Advertisement

ದ್ವಿತೀಯ ಪ್ರಯತ್ನದಲ್ಲಿ ಕಪ್‌ ಗೆದ್ದ ಪಾಕ್‌

11:10 PM Oct 18, 2021 | Team Udayavani |

ಇಂಗ್ಲೆಂಡ್‌ ಆತಿಥ್ಯದಲ್ಲಿ ಸಾಗಿದ 2009ರ ದ್ವಿತೀಯ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆದ ತಂಡ ಪಾಕಿಸ್ಥಾನ. ಮೊದಲ ವಿಶ್ವಕಪ್‌ ಫೈನಲ್‌ನಲ್ಲಿ ಭಾರತದ ವಿರುದ್ಧ ಸೋತಿದ್ದ ಪಾಕಿಸ್ಥಾನಕ್ಕೆ ಈ ಸಲ ಅದೃಷ್ಟ ಕೈಕೊಡಲಿಲ್ಲ. ಅದು ಲಾರ್ಡ್ಸ್‌ ಫೈನಲ್‌ನಲ್ಲಿ ಶ್ರೀಲಂಕಾವನ್ನು 8 ವಿಕೆಟ್‌ಗಳಿಂದ ಮಣಿಸಿ ಅಧಿಕಾರಯುತವಾಗಿಯೇ ಕಪ್‌ ಎತ್ತಿತು.

Advertisement

ಪಾಕ್‌ ತಂಡದ ನಾಯಕತ್ವ ವಹಿ ಸಿದ್ದು ಯೂನಿಸ್‌ ಖಾನ್‌. ಟೆಸ್ಟ್‌ ಶೈಲಿಯ ಆಟಗಾರನಾದ ಯೂನಿಸ್‌ ನಾಯಕತ್ವದಲ್ಲೇ ಪಾಕ್‌ಗೆ ಮೊದಲ ಕಪ್‌ ಗೆಲ್ಲುವ ಅವಕಾಶ ಲಭಿಸಿದ್ದು ವಿಶೇಷ.

ಭಾರತದ ಕಳಪೆ ಸಾಧನೆ
ಈ ಕೂಟದಲ್ಲೂ 12 ತಂಡಗಳು ಪಾಲ್ಗೊಂಡಿದ್ದವು. “ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಭಾರತ ಎರಡೂ ಲೀಗ್‌ ಪಂದ್ಯದಲ್ಲಿ ಗೆಲುವು ಸಾಧಿಸಿತು. ಸೂಪರ್‌-8ರಲ್ಲಿ ಭಾರತ “ಇ’ ಗುಂಪಿನಲ್ಲಿ ಸ್ಥಾನ ಪಡೆಯಿತು. ಇಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಸೋಲನುಭವಿಸಿ ಕೂಟ ದಿಂದ ಹೊರಬಿತ್ತು. ಇದು ಟಿ20 ವಿಶ್ವಕಪ್‌ ಇತಿಹಾಸದಲ್ಲೇ ಭಾರತ ನೀಡಿದ ಅತ್ಯಂತ ಕಳಪೆ ಪ್ರದರ್ಶನ.

ಸೆಮಿಫೈನಲ್‌ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ಥಾನ, ವೆಸ್ಟ್‌ ಇಂಡೀಸ್‌ ವಿರುದ್ಧ ಶ್ರೀಲಂಕಾ ಗೆಲುವು ಸಾಧಿಸಿ ಫೈನಲ್‌ಗೆ ಏರಿದವು.

ಲಂಕೆಗೆ ಹೀನಾಯ ಸೋಲು
ಐತಿಹಾಸಿಕ ