ಗಾಜಿಯಾಬಾದ್: ಒಂದು ಕಾಲದಲ್ಲಿ ಅಟ್ಲಾಸ್ ಸೈಕಲ್ಲಾ..? ಎಂದು ಕಣ್ಣರಳಿಸಿ ನೋಡುತ್ತಿದ್ದ ಅಟ್ಲಾಸ್ ಸೈಕಲ್‌ಗೆ ಈಗ ಗ್ರಹಗತಿ ಚೆನ್ನಾಗಿಲ್ಲ.
ವಿಶ್ವ ಬೈಸಿಕಲ್ ದಿನಾಚರಣೆಯಂದೇ (ಜೂ.3ರಂದು) ಸಾಹಿಬಾಬಾದ್‌ನಲ್ಲಿರುವ ಅದರ ಅತಿ ದೊಡ್ಡ ತಯಾರಿಕಾ ಘಟಕ ಮುಚ್ಚಿದ್ದು 700ಕ್ಕೂ ಹೆಚ್ಚು ಕಾರ್ಮಿಕರು ಬೀದಿ ಪಾಲಾಗಿದ್ದಾರೆ.
ಹಣಕಾಸು ಮುಗ್ಗಟ್ಟಿನಿಂದ ತಯಾರಿಕಾ ಘಟಕ ಮುಚ್ಚಿದೆ ಎಂದು ಹೇಳಲಾಗಿದೆ. ಆದರೆ ಕಾರ್ಮಿಕರಿಗೆ ಈ ಬಗ್ಗೆ ಯಾವುದೇ ನೋಟಿಸ್ ನೀಡಲಾಗಿರಲಿಲ್ಲ.
ಕೆಲಸಕ್ಕೆಂದು ಬಂದ ಕಾರ್ಮಿಕರಿಗೆ ಫ್ಯಾಕ್ಟರಿ ದ್ವಾರದಲ್ಲಿ ಅಳವಡಿಸಿದ ನೋಟಿಸ್‌ನಿಂದಲೇ ಫ್ಯಾಕ್ಟರಿ ಬಂದ್ ಆಗಿರುವ ವಿಚಾರ ತಿಳಿದಿದೆ. ಆದರೆ ಕಾರ್ಮಿಕರು ಇನ್ನೂ ಫ್ಯಾಕ್ಟರಿಗೆ ಬರುವಂತೆ ಸೂಚಿಸಲಾಗಿದೆ. ನಿತ್ಯ ಕಾರ್ಮಿಕರು ಸಹಿ ಮಾಡಬೇಕಿದ್ದು ಹಾಜರಾತಿ ಪಡೆಯಲಾಗುತ್ತಿದೆ. ಮುಂದೇನು ಎಂಬ ಬಗ್ಗೆ ಸ್ಪಷ್ಟವಾಗಿಲ್ಲ. ನಾವು ಆತಂಕಿತರಾಗಿದ್ದೇವೆ ಎಂದು ಕಾರ್ಮಿಕರು ಹೇಳಿದ್ದಾರೆ.
ಈ ಫ್ಯಾಕ್ಟರಿ ದೇಶದ ಅತಿ ಹಳೆಯ ಸೈಕಲ್ ತಯಾರಿಕೆ ಘಟಕಗಳಲ್ಲಿ ಒಂದಾಗಿದ್ದು, ಲಾಕ್‌ಡೌನ್ ಬಳಿಕವಂತೂ ತೀವ್ರ ಸಮಸ್ಯೆಗೀಡಾಗಿತ್ತು. ಇದೇ ವೇಳೆ, ಕೂಡಲೇ ಕೇಂದ್ರ ಸರಕಾರ ಸೈಕಲ್ ತಯಾರಕರು ಮತ್ತು ಬಿಡಿಭಾಗಗಳ ತಯಾರಕರ ನೆರವಿಗೆ ಬರಬೇಕೆಂದು ಬೈಸಿಕಲ್ ಡೀಲರ್ ಅಸೋಸಿಯೇಷನ್‌ನ ಅಚ್ಚು ರಾಮ್ ಗುಪ್ತಾ ಅವರು ಹೇಳಿದ್ದಾರೆ.
ಫ್ಯಾಕ್ಟರಿಗಳಿಂದ ತಯಾರಾದ ವಸ್ತುಗಳು ಮಾರಾಟವಾಗುತ್ತಿಲ್ಲ. ಇದರಿಂದ ಬ್ಯಾಂಕ್‌ಗಳಿಂದ ಪಡೆದ ಸಾಲಗಳನ್ನು ಕಟ್ಟಲಾರದ ಸ್ಥಿತಿಯಲ್ಲಿದ್ದು ಸೈಕಲ್ ಉತ್ಪಾದನೆ-ಮಾರಾಟ ಕಷ್ಟದ ಸ್ಥಿತಿಯಲ್ಲಿದೆ ಎಂದು ಹೇಳಿದ್ದಾರೆ.