Advertisement
ಕೌಟುಂಬಿಕ, ಸಾಮಾಜಿಕ ಸಾಮರಸ್ಯ ಕಾಪಾಡುವಲ್ಲಿ ಹಬ್ಬಗಳ ಪಾತ್ರ ಪ್ರಮುಖವಾಗಿದೆ.
Related Articles
Advertisement
ಪ್ರಹ್ಲಾದನ ಮೊಮ್ಮಗ ಮಹಾಬಲಿ ಚಕ್ರವರ್ತಿ ರಾಜ್ಯಭಾರ ಮಾಡುತ್ತಿದ್ದ ಕಾಲದಲ್ಲಿ ಭೂಮಿ ಫಲವತ್ತತೆಯಿಂದ ಕೂಡಿತ್ತು. ಜಾನುವಾರುಗಳು ಸಮೃದ್ಧವಾಗಿದ್ದು, ಜನರು ಸುಖ ಸಂತೃಪ್ತಿಯಿಂದ ಇದ್ದರು. ಬಲಿಯ ಆಡಳಿತ ಮೂರು ಲೋಕಗಳಲ್ಲಿಯು ಹೆಸರು ಮಾಡಿತ್ತು. ಬರುಬರುತ್ತಾ ಮೂರು ಲೋಕಗಳನ್ನು ಜಯಿಸಿದ ಮಹಾಬಲಿಯನ್ನು ಕಂಡು ವಿಚಲಿತನಾದ ಇಂದ್ರ ಅಸುರ ಕುಲದವನಾದ ಈತನಿಂದ ಮುಂದೊಂದು ದಿನ ಹಾನಿಯಾಗಬಹುದೆಂದು ಮನಗಂಡು ವಿಷ್ಣು ದೇವನ ಮೊರೆ ಹೋಗುತ್ತಾನೆ. ಬಲಿಯನ್ನು ಪರೀಕ್ಷಿಸಲು ಸಾಕ್ಷಾತ್ ಮಹಾವಿಷ್ಣು ವಾಮನ ರೂಪ ತಾಳಿ ಧರೆಗೆ ಬರುತ್ತಾನೆ. ಮೂರು ಪಾದದಷ್ಟು ಸ್ಥಳವನ್ನು ದಾನವಾಗಿ ಕೇಳುತ್ತಾನೆ.
ಭೂಮಿ ಮತ್ತು ಆಕಾಶವನ್ನು ಅಳೆದು ಮೂರನೇ ಪಾದ ಎಲ್ಲಿಡಲಿ ಎಂದು ವಾಮನ ಕೇಳಿದಾಗ ಚಕ್ರವರ್ತಿಯು ಕೈ ಮುಗಿದು ಶಿರಬಾಗಿ ತೋರಿಸುತ್ತಾನೆ. ವಾಮನ ತನ್ನ ಮೂರನೇ ಪಾದವನ್ನು ಬಲಿ ಚಕ್ರವರ್ತಿಯ ತಲೆಯ ಮೇಲೆ ಇಡುತ್ತಿದ್ದಂತೆ ಆತ ಪಾತಾಳಕ್ಕೆ ಇಳಿಯುತ್ತಾನೆ. ಮಹಾವಿಷ್ಣು ದಾನಿಯಾದ ಚಕ್ರವರ್ತಿಗೆ ಅಂತಿಮವಾಗಿ ವರವನ್ನು ನೀಡುತ್ತಾನೆ. ಪ್ರತೀ ವರ್ಷ ತನ್ನ ನಾಡಿಗೆ ಬಂದು ಪ್ರಜೆಗಳನ್ನು ನೋಡುವಂತೆ ವರದಾನವಾಗಿರುತ್ತದೆ. ಈ ನೆನಪಿನ ಸಂಕೇತವಾಗಿ ಜನರು ವರ್ಷಕ್ಕೊಮ್ಮೆ ಮಹಾಬಲಿ ಚಕ್ರವರ್ತಿಯನ್ನು ಸಂತಸದಿಂದ ಬರ ಮಾಡಿಕೊಳ್ಳುತ್ತಾರೆ.
ಮಲಯಾಳಿಗಳು ಮಹಾಬಲಿಯ ಆಡಳಿತದ ನೆನಪಿನಲ್ಲಿ “ಓಣಂ’ ಆಚರಿಸಿದರೆ ತುಳು ನಾಡಿನಲ್ಲಿ ಹಾಗೂ ಕನ್ನಡಿಗರು “ದೀಪಾವಳಿ’ಯನ್ನು ಆಚರಿಸುತ್ತಾರೆ. ಬಲಿ ಪಾಡ್ಯ ಎಂಬ ಹೆಸರು ಈ ಕಾರಣದಿಂದಲೇ ಬಂದಿದೆ. ಇಲ್ಲಿ ಮಾವೇಲಿಯನ್ನು ಬಲೀಂದ್ರ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಒಬ್ಬನೇ ವ್ಯಕ್ತಿ ಜನರ ದೃಷ್ಟಿಕೋನ ಬದಲಾದಂತೆ ಅಸುರನಾಗಿಯೂ, ರಾಜ್ಯವಾಳುವ ಉತ್ತಮ ದೊರೆಯಾಗಿಯು ಕಂಡು ಬರುತ್ತಾನೆ. ಒಂದೇ ಹಬ್ಬವನ್ನು ಪ್ರಾದೇಶಿಕವಾಗಿ, ಜನಾಂಗಿಕವಾಗಿ, ಧಾರ್ಮಿಕವಾಗಿ ವಿಭಿನ್ನ ಮಾದರಿಯಲ್ಲಿ ಆಚರಿಸುತ್ತಾರೆ ಎಂಬುದಕ್ಕೆ ಓಣಂ ಹಾಗೂ ದೀಪಾವಳಿ ಉದಾಹರಣೆ. ಮಾತ್ರವಲ್ಲ ಅನುಕರಣೆ, ಫ್ಯಾಷನ್‌ನ ಗೀಳು, ಶ್ರೇಷ್ಠ ಕನಿಷ್ಠ ಮನೋಭಾವದಿಂದಲೂ ಹಬ್ಬಗಳು ಚೌಕಟ್ಟನ್ನು ಮೀರಿ ಸರ್ವತ್ರ ವ್ಯಾಪಿಸುವುದೂ ಇದೆ.
ಪೂಕ್ಕಳಂಓಣಂ ಹಬ್ಬದಂದು ಪೂಕ್ಕಳಂಗೆ ವಿಶೇಷ ಪ್ರಾಧಾನ್ಯತೆ. ಪೂಕ್ಕಳಂ ಎಂದರೆ ಹೂವಿನ ರಂಗೋಲಿ. ಓಣಂ ಹಬ್ಬದ ಹತ್ತು ದಿನಗಳಲ್ಲೂ ಗುಡ್ಡೆ ಕಾಡುಗಳಲ್ಲಿ ಸಿಗುವ ಬಗೆ ಬಗೆಯ ಹೂವನ್ನು ಆಯ್ದು ತಂದು ಮನೆಯ ಮುಂದೆ ರಂಗೋಲಿ ಹಾಕುತ್ತಾರೆ.ಬಳಿಯಲ್ಲಿ ದೀಪವನ್ನು ಉರಿಸಿ ಇಡಲಾಗುತ್ತದೆ. ಬಲಿ ಚಕ್ರವರ್ತಿ ಬರುವಾಗ ಆತನಿಗೆ ಸ್ವಾಗತವನ್ನು ಕೋರಲು ಈ ರೀತಿಯ ಸಜ್ಜು ಮಾಡಲಾಗುತ್ತದೆ. ರಂಗೋಲಿಗೆ ಆರಿಸಿದ ಹೂವುಗಳಲ್ಲಿ ತುಂಬೆ ಹೂವಿಗೆ ಹೆಚ್ಚು ಪ್ರಾಶಸ್ತ್ಯ. ಹಿಂದೆ ಕೇವಲ ಮನೆಯಲ್ಲಿ ಮಾತ್ರವೆ ಹಾಕುತ್ತಿದ್ದ ರಂಗೋಲಿಯು ಬರು ಬರುತ್ತಾ ಕಚೇರಿ, ಸಂಘ ಸಂಸ್ಥೆ, ಶಾಲಾ ಕಾಲೇಜು ಮುಂತಾದ ಕಡೆ ಓಣಂ ಹಬ್ಬದ ದಿನ ಸ್ಪರ್ಧೆಯ ಭಾಗವಾಗಿದೆ. ಮಾರುಕಟ್ಟೆಯ ದುಬಾರಿ ಹೂಗಳನ್ನು ತಂದು ರಂಗೋಲಿ ಹಾಕುತ್ತಾರೆ.ಭಕ್ತಿಯ ಜತೆ ಮನರಂಜನೆ ಬೆರೆತಾಗ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು ಹುಟ್ಟಿಕೊಂಡವು. ದೋಣಿ ಸ್ಪರ್ಧೆ, ಹುಲಿವೇಷ ಹಾಗೂ ಮಾವೇಲಿ ವೇಷದ ಮೆರವಣಿಗೆ, ಹಗ್ಗ ಜಗ್ಗಾಟ ಮೊದಲಾದ ಸ್ಪರ್ಧೆಗಳನ್ನೂ ಆಯೊಜಿಸಲಾಗುತ್ತದೆ. ಓಣಂ ಸದ್ಯ
ಓಣಂ ಹಬ್ಬದ ದಿನದಂದು ಮಾಡುವ ಔತಣ ಕೂಟವನ್ನು “ಓಣಂ ಸದ್ಯ’ ಎಂದು ಕರೆಯುತ್ತಾರೆ. “ಸಾಲ ಮಾಡಿಯಾದರೂ ಓಣಂ ಸದ್ಯ ಮಾಡಬೇಕು’ಎಂಬ ಮಾತು ಹಬ್ಬದಂದಿನ ಔತಣದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ರಸಂ, ಅವೀಲ್, ಕೂಟುಕ್ಕರಿ, ಕೂರ್ಮ,ಪತ್ಛಡಿ, ಕಿತ್ಛಡಿ, ಪುಳಿಶ್ಯೆರಿ,ಉಪ್ಪೇರಿ, ಪಪ್ಪಡ, ಶರ್ಕರಪೆರಟ್ಟಿ, ಪಾಲ್ ಪಾಯಸ, ಅಡೆ ಪಾಯಸ, ಕಡಲ ಪಾಯಸ ಹೀಗೆ ಶುದ್ಧ ಶಾಖಾಹಾರಿ ಶೈಲಿಯ ಭಕ್ಷ್ಯಗಳನ್ನೇ ಮಾಡುತ್ತಾರೆ. ಪರಂಪರಾಗತ ಶೈಲಿಯಂತೆ ನೆಲದಲ್ಲಿ ಸಾಲಾಗಿ ಕುಳಿತು ಬಾಳೆ ಎಲೆಯಲ್ಲಿ ಪದಾರ್ಥಗಳನ್ನು ಬಡಿಸಿ ಉಣಲಾಗುತ್ತದೆ. ಪ್ರತಿಯೊಂದು ಬಗೆಯ ಖಾದ್ಯಗಳಲ್ಲೂ ಆರೋಗ್ಯದ ಕಾಳಜಿ ಇದೆ. ಇತ್ತೀಚೆಗೆ ಕೆಲವು ವರ್ಷಗಳಿಂದ ಹೊಟೇಲ್ ಮೆನುವಿನಲ್ಲಿ ಓಣಂ ಸದ್ಯ ಎಂಬ ವಿಶೇಷ ಬಗೆ ಸೇರಿಕೊಂಡಿದೆ.