Advertisement

ಅಂದು ಸಿನಿಮಾ ಕಲಾವಿದ ಇಂದು ಆಯುರ್ವೇದ ಪಂಡಿತ

05:46 PM Nov 01, 2019 | Suhan S |

ಹುಳಿಯಾರು: ಕಂದಿಕೆರೆ ನಾಟಕದ ನಂಜಪ್ಪ ಮನೆಯಿಂದ ಹೊರಹೊಮ್ಮಿದ ಅಪ್ರತಿಮ ರಂಗ ಪ್ರತಿಭೆ ಹುಳಿಯಾರ್‌ ಮಂಜು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದೆ. ನಿಜನಾಮ ಕೆ.ಆರ್‌. ಬಸವರಾಜ ಪಂಡಿತ್‌ ಆಗಿದ್ದರೂ ರಂಗಭೂಮಿ ಹಾಗೂ ಸಿನಿಮಾ ರಂಗದಲ್ಲಿ ಹುಳಿಯಾರ್‌ ಮಂಜು ಎಂದೇ ಚಿರಪರಿಚಿತ. ಹೆಸರು ಬದಲಾವಣೆ ಹಿಂದೆ ತಂದೆ ಶಿಕ್ಷಕ ಕೆ.ಎನ್‌. ರುದ್ರಯ್ಯ ಹಾಗೂ ತಾಯಿ ಲಿಂಗಮ್ಮ ಪಾತ್ರ ಮಹತ್ತರವಾದದ್ದು, ತಾತ ನಂಜಪ್ಪರೊಂದಿಗಿನ ರಂಗಭೂಮಿ ಒಡನಾಟ ರಂಗಭೂಮಿ ಆಕರ್ಷಿಸಿತ್ತು.

Advertisement

ಆದರೆಹೆತ್ತವರಿಗೆ ಮಗ ಬಣ್ಣ ಹಚ್ಚುವುದು ಇಷ್ಟವಿರಲಿಲ್ಲ. ರಂಗಕರ್ಮಿಗಳ ಕಷ್ಟ ಬಲ್ಲವರಾಗಿದ್ದರಿಂದ ಮಗ ಕಷ್ಟ ಪಡದಿರಲಿ ಎಂಬ ಕಾಳಜಿ ಅವರಲ್ಲಿತ್ತು. ಆದರೆ ಹೆತ್ತವರು ಎಷ್ಟೇ ತಡೆದರೂ ಬಸವರಾಜು ಬದಲು ಹುಳಿಯಾರ್‌ ಮಂಜುಆಗಿ ಕದ್ದು ಮುಚ್ಚಿ ರಂಗಭೂಮಿ ಸಖ್ಯ ಬೆಳೆಸಿಕೊಂಡಿದ್ದರು. ತಾವೇ ನಾಟಕ ರಚಿಸುವ, ಗೆಳೆಯರಿಗೆ ನಾಟಕ ಕಲಿಸುವ, ಅಭಿನಯಿಸುವ ತ್ರಿಪಾತ್ರಧಾರಿ ಯಾಗಿದ್ದರು. ಈ ಆಸಕ್ತಿ ಇವರಿಗೆ 17 ವರ್ಷಕ್ಕೆ ಗುಬ್ಬಿ ಕಂಪನಿ ಸೇರಲು ಪ್ರೇರೇಪಿಸಿತು. ಎಡೆಯೂರು ಸಿದ್ಧಲಿಂಗ ಮಹಾತ್ಮೆ, ಲವಕುಶ, ಸದಾರಮೆ ನಾಟಕಗಳಲ್ಲಿ ಅಭಿನಯಿಸಿದರು.

ನಂತರ ಗುಬ್ಬಿ ವೀರಣ್ಣ ಪುತ್ರಿ ಮಾಲತಮ್ಮ ಸಹಕಾರದಿಂದ 1971ರಲ್ಲಿ “ಮನೆ ಬೆಳಕು’ ಚಿತ್ರದಲ್ಲಿ ಸಹನಟನಾಗಿ ಸಿನಿಮಾ ಕ್ಷೇತ್ರಕ್ಕೆ ಧುಮುಕಿದರು. ಅಲ್ಲಿ ಹುಣಸೂರು ಕೃಷ್ಣಮೂರ್ತಿ, ಜಿ.ವಿ. ಐಯ್ಯರ್‌, ವೈ.ಆರ್‌. ಸ್ವಾಮಿ, ಪುಟ್ಟಣ್ಣ ಕಣಗಾಲ್‌, ಸಿದ್ದಲಿಂಗಯ್ಯ, ವಿಜಯ್‌ರಂತಹ ದಿಗ್ಗಜರ ಗರಡಿಯಲ್ಲಿ ಪಳಗಿದರು. ಮನೆಬೆಳಕು, ತಾಯಿಗಿಂತ ದೇವರಿಲ್ಲ, ಆಟೋ ರಾಜ, ಅನುಪಮ, ಮಯೂರ, ಬಬ್ರುವಾಹನ ಹೀಗೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹನಟ ಹಾಗೂ ಸಹನಿರ್ದೇಶಕನಾಗಿ ಛಾಪು ಮೂಡಿಸಿದರು.

ಹೊಸದುರ್ಗದ ಜಮೀನಾªರ್‌ ನಂಜಪ್ಪ ಪುತ್ರಿ ರಾಜಮ್ಮ ಅವರನ್ನು 1981ರಲ್ಲಿ ಕೈ ಹಿಡಿದ ನಂತರ 20 ವರ್ಷ ಸಿನಿಮಾ ರಂಗದ ನಂಟು ಬಿಟ್ಟು ತಂದೆ ಜೊತೆಗೆ ಆಯುರ್ವೇದವೈದ್ಯಕೀಯ ಸೇವೆ ಆರಂಭಿಸಿದರು. ತಂದೆ ನಿಧನದ ನಂತರ ಹುಳಿಯಾರಿನಲ್ಲಿ ಆರೋಗ್ಯ ಮಂದಿರ ಸ್ಥಾಪಿಸಿ ಗಿಡಮೂಲಿಕೆ ಗಳ ಪರಿಚಯ, ಉಪಯೋಗದ ಅರಿವು ಮೂಡಿಸುತ್ತಿದ್ದಾರೆ.

ವಿವಿಧ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ತೆರಳಿ ಔಷಧ ಸಸ್ಯಗಳ ಪರಿಚಯದ ಕಾರ್ಯಾಗಾರ ನಡೆಸುತ್ತಾರೆ. ಇವರ ಸೇವೆ ಗುರುತಿಸಿ ಪ್ರಶಸ್ತಿ, ಸನ್ಮಾನ ಸಿಕ್ಕಿದೆ. ಪ್ರಸ್ತುತ ಹುಳಿಯಾರಿನಲ್ಲಿ ವಾಸವಾಗಿರುವ ಇವರು ವಿವಿಧ ಸಂಘ-ಸಂಸ್ಥೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

Advertisement

 

-ಎಚ್‌.ಬಿ. ಕಿರಣ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next