Advertisement
ವಿಯೆಟ್ನಾಂನಲ್ಲಿ ಮರ ಕಡಿದು ನಿರ್ದಿಷ್ಟ ಎತ್ತರದ ಕಂಬ ಮಾಡಿ ಅದನ್ನು ನೆಲದಲ್ಲಿ ಹೂತು ಕರಿಮೆಣಸು ಕೃಷಿ ಪೂರ್ಣ ವೈಜ್ಞಾನಿಕ ಕ್ರಮದಲ್ಲಿ ಮಾಡುತ್ತಾರೆ. ಇಲ್ಲಿ ಇನ್ನೂ ವಿಶಿಷ್ಟ ಎನ್ನುವಂತೆ ಅನುಪಯುಕ್ತ ಸಿಮೆಂಟ್ ಕಂಬಗಳನ್ನು ಬಳಸಿದ್ದಾರೆ. ಕಂಬಕ್ಕೆ 5 ಅಡಿಗಳಷ್ಟು ಎತ್ತರಕ್ಕೆ ನೆಟ್ ಬೇಲಿ ಸುತ್ತಿ, ಅದರ ಒಳಗೆ ತೆಂಗಿನ ಸಿಪ್ಪೆಗಳ ಹುಡಿ ತುಂಬಿಸಿದ್ದಾರೆ. ಕಂಬದ ಬುಡದಲ್ಲಿ ಬಳ್ಳಿಗಳನ್ನು ನೆಟ್ಟು ಹಬ್ಬಿಸಿದ್ದಾರೆ.
ಕರಿಮೆಣಸಿನ ಬಳ್ಳಿಯನ್ನು ನೆಲದಲ್ಲಿ ನೆಟ್ಟು ಯಾವುದೇ ಮರಕ್ಕೆ ಹಬ್ಬಿಸುವುದು ರೂಢಿಗತ ಕ್ರಮ. ಇದು ವರ್ಷಕ್ಕೆ 2ಅಡಿಗಳಷ್ಟು ಎತ್ತರಕ್ಕೆ ಬೆಳೆಯಬಹುದು. ವಿಯೆಟ್ನಾಂ ಮಾದರಿಯಲ್ಲಿ ಸುಮಾರು 5 ಅಡಿಗಳಷ್ಟು ಎತ್ತರಕ್ಕೆ ಕೇವಲ 6 ತಿಂಗಳ ಅವಧಿಯಲ್ಲಿ ಬೆಳೆದಿರುವುದು ವಿಶೇಷತೆ.
Related Articles
Advertisement
ಅಡಿಕೆ, ತೆಂಗು ಮತ್ತು ಹೊರಸಿಪ್ಪೆ ದಪ್ಪಗಿರುವ ಮರಗಳಿಗೆ ಕರಿಮೆಣಸು ಬಳ್ಳಿ ಶೀಘ್ರವಾಗಿ ಸುತ್ತಿಕೊಂಡು ಬೆಳೆಯುತ್ತದೆ. ಅದೇ ರೀತಿಯಾಗಿ ವಿಯೆಟ್ನಾಂ ಮಾದರಿಯಲ್ಲಿ ಕರಿಮೆಣಸಿನ ಪ್ರತೀ ಅಂತರದ ಬೇರಿಗೆ ಸೂಕ್ತವಾದ ನೀರಿನ ಅಂಶ ಮತ್ತು ಪೌಷ್ಟಿಕಾಂಶ ನೆಲದಿಂದ ಸಿಗುವಷ್ಟೆ ಸುಲಭದಲ್ಲಿ ಸಿಗುವುದರಿಂದ ಬಳ್ಳಿ ಶೀಘ್ರವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಕರಿಮೆಣಸು ಕಾಡುತ್ಪತ್ತಿಯಾಗಿದ್ದು, ಬೇಸಗೆಯಲ್ಲಿ ನೀರು ಕೊಡದಿದ್ದರೂ ಬೆಳೆಯುತ್ತದೆ. ತೀರಾ ಅಲ್ಪ ಪ್ರಮಾಣದಲ್ಲಿ, ಕೆಲವೇ ಲೀಟರ್ ನೀರು ನೀಡುವ ಮೂಲಕ ಈ ಮಾದರಿಯಲ್ಲಿ ಗಿಡವನ್ನು ಎಂತಹ ಕಾಡುಗುಡ್ಡದಲ್ಲಿಯೂ ಬೆಳೆಸಬಹುದು ಎನ್ನುತ್ತಾರೆ ಪಿಯೂಸ್ ಎಲ್. ರೋಡ್ರಿಗಸ್.
ಹೆಚ್ಚು ಫಸಲುಪ್ರಗತಿಪರ ಕೃಷಿಕರಿಗೆ ವಿಯೆಟ್ನಾಂ ಮಾದರಿ ಪರಿಚಯಿಸಿದ್ದೇನೆ. ಕೈಗಾರಿಕ ಮಾದರಿಯಲ್ಲಿ ಈ ಕೃಷಿ ಮಾಡಿದರೆ ಅಡಿಕೆಗಿಂತ ದುಪ್ಪಟ್ಟು ಫಸಲನ್ನು ಅಷ್ಟೇ ಜಮೀನಿನಲ್ಲಿ ಕಡಿಮೆ ವೆಚ್ಚದಲ್ಲಿ ಪಡೆಯಬಹುದು. ವಿಯೆಟ್ನಾಂ ಕರಿಮೆಣಸು ಗುಣಮಟ್ಟಕ್ಕೂ ಹೆಸರಾಗಿದೆ.
- ಪಿಯೂಸ್ ಎಲ್. ರೋಡ್ರಿಗಸ್
ಪ್ರಗತಿಪರ ಕೃಷಿಕರು