Advertisement

ಅಂದು ಅಫ್ಘಾನ್ ಸರ್ಕಾರದಲ್ಲಿ ಸಚಿವ, ಇಂದು ಜರ್ಮನಿ ಬೀದಿಯಲ್ಲಿ ಪಿಜ್ಜಾ ಮಾರುತ್ತಿದ್ದಾರೆ!

03:15 PM Aug 25, 2021 | Team Udayavani |

ಬರ್ಲಿನ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡು ಅಟ್ಟಹಾಸ ಮುಂದುವರಿಸಿದ್ದು, ಇದರಿಂದ ಭೀತಿಗೊಳಗಾಗಿರುವ ಸಾವಿರಾರು ಮಂದಿ ಅಫ್ಘಾನ್ ನಾಗರಿಕರು ದೇಶದಿಂದ ಪಲಾಯನಗೊಂಡು ಸುರಕ್ಷಿತವಾಗಿರಲು ಬಯಸುತ್ತಿದ್ದಾರೆ. ಏತನ್ಮಧ್ಯೆ ಅಫ್ಘಾನಿಸ್ತಾನದಲ್ಲಿ ಸಚಿವರಾಗಿದ್ದ ಸೈಯದ್ ಅಹ್ಮದ್ ಶಾ ಸಾದತ್ ಈಗ ಜರ್ಮನಿಯ ಬೀದಿಯಲ್ಲಿ ಪಿಜ್ಜಾ ಮಾರಾಟ ಮಾಡುತ್ತಿರುವುದಾಗಿ ವರದಿಯೊಂದು ತಿಳಿಸಿದೆ.

Advertisement

ಇದನ್ನೂ ಓದಿ:ಮೈಸೂರು  ಪಾಲಿಕೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮೇಯರ್ ಪಟ್ಟ ಅಲಂಕರಿಸಿದ ಬಿಜೆಪಿ

ಅಫ್ಘಾನಿಸ್ತಾನದ ಮಾಹಿತಿ ಖಾತೆ ಮಾಜಿ ಸಚಿವ ಸೈಯದ್ ಅಹ್ಮದ್ ಸಾದತ್ ಜರ್ಮನಿಯ ಬೀದಿಯಲ್ಲಿ ಪಿಜ್ಜಾ ಮಾರಾಟ ಮಾಡುತ್ತಿದ್ದ ವೇಳೆ ಸ್ಥಳೀಯ ಪತ್ರಕರ್ತರೊಬ್ಬರ ಕ್ಯಾಮರಾದಲ್ಲಿ ಸೆರೆಯಾದ ನಂತರ ವಿಷಯ ಬಹಿರಂಗಗೊಂಡಿರುವುದಾಗಿ ವರದಿ ವಿವರಿಸಿದೆ.

ಪಿಜ್ಜಾ ಸರಬರಾರಜು ಮಾಡುತ್ತಿರುವ ಸೈಯದ್ ಅಹ್ಮದ್ ಶಾ ಅವರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ವೈರಲ್ ಆಗಿದೆ. ಅಲ್ ಜಝೀರಾ ಅರೇಬಿಯಾ ಮತ್ತು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿರುವ ಪೋಟೊಗಳಲ್ಲಿ ಸೈಯದ್ ಶಾ ಜರ್ಮನಿಯ ಲೀಪ್ ಜಿಗ್ ಪ್ರದೇಶದಲ್ಲಿ ಸೈಕಲ್ ಮೂಲಕ ಪಿಜ್ಜಾ ಸರಬರಾಜು ಮಾಡುತ್ತಿರುವುದು ಕಂಡುಬಂದಿದೆ.

Advertisement

ಜರ್ಮನಿಯ ಬೀದಿಯಲ್ಲಿ ಸೈಕಲ್ ಮೂಲಕ ಪಿಜ್ಜಾ ಸರಬರಾಜು ಮಾಡುತ್ತಿದ್ದ ಸೈಯದ್ ಅಹ್ಮದ್ ಶಾ ಅವರನ್ನು ಕಂಡ ಬಳಿಕ ಫೋಟೊ ತೆಗೆದಿರುವುದಾಗಿ ಜರ್ಮನ್ ಪತ್ರಕರ್ತ ಮಾಹಿತಿ ಹಂಚಿಕೊಂಡಿದ್ದಾರೆ. ಪತ್ರಕರ್ತ ಜೋಸಾ ಅವರು ಟ್ವೀಟ್ ನಲ್ಲಿ ತಿಳಿಸಿರುವಂತೆ, ಕೆಲವು ದಿನಗಳ ಹಿಂದೆ ನಾನು ಈ ವ್ಯಕ್ತಿಯನ್ನು ಭೇಟಿಯಾದಾಗ, ತಾನು ಎರಡು ವರ್ಷಗಳ ಕಾಲ ಅಫ್ಘಾನಿಸ್ತಾನದ ಸಚಿವನಾಗಿದ್ದೆ ಎಂದು ತಿಳಿಸಿದ್ದರು. ಹಾಗಾದರೆ ನೀವು ಜರ್ಮನಿಯ ಲೀಪ್ ಜಿಗ್ ನಲ್ಲಿ ಏನು ಮಾಡುತ್ತಿದ್ದೀರಿ ಎಂದು ಕೇಳಿದೆ. ನಾನು ಇಲ್ಲಿ ಲೀಫೆರ್ನಾಂಡೊ ಫುಡ್ ಸರ್ವಿಸ್ ನಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದರು.

ಸೈಯದ್ ಅಹ್ಮದ್ ಶಾ ಸಾದತ್ ಅವರು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ನೇತೃತ್ವದ ಸರ್ಕಾರದಲ್ಲಿ 2018ರಲ್ಲಿ ಸಚಿವರಾಗಿದ್ದರು. ಎರಡು ವರ್ಷಗಳ ಕಾಲ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವರಾಗಿದ್ದ ಸೈಯದ್ 2020ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ 2020ರ ಡಿಸೆಂಬರ್ ನಲ್ಲಿ ಜರ್ಮನಿಗೆ ಆಗಮಿಸಿದ್ದರು ಎಂದು ಸ್ಕೈ ನ್ಯೂಸ್ ಅರೇಬಿಯಾ ವರದಿ ತಿಳಿಸಿದೆ.

ಸಾದತ್ ಅವರು ಆಕ್ಸ್ ಫರ್ಡ್ ಯೂನಿರ್ವಸಿಟಿಯಲ್ಲಿ ಸಂವಹನ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ನಲ್ಲಿ ಮಾಸ್ಟರ್ ಡಿಗ್ರಿ ಪದವಿ ಪಡೆದಿದ್ದಾರೆ. ಇದೀಗ ಅಫ್ಘಾನಿಸ್ತಾನ ತಾಲಿಬಾನ್ ವಶವಾದ ನಂತರ ಸಾದತ್ ಅಹ್ಮದ್ ಅವರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಹರಿದಾಡತೊಡಗಿದೆ ಎಂದು ವರದಿ ಹೇಳಿದೆ.

ಅಶ್ರಫ್ ಘನಿ ನೇತೃತ್ವದ ಸರ್ಕಾರ ಇಷ್ಟು ಶೀಘ್ರವಾಗಿ ಪತನಗೊಳ್ಳುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಸೈಯದ್ ಅಹ್ಮದ್ ಸಾದತ್ ಅಫ್ಘಾನಿಸ್ತಾನದಲ್ಲಿನ ಪ್ರಸ್ತುತ ಬೆಳವಣಿಗೆ ಕುರಿತು ಕೇಳಿದ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next