Advertisement

ವಲಸೆ ಹಕ್ಕಿಗಳ ಬೇಟೆಗಾರರೇ ಈಗ ಪಕ್ಷಿ ಸಂಕುಲದ ರಕ್ಷಕರು…

05:20 PM Dec 08, 2021 | Team Udayavani |

ರಮೇಶ್‌ ಬಿ.

Advertisement

ಅದು ಚಿಲಿಕಾ ಸರೋವರ. ಒಡಿಶಾದಲ್ಲಿರುವ ಈ ವಿಶಾಲ ಸರೋವರದ ದಡದಲ್ಲಿ ಅನೇಕ ಗ್ರಾಮಗಳಿವೆ. ಇಲ್ಲಿಗೆ ಪ್ರತಿವರ್ಷ ನೂರಾರು ಪ್ರಭೇದಗಳ ಸಾವಿರಾರು ಹಕ್ಕಿಗಳು ವಲಸೆ ಬರುತ್ತವೆ. ಕೆಲವು ವರ್ಷಗಳ ಹಿಂದಿನವೆರೆಗೆ ಇಲ್ಲಿಗೆ ವಲಸೆ ಬರುವ ಹಕ್ಕಿಗಳನ್ನು ಗ್ರಾಮಸ್ಥರು ಬೇಟೆಯಾಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅಂದಿನ ಭಕ್ಷಕರೆ ಇಂದಿನ ರಕ್ಷಕರಾಗಿದ್ದಾರೆ. ಹೌದು, ಗ್ರಾಮಸ್ಥರು ಈಗ ಹಕ್ಕಿಗಳ ಸಂರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಅದು ಹೇಗೆ?ಅವರ ಮನಃ ಪರಿವರ್ತನೆ ಹೇಗಾಯಿತು ಎನ್ನುವುದ ವಿವರ ಇಲ್ಲಿದೆ.

ಪುರಿ, ಕುರಾ ಮತ್ತು ಗಂಜಮ್‌ ಜಿಲ್ಲೆಗಳಲ್ಲಿ ಆವರಿಸಿರುವ ಚಿಲಿಕಾ ಸರೋವರ ಪ್ರಪಂಚದ ಬೃಹತ್‌ ಉಪ್ಪು ನೀರಿನ ಸರೋವರಗಳ ಪೈಕಿ ಒಂದು. ಇದು ಅನೇಕ ಅಪರೂಪದ ಜೀವಿ, ಸಸ್ಯ ವರ್ಗಗಳ ಆವಾಸ ಸ್ಥಾನವೂ ಹೌದು. ಇದರ ದಡದಲ್ಲಿ ಸುಮಾರು 132 ಗ್ರಾಮಗಳಲ್ಲಿ ಲಕ್ಷಾಂತರ ಮಂದಿ ವಾಸಿಸುತ್ತಿದ್ದಾರೆ. ಇಲ್ಲಿನ ಮತ್ತೂಂದು ವಿಶೇಷತೆ ಎಂದರೆ ವಲಸೆ ಹಕ್ಕಿಗಳು.

ಚಳಿಗಾಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ 160ಕ್ಕೂ ಅಧಿಕ ಪ್ರಬೇಧಗಳ ಹಕ್ಕಿಗಳು ವಲಸೆ ಬಂದು ಈ ಸರೋವರದ ಆಸುಪಾಸಿನಲ್ಲಿ ವಾಸಿಸುತ್ತವೆ. ಇದೇ ಕಾರಣಕ್ಕೆ ನೂರಾರು ಪ್ರವಾಸಿಗರು, ಛಾಯಾಚಿತ್ರ ಗ್ರಾಹಕರು, ಪಕ್ಷಿಗಳ ಬಗ್ಗೆ ಅಧ್ಯಯನ ನಿರತ ಸಂಶೋಧಕರು ಇಲ್ಲಿ ಭೇಟಿ ನೀಡುತ್ತಿರುತ್ತಾರೆ. ಸೈಬೇರಿಯಾ, ರಷ್ಯಾ, ಮಂಗೋಲಿಯಾ, ಲಡಾಕ್‌, ಹಿಮಾಲಯ ಮುಂತಾದ ಕಡೆಗಳ ಪಕ್ಷಿಗಳು ಇಲ್ಲಿನ ಅತಿಥಿಗಳು. ಸುಮಾರು 12 ಸಾವಿರ ಕಿ.ಮೀ.ಗಳಿಂತಲೂ ಅಧಿಕ ದೂರ ಪ್ರಯಾಣಿಸಿ ಕೆಲವೊಂದು ಹಕ್ಕಿಗಳು ಇಲ್ಲಿಗೆ ಆಗಮಿಸುತ್ತವೆ. ಹೀಗೆ ಚಳಿಗಾಲ ಈ ಪ್ರದೇಶ ಹಕ್ಕಿಗಳ ಕಲರವಗಳಿಂದ ಕೂಡಿರುತ್ತದೆ. ಇಂತಹ ಪ್ರದೇಶಗಳ ಪೈಕಿ ಮಂಗಳಜೋಡಿಯೂ ಒಂದು.

