Advertisement

ಒಂದಾನೊಂದು ಕಾಲದಲ್ಲಿ  ಸಾಹಿತಿಗಳು ಸುಖವಾಗಿದ್ದರು ! 

06:00 AM Sep 02, 2018 | |

ಒಂದಾನೊಂದು ಕಾಲದಲ್ಲಿ ಕನ್ನಡ ಸಾಹಿತಿಗಳು ಸುಖವಾಗಿದ್ದರು’- ಇನ್ನು ಕೆಲವು ಶತಮಾನಗಳ ಬಳಿಕ ಕನ್ನಡ ಸಾಹಿತ್ಯದ ಇಂದಿನ ಸ್ಥಿತಿಯ ಬಗ್ಗೆ ಮಾತನಾಡುವಾಗ ಉದ್ಧರಿಸಬಹುದಾದ ವಾಕ್ಯವಿದು. ಏಕೆಂದರೆ, ಈ ಕಾಲದ ಸಾಹಿತಿಗಳೇ ಹಾಗಿದ್ದಾರೆ !

Advertisement

ಸೂಕ್ಷ್ಮವಾಗಿ ಗಮನಿಸಿದರೆ ಪ್ರಜಾಪ್ರಭುತ್ವವನ್ನು ಅನುಸರಿಸುವ ದೇಶದಲ್ಲಿ ಸರಕಾರ ಯಾವುದೇ ವ್ಯಕ್ತಿಗೆ ಪ್ರಶಸ್ತಿ ಕೊಡುವುದು ಪ್ರಜಾತಂತ್ರಕ್ಕೆ ಅನುಗುಣವಾದ ಸಂಗತಿಯಲ್ಲ.  ಪ್ರಶಸ್ತಿ ಸ್ವೀಕರಿಸುವುದು ತಪ್ಪು. ಪ್ರಶಸ್ತಿ ಒಮ್ಮೆ ಸ್ವೀಕರಿಸಿದರೆ ಮತ್ತೆ ಹಿಂತಿರುಗಿಸುವುದು ಮತ್ತೂಂದು ದೊಡ್ಡ ತಪ್ಪು. ಅದರಲ್ಲಿಯೂ ಪ್ರಶಸ್ತಿಗಾಗಿ ಲಾಬಿ ನಡೆಸಿದರೆ ಅದು ಮಹಾತಪ್ಪು. ಅಕಾಡೆಮಿಯಾಗಲಿ, ಇಲಾಖೆಯಾಗಲಿ ನೀಡುವ ಪ್ರಶಸ್ತಿಯನ್ನು “ಬೇಡ’ ಎಂದು ನಿರಾಕರಿಸಿದವರು ಇಲ್ಲವೇ ಇಲ್ಲ ; ಇದ್ದರೂ ಅಪರೂಪಕ್ಕೆ ಒಬ್ಬರು, ಇಬ್ಬರು. ಇವೆಲ್ಲ ತಿಳಿದಿದ್ದೂ ಪ್ರಶಸ್ತಿಗಾಗಿ ಹಾತೊರೆಯುತ್ತ, ವೇದಿಕೆಯ ಮುಂಭಾಗದಲ್ಲಿ ಪ್ರಶಸ್ತಿ ಪುರಸ್ಕೃತರಿಗಾಗಿ ಇರಿಸಿದ ಆಸನದಲ್ಲಿ ಕುಳಿತು ಮುಜುಗರವನ್ನು ಅನುಭವಿಸುತ್ತಿರುವವರಂತೆ ಕೃತಕವಾಗಿ ಅಭಿನಯಿಸುತ್ತ, ಅಕಾಡೆಮಿ-ಪ್ರಾಧಿಕಾರಗಳ ಹುದ್ದೆಗಳಲ್ಲಿ ಸಾರ್ಥಕತೆ ಹೊಂದಲು ತವಕಿಸುವ ಸಾಹಿತಿಗಳು ಮತ್ತೆ ಹೇಗೆ ಇರುತ್ತಾರೆ?

ಹಾಗಾಗಿಯೇ “ಒಂದಾನೊಂದು ಕಾಲದಲ್ಲಿ ಕನ್ನಡ ಸಾಹಿತಿಗಳು ಸುಖವಾಗಿದ್ದರು!’

ಕತೆ-ಕಾವ್ಯ ಬರೆಯುವ ಎಲ್ಲ ಲೇಖಕರ ಆತ್ಮಕಥನಗಳಲ್ಲಿ ಅವರವರ ಹಿರಿಯರು ಮಹಾನುಭಾವರೇ ಆಗಿರುತ್ತಾರೆ, ಬಂಧುಗಳು ಊರಿಗೆ ಉಪಕಾರ ಮಾಡುವವರಾಗಿರುತ್ತಾರೆ. ಸ್ವ-ಸಮುದಾಯದವರಂತೂ ಊರಿಗೆ ಆಡ್ಯರಾಗಿರುತ್ತಾರೆ. ಅವರ ಸಮುದಾಯದವರೊಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಸಮಾಜವನ್ನು ಶೋಷಣೆ ಮಾಡಿರುತ್ತಾರೆ. ತಮ್ಮ ಬಗ್ಗೆ ಒಂದು ಅಭಿನಂದನ ಗ್ರಂಥ ಬಂದರೆ ಒಳ್ಳೆಯದಿತ್ತು ಎಂಬ ಭಾವನೆ ಇದ್ದರೂ ಅದನ್ನು ನೇರವಾಗಿ ಹೇಳದೆ ತಮ್ಮ ಅಭಿಮಾನಿಗಳ ಮೂಲಕ ಕಾರ್ಯಗತಗೊಳಿಸುವ ಸೌಜನ್ಯ ತೋರುತ್ತಾರೆ. ಕಾರಂತ, ಮಾಸ್ತಿ, ಬೇಂದ್ರೆಯವರಂಥ ಹಿರಿಯ ಸಾಹಿತಿಗಳು ಅನುಭವಿಸಿದ ತಳಮಳ ಇವರನ್ನು ಬಾಧಿಸುವುದಿಲ್ಲ. ಆ ಕಡೆಯವರಿಗೂ ಈ ಕಡೆಯವರಿಗೂ ಬೇಸರವಾಗದಂತೆ “ನಡುಪಥ’ದಲ್ಲಿ ನಡೆಯುತ್ತಾರೆ. ಯಾವುದೇ ಗೊಂದಲಗಳಿಲ್ಲದ ಕಾರಣ ಒಂದು ರೀತಿಯ ಸಂತೋಷದಿಂದಿರಲು ಸಾಧ್ಯವಾಗಿದೆ.

ಹಾಗಾಗಿಯೇ “ಒಂದಾನೊಂದು ಕಾಲದಲ್ಲಿ ಸಾಹಿತಿಗಳು ಸುಖವಾಗಿದ್ದರು’

Advertisement

ಎಲ್ಲ ಸಾಹಿತಿಗಳು ಪ್ರಶಸ್ತಿ, ಸಂಮಾನ, ಪ್ರಸಿದ್ಧಿ, ಅಂಕಣ, ಫೊಟೊ, ಪಿಂಚಣಿ, ಸ್ವಜನಪ್ರೀತಿ-ಗಳಲ್ಲಿ ಮುಳುಗಿಹೋಗಿ ಒಂದು ರೀತಿಯ “ಕಂಫ‌ರ್ಟ್‌ ಝೋನ್‌’ನಲ್ಲಿ ಬದುಕುತ್ತಿದ್ದಾರೆ. ಸಾಹಿತ್ಯ ಗೋಷ್ಠಿಗಳು, ಸಮ್ಮೇಳನಗಳು ಓದುಗರನ್ನು ಉತ್ತೇಜಿಸಬೇಕು ಎಂಬುದು ನಿಜವೇ ; ಆದರೆ, ಸಾಹಿತಿಗಳ “ಕಂಫ‌ರ್ಟ್‌ ಝೋನ್‌’ಗಳನ್ನು ಕೊಂಚವಾದರೂ ಅಲುಗಾಡಿಸಬೇಕು, ಆತ್ಮಸಾಕ್ಷಿಯನ್ನು ಪ್ರಶ್ನಿಸಬೇಕು. ಹಾಗಾದರೆ ಮಾತ್ರ ಸಾರ್ಥಕ.

ಕುಮಾರ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next