೂಲದ ಟಿ. ಎಸ್ ಗೋಪಲ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈಗಾಗಲೇ “ಒಂದಾನೊಂದು ಕಾಲದಲ್ಲಿ’ ಸಿನಿಮಾದ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಿದೆ.
ಇದೇ ವೇಳೆ ಸಿನಿಮಾದ ಬಗ್ಗೆ ಮಾತನಾಡಿದ ನಾಯಕ ಕಂ ನಿರ್ದೇಶಕ ಮಂಜುನಾಥ್, “1980ರ ರೆಟ್ರೋ ಶೈಲಿಯಲ್ಲಿ ನಡೆಯುವ ಪ್ರೇಮಕಥೆ ಈ ಸಿನಿಮಾದಲ್ಲಿದೆ. ಒಬ್ಬರನ್ನೊಬ್ಬರು ಭೇಟಿಯಾಗದ ನಾಯಕ-ನಾಯಕಿಯನ್ನು ಕರವಸ್ತ್ರವೊಂದು ಪ್ರೀತಿಯ ಸಂದೇಶ ನೀಡಿ ಒಂದಾಗಿಸುತ್ತದೆ. ಅದು ಹೇಗೆ ಎಂಬುದೇ ಸಿನಿಮಾದ ಕಥೆ. ಇದೊಂದು ಅಪ್ಪಟ ಲವ್‌ಸ್ಟೋರಿ ಸಿನಿಮಾವಾಗಿದ್ದು, ಅಂದಿನ ಕಾಲಘಟ್ಟದ ಹಿನ್ನೆಲೆಯಲ್ಲಿ ಸಿನಿಮಾ ತೆರೆಮೇಲೆ ಮೂಡಿಬರುತ್ತದೆ. ಅದಕ್ಕಾಗಿಯೇ ಸಿನಿಮಾಕ್ಕೆ “ಒಂದಾನೊಂದು ಕಾಲದಲ್ಲಿ’ ಎಂಬ ಟೈಟಲ್ ಇಡಲಾಗಿದೆ’ ಎಂದು ವಿವರಣೆ ನೀಡಿದರು.
ಪ್ರಶಾಂತ್ ಹೊನ್ನಾವರ ಸಾಹಿತ್ಯದ “ಒಂದಾನೊಂದು ಕಾಲದಲ್ಲಿ’ ಚಿತ್ರದ ನಾಲ್ಕು ಗೀತೆಗಳಿಗೆ ಯಶವಂತ್ ಭೂಪತಿ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಏಳುಕೋಟೆ ಚಂದ್ರು ಛಾಯಾಗ್ರಹಣವಿದೆ.