Advertisement

ಈ ವಿಶೇಷ ಅತಿಥಿಗಳ ಪ್ರಾಧಾನ್ಯತೆ ಅರಿಯದ ಸ್ಥಳೀಯರು ಕೆಲವು ವರ್ಷಗಳ ಹಿಂದದಿನವರೆಗೆ ಇವುಗಳನ್ನು ಬೇಟೆಯಾಡುತ್ತಿದ್ದರು. ರಾತ್ರಿಯಾಗುತ್ತಿದ್ದಂತೆ ಹಕ್ಕಿಗಳ ಮೇಲೆ ದಾಳಿ ಮಾಡಿ ಅವುಗಳ ಮಾಂಸಗಳನ್ನು ಮಾರಾಟ ಮಾಡಲಾಗುತ್ತಿತ್ತು. ಸ್ಥಳೀಯ ಮಾರುಕಟ್ಟೆಯಲ್ಲಿ ಈ ಹಕ್ಕಿಗಳ ಮಾಂಸಗಳಿಗೂ ಭರ್ಜರಿ ಬೇಡಿಕೆ ಇತ್ತು. 20 ರೂ.ಯಿಂದ ಹಿಡಿದು 60 ರೂ.ವರೆಗೂ ಹಕ್ಕಿಗಳ ಮಾಂಸ ಬಿಕರಿಯಾಗುತ್ತಿದ್ದವು. ಈ ಬೇಟೆ ಎಷ್ಟು ಅವ್ಯಾಹತವಾಗಿ ನಡೆಯುತ್ತಿತ್ತು ಎಂದರೆ 90ರ ದಶಕದಲ್ಲಿ ಒಬ್ಬ ನುರಿತ ಬೇಟೆಗಾರ ವರ್ಷದಲ್ಲಿ 10 ಸಾವಿರ ರೂ.ಯಿಂದ ಹಿಡಿದು 40 ಸಾವಿರ ರೂ.ವರೆಗೂ ಸಂಪಾದಿಸುತ್ತಿದ್ದ!

ಬದಲಾವಣೆಯ ಗಾಳಿ
ಪಕ್ಷಿಗಳ ನಿರಂತರ ಬೇಟೆಯನ್ನು ಗಮನಿಸುತ್ತಿದ್ದ ವೈಲ್ಡ್‌ ಒರಿಸ್ಸಾ ಎನ್ನುವ ಸರಕಾರೇತರ ಸಂಸ್ಥೆ 1997ರಲ್ಲಿ ಈ ಹಿಂಸಾ ಪ್ರವೃತ್ತಿ ಕೊನೆಗಾಣಿಸುವ ಉದ್ದೇಶದಿಂದ ಯೋಜನೆಯನ್ನು ಹುಟ್ಟು ಹಾಕಿತು. ವೈಲ್ಡ್‌ ಒರಿಸ್ಸಾದ ನಂದಕಿಶೋರ್‌ ಭುಜಬಲ್‌ ಗ್ರಾಮಸ್ಥರ ಮನವೊಲಿಕೆ ಮುಂದಾದರು. ಗ್ರಾಮಸ್ಥರೊಂದಿಗೆ ಬರೆತು ಅವರ ಕಷ್ಟ ಸುಖಗಳಿಗೆ ಕಿವಿಯಾಗಿ ಅವರ ವಿಶ್ವಾಸ ಗಳಿಸಿದರು. ಬಳಿಕ ನಿಧಾನವಾಗಿ ಹಕ್ಕಿಗಳ ಪ್ರಾಧಾನ್ಯತೆಗಳನ್ನು ಅವರಿಗೆ ಮನದಟ್ಟು ಮಾಡತೊಡಗಿದರು. ಜತೆಗೆ ಬೇಟೆ ಶಿಕ್ಷಾರ್ಹ ಎನ್ನುವುದನ್ನು ತಿಳಿಸಿದರು. ಮಾತ್ರವಲ್ಲ ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಿ ಅರಣ್ಯ ಸಂರಕ್ಷಕರಾಗಿಯೂ ಕೆಲಸ ಮಾಡಿದರು. ಕ್ರಮೇಣ ಗ್ರಾಮಸ್ಥರು ನಂದಕಿಶೊರ್‌ ಜತೆ ಸಹಕರಿಸತೊಡಗಿದರು.

2000ದಲ್ಲಿ ಪಕ್ಷಿ ಸಂರಕ್ಷಣ ಸಮಿತಿ ಶ್ರೀ ಶ್ರೀ ಮಹಾವೀರ್‌ ಪಕ್ಷಿ ಸುರಕ್ಷ ಸಮಿತಿ ರೂಪಿಸಲಾಯಿತು. ಇದರಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡ ನಂದಕಿಶೋರ್‌ ಗ್ರಾಮಸ್ಥರ ಮನಃಪರಿವರ್ತನೆಗೆ ಪ್ರಮುಖ ಕಾರಣಕರ್ತರಾದರು. 6-7 ಮಂದಿಯಿಂದ ಆರಂಭವಾದ ಸಮಿತಿಯ ಸದಸ್ಯರ ಸಂಖ್ಯೆ 25ಕ್ಕೆ ಏರಿತು. ಇತ್ತ ಚಿಲಿಕಾ ಡೆವಲಪ್‌ಮೆಂಟ್‌ ಅಥಾರಿಟಿಯೂ ಸಮಿತಿಯೊಂದಿಗೆ ಕೈ ಜೋಡಿಸಿತು. ಸದಸ್ಯರು ಗುಂಪುಗಳಾಗಿ ರಾತ್ರಿ ಊರಿನಲ್ಲಿ ಗಸ್ತು ತಿರುಗತೊಡಗಿದರು. ಹಕ್ಕಿಗಳು ಮೊಟ್ಟೆ ಇಡುವ ಋತುಗಳಲ್ಲಿ ಹೆಚ್ಚಿನ ಗಮನ ಹರಿಸತೊಡಗಿದರು. ಅರಣ್ಯ, ನೀರಾವರಿ ಇಲಾಖೆ, ಚಿಲಿಕಾ ಡೆವಲಪ್‌ಮೆಂಟ್‌ ಅಥಾರಿಟಿ ಮೊದಲಾದವುಗಳೊಂದಿಗೆ ಸಮಿತಿ ಕೈ ಜೋಡಿಸಿ ಕಾರ್ಯ ನಿರ್ವಹಿಸಿದ ಪರಿಣಾಮ ಉದ್ದೇಶ ಸಾಕಾರಗೊಳ್ಳತೊಡಗಿತು. ಮಾತ್ರವಲ್ಲ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲೂ ಅರಿವು ಮೂಡಿಸಲು ಆರಂಭಿಸಿದ ಮೇಲೆ ಇನ್ನೂ ಪರಿಣಾಮಕಾರಿಯಾಗ ತೊಡಗಿತು. ಹೀಗೆ ಮತ್ತೆ ಗ್ರಾಮಗಳಲ್ಲಿ ಹಕ್ಕಿಗಳ ರೆಕ್ಕೆಯ ಸದ್ದು, ಕಲರವ ಹಿಂದಿನಂತೆ ಕೇಳಿಸತೊಡಗಿತು. ಭಯದಿಂದ ಅಡಗಿಕೊಳ್ಳುತ್ತಿದ್ದ ಹಕ್ಕಿಗಳು ಕ್ರಮೇಣ ಗ್ರಾಮಸ್ಥರ ಬಳಿ ಬರತೊಡಗಿದವು.

ಇಕೋ ಟೂರಿಸಂ
ಕ್ರಮೇಣ ಸಂಶೋಧಕರು, ವಿಜ್ಞಾನಿಗಳು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡತೊಡಗಿದರು. ಹೀಗೆ ಇಕೋ(ಪರಿಸರ ಸ್ನೇಹಿ ಪ್ರವಾಸೋದ್ಯಮ) ಟೂರಿಸಂ ಕಾರಣದಿಂದ ಗ್ರಾಮಸ್ಥರಿಗೆ ಆದಾಯವೂ ಬರತೊಡಗಿತು.

ಹೊಸ ಆದಾಯ ಮಾರ್ಗ
ಹಿಂದೆ ಹಕ್ಕಿಗಳನ್ನು ಬೇಟೆಯಾಡಿ ಹಣ ಸಂಪಾದಿಸುತ್ತಿದ್ದ ಗ್ರಾಮಸ್ಥರು ಪರ್ಯಾಯ ಮಾರ್ಗದ ಮೂಲಕ ಆದಾಯ ಕಂಡು ಕೊಳ್ಳತೊಡಗಿದರು. ಪ್ರವಾಸಿಗರಿಗೆ ಗೈಡ್‌ ಆಗಿ, ಸಂಶೋಧಕರಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸತೊಡಗಿದರು. ಹೀಗೆ ಹಿಂದೆ ಹಕ್ಕಿಗಳನ್ನು ಬೇಟೆಯಾಡಿ ಹಣ ಸಂಪಾದಿಸುತ್ತಿದ್ದವರು ಈಗ ಸಂರಕ್ಷಿಸಿ ಹಣ ಸಂಪಾದಿಸತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next