Advertisement
ಉಡುಪಿ ಜಿಲ್ಲೆಯಿಂದ ಕಾಂಗ್ರೆಸ್‌ನ ಒಬ್ಬ ಸದಸ್ಯನೂ ಗೆದ್ದಿಲ್ಲ. ದಕ್ಷಿಣ ಕನ್ನಡದಲ್ಲಿ ಪುತ್ತೂರಿನಿಂದ ಅಶೋಕ್ ಕುಮಾರ್ ರೈ ಹಾಗೂ ಮಂಗಳೂರಿನಿಂದ ಯು.ಟಿ. ಖಾದರ್ ಗೆದ್ದಿದ್ದಾರೆ. ಖಾದರ್ ಅವರಿಗೆ ಮಂತ್ರಿ ಸ್ಥಾನ ಲಭ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಆದಾರೆಂಬ ನಿರೀಕ್ಷೆಯಿತ್ತು. ಉಳಿದಂತೆ ಉಡುಪಿಗೆ ಬೇರೆಯವರು ಉಸ್ತುವಾರಿ ಬರಬಹುದೆಂಬ ಲೆಕ್ಕಾಚಾರವಿತ್ತು. ಆದರೆ ಖಾದರ್ ಅವರನ್ನು ಸ್ಪೀಕರ್ ಆಗಿ ಮಾಡಲಾಗಿದೆ.
Related Articles
Advertisement
ಸವಾಲಿದೆಉಭಯ ಜಿಲ್ಲೆಗಳ 13 ಕ್ಷೇತ್ರಗಳ ಪೈಕಿ 11ರಲ್ಲಿ ಬಿಜೆಪಿ ಶಾಸಕರೇ ಇದ್ದು, ಯಾರೇ ಉಸ್ತುವಾರಿ ಸಚಿವರಾದರೂ ಹೊಂದಾಣಿಕೆ ಹೆಚ್ಚು ಅಗತ್ಯವಿರುತ್ತದೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಶಾಸಕರು ಹಾಗೂ ಸಚಿವರು ಒಮ್ಮತದಿಂದಲೇ ಕೆಲವು ನಿರ್ಧಾರ ಕೈಗೊಳ್ಳ ಬೇಕಾದ ಅನಿವಾರ್ಯವೂ ಉದ್ಭವಿಸಲಿದೆ. ಇದರ ಮಧ್ಯೆ ಶಾಸಕರು, ಉಸ್ತುವಾರಿ ಸಚಿವರ ಭಿನ್ನ ಒತ್ತಡವನ್ನು ಅಧಿಕಾರಿಗಳು ಯಾವ ರೀತಿ ನಿಭಾಯಿಸಬಲ್ಲರು ಎಂಬುದೂ ಉಭಯ ಜಿಲ್ಲೆಗಳ ಪ್ರಗತಿಯನ್ನು ನಿರ್ಧರಿಸಲಿದೆ. 1997ರ ಬಳಿಕದ ಜಿಲ್ಲಾ ಉಸ್ತುವಾರಿಗಳು
1997ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ವಿಭಾಗಗೊಂಡು ಉಡುಪಿ ಜಿಲ್ಲೆ ರಚನೆಯಾಗಿತ್ತು. ಬಳಿಕ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದವರ ಹೆಸರು ಇಂತಿದೆ: ಉಡುಪಿ ಜಿಲ್ಲೆ: ಜಯಪ್ರಕಾಶ್ ಹೆಗ್ಡೆ, ರೋಷನ್ ಬೇಗ್, ಮೋಟಮ್ಮ, ಸುಮಾ ವಸಂತ್, ವಸಂತ್ ಸಾಲ್ಯಾನ್, ಡಿ.ಟಿ. ಜಯಕುಮಾರ್, ಡಾ| ವಿ.ಎಸ್. ಆಚಾರ್ಯ, ಕೋಟ ಶ್ರೀನಿವಾಸ ಪೂಜಾರಿ, ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಜಯ ಮಾಲಾ, ಕೋಟ ಶ್ರೀನಿವಾಸ ಪೂಜಾರಿ, ಬಸವರಾಜ ಬೊಮ್ಮಾಯಿ, ಎಸ್. ಅಂಗಾರ ದಕ್ಷಿಣ ಕನ್ನಡ ಜಿಲ್ಲೆ: ಬಿ.ಎ. ಮೊದಿನ್, ಬಿ. ರಮಾನಾಥ ರೈ, ಬಿ. ನಾಗರಾಜ ಶೆಟ್ಟಿ, ಬಿ. ರಮಾನಾಥ ರೈ (2ನೇ ಬಾರಿ), ಜಬ್ಟಾರ್‌ಖಾನ್ ಹೊನ್ನಳ್ಳಿ, ಕೃಷ್ಣ ಪಾಲೆಮಾರ್, ಯು.ಟಿ. ಖಾದರ್, ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ವಿ. ಸುನಿಲ್ ಕುಮಾರ್. ಪರಿಷತ್, ನಿಗಮ ಮಂಡಳಿಗೆ ಪ್ರಯತ್ನ
ಇದೇ ಸಂದರ್ಭದಲ್ಲಿ ಕರಾವಳಿಯ ಕಾಂಗ್ರೆಸ್‌ನ ಹಿರಿಯ ಮುತ್ಸದ್ಧಿಗಳು ವಿಧಾನ ಪರಿಷತ್/ ನಿಗಮ ಮಂಡಳಿಯ ಸ್ಥಾನದತ್ತಲೂ ಗಮನ ಹರಿಸಿದ್ದಾರೆ. ಬೈಂದೂರಿನಲ್ಲಿ ಸ್ಪರ್ಧಿಸಿದ್ದ ಮಾಜಿ ಶಾಸಕ ಗೋಪಾಲ ಪೂಜಾರಿ, ಕಾಪುವಿನಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮತ್ತು ಬಂಟ್ವಾಳದಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ರಮಾನಾಥ ರೈ ಅವರು ಈ ಬಾರಿ ಆಯ್ಕೆಯಾಗಿಲ್ಲ. ಇವರಲ್ಲಿ ಸೊರಕೆಯವರು ವಿಧಾನ ಪರಿಷತ್‌ಗೆ ಪ್ರಯತ್ನ ಮಾಡುತ್ತಿಲ್ಲ ಎಂದು ಸ್ವತಃ “ಉದಯವಾಣಿ’ಗೆ ಖಚಿಪಡಿಸಿದ್ದಾರೆ. ಗೋಪಾಲ ಪೂಜಾರಿ ಅವರು ಪ್ರಯತ್ನಿಸುತ್ತಿರುವುದನ್ನು ಖಚಿತಪಡಿಸಿದ್ದರೆ, ರಮಾನಾಥ ರೈ ಅವರಿಗೆ ಸೂಕ್ತ ಸ್ಥಾನಮಾನ ಕೊಡಬೇಕೆಂಬ ಆಗ್ರಹ ಅವರ ಬೆಂಬಲಿಗರದ್ದು. ಗೋಪಾಲ ಪೂಜಾರಿಯವರು ಬೈಂದೂರು ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಜಯ ಸಾಧಿಸಿದ್ದರೂ ಸಚಿವರಾಗಿಲ್ಲ. ಈಗಾಗಲೇ ಪಕ್ಷದ ವರಿಷ್ಠರಲ್ಲಿ ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಉಡುಪಿ ಜಿಲ್ಲೆಯಿಂದ ಕಾಂಗ್ರೆಸ್ ಅಭ್ಯರ್ಥಿಗಳು ಯಾರೂ ಜಯ ಸಾಧಿಸದ ಕಾರಣ ಗೋಪಾಲ ಪೂಜಾರಿಯವರನ್ನು ವಿಧಾನಪರಿಷತ್ ಸದಸ್ಯತ್ವಕ್ಕೆ ಪರಿಗಣಿಸಬಹುದು ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲೂ ಇದೆ ಎನ್ನಲಾಗಿದೆ. ಬಂಟ್ವಾಳದಿಂದ 6 ಬಾರಿ ಶಾಸಕರಾಗಿದ್ದ ರಮಾನಾಥ ರೈ ಸಚಿವರಾಗಿದ್ದರು. ಆದರೆ 7ನೇ ಬಾರಿ ಶಾಸಕರಾಗುವ ಪ್ರಯತ್ನ ಕೈಗೂಡಲಿಲ್ಲ. ಜಿಲ್ಲೆಯಲ್ಲಿ ತಮ್ಮದೇ ಛಾಪು ಹೊಂದಿರುವ ಅವರನ್ನು ಪಕ್ಷದ ವರಿಷ್ಠರು ಅವಗಣಿಸಲಾರರು ಎಂಬ ಅಭಿಪ್ರಾಯ ಅವರ ಬೆಂಬಲಿಗರದ್ದು. ಇದರೊಂದಿಗೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನಗಳೂ ಖಾಲಿ ಇವೆ. ಅವುಗಳಿಗೆ ಅಧ್ಯಕ್ಷರನ್ನು ನೇಮಿಸುವಾಗ ಕರಾವಳಿಯವರನ್ನು ಪರಿಗಣಿಸುವರೇ ಎಂಬುದನ್ನು ಕಾದು ನೋಡಬೇಕಿದೆ.