ನಟ ಧನಂಜಯ್ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ “ಜಮಾಲಿಗುಡ್ಡ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್‌ನಲ್ಲಿ ಒಂದು ಹೊಸ ಬಗೆಯ ಕಂಟೆಂಟ್, ಪಾತ್ರಗಳು ಎದ್ದು ಕಾಣುತ್ತವೆ. ಈ ಮೂಲಕ “ಜಮಾಲಿಗುಡ್ಡ’ ಮೇಲೆ ವರ್ಷಾಂತ್ಯದ ನಿರೀಕ್ಷೆ ಮೂಡಿದೆ. ಇನ್ನು, “ಜಮಾಲಿಗುಡ್ಡ’ ಟ್ರೇಲರ್ ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಬಿಡುಗಡೆ ಮಾಡಿ ಶುಭ ಕೋರಿದರು
“ಈ ಚಿತ್ರ ಒಂದು ಕಾಲ್ಪನಿಕ ಪ್ರಪಂಚ. ಜೊತೆಗೆ ಭಾವನಾತ್ಮಕ ಪಯಣ ಕೂಡ. ಧನಂಜಯ ಹಾಗೂ ಬೇಬಿ ಪ್ರಾಣ್ಯ ನಡುವಿನ ಸನ್ನಿವೇಶಗಳು ಸುಂದರವಾಗಿ ಮೂಡಿಬಂದಿದೆ. 95 – 96 ರ ಕಾಲಘಟ್ಟದಲ್ಲಿ ನಡೆಯುವ ಕಥೆಯಿದು. ಚಿಕ್ಕಮಗಳೂರಿನ ಬಾಬಾಬುಡನಗಿರಿಯ ಸೊಬಗು ಚಿತ್ರದ ಮತ್ತೂಂದು ಹೈಲೈಟ್. ಅಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿದೆ. ಜಮಾಲಿ ಗುಡ್ಡ ಚಿತ್ರ ಉತ್ತಮವಾಗಿ ಮೂಡಿಬರಲು ನಿರ್ಮಾಪಕರು ಹಾಗೂ ಇಡೀ ಚಿತ್ರತಂಡದ ಸಹಕಾರ ಕಾರಣ’ ಎಂದರು ನಿರ್ದೇಶಕ ಕುಶಾಲ್ ಗೌಡ.
ನಟ ಧನಂಜಯ್ ಮಾತನಾಡಿ, “ಜಮಾಲಿಗುಡ್ಡ ಈ ವರ್ಷದ ನನ್ನ ನಟನೆಯ 6 ನೇ ಚಿತ್ರವಾಗಿ ಬಿಡುಗಡೆಯಾಗುತ್ತಿದೆ. ಇದೊಂದು ಫೀಲ್ ಗುಡ್ ಸಿನಿಮಾ. ಕುಟುಂಬ ಸಮೇತರಾಗಿ ಬಂದು ನೋಡಬಹುದಾದ ಚಿತ್ರ. ಕುಶಾಲ್ ಗೌಡ ಅವರು ಈ ಚಿತ್ರಕ್ಕಾಗಿ ಫೇಸ್ ಬುಕ್ ಮೂಲಕ ನಿರ್ಮಾಪಕರನ್ನು ಹುಡುಕಿದರು. ಆಗ ಶ್ರೀಹರಿ ಸಿಕ್ಕರು. ನಾನು ಕೂಡ ಬಿಝಿ ಇದ್ದೆ. ಆದರೆ, ಹೆಚ್ಚಿನ ಚಿತ್ರೀಕರಣ ಬಾಬಾಬುಡನ ಗಿರಿಯಲ್ಲೇ ನಡೆಯಬೇಕಿತ್ತು. ಅದರಲ್ಲೂ ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ವಾತಾವರಣದಲ್ಲೇ ಚಿತ್ರೀಕರಣ ನಡೆಯಬೇಕಿಗಿದ್ದರಿಂದ ಬೇಗ ಈ ಚಿತ್ರೀಕರಣದಲ್ಲಿ ಪಾಲ್ಗೊಂಡೆ’ ಎಂದರು ನಾಯಕ ಡಾಲಿ ಧನಂಜಯ.
“ಈ ಚಿತ್ರ ನನ್ನ ವೃತ್ತಿಬದುಕಿನಲ್ಲಿ ಸದಾ ನೆನಪಿನಲ್ಲಿ ಉಳಿಯುವ ಸಿನಿಮಾವಾಗಲಿದೆ. ಈ ಚಿತ್ರದ ಭಾವನಾತ್ಮಕ ಸನ್ನಿವೇಶಗಳಲ್ಲಿ ನಾನು ಎಷ್ಟೋ ಕಡೆ ಸಹಜವಾಗಿ ಅತ್ತಿದ್ದು ಇದೆ. ಅಂತಹ ಅದ್ಭುತ ಸನ್ನಿವೇಶಗಳು ಈ ಚಿತ್ರದಲ್ಲಿದೆ. ಧನಂಜಯ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ’ ಎನ್ನುವುದು ನಟಿ ಅದಿತಿ ಪ್ರಭುದೇವ.
ಈ ಚಿತ್ರವನ್ನು ಶ್ರೀಹರಿ ನಿರ್ಮಿಸಿದ್ದಾರೆ. “ನಾನು ಮೂಲತಃ ಚಿತ್ರೋದ್ಯಮಿ ಅಲ್ಲ. ನಮ್ಮದೇ ಬೇರೆ ಉದ್ಯಮ ಇದೆ. ಆದರೆ ನನಗೆ ಇಪ್ಪತ್ತು ವರ್ಷಗಳ ಹಿಂದೆ ಚಿತ್ರದಲ್ಲಿ ಅಭಿನಯಿಸುವ ಆಸೆಯಿತ್ತು. ಅದು ಆಗಲಿಲ್ಲ. ಈಗ ನಿರ್ಮಾಪಕನಾಗಿದ್ದೇನೆ. ಡಿಸೆಂಬರ್ 30 ನಮ್ಮ ಚಿತ್ರ ತೆರೆಗೆ ಬರುತ್ತಿದೆ’ ಎಂದರು.
ಚಿತ್ರದಲ್ಲಿ ನಟಿಸಿರುವ ಯಶ್ ಶೆಟ್ಟಿ, ರುಶಿಕಾ, ದಿವ್ಯ, ಪ್ರಾಣ್ಯ, ಸಂತು, ಸಂಕಲನಕಾರ ಹರೀಶ್ ಕೊಮ್ಮೆ ಮುಂತಾದವರು ಚಿತ್ರದ ಬಗ್ಗೆ ಮಾತನಾಡಿದರು. ಕಾರ್ತಿಕ್ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ನೀಡಿದ್ದಾರೆ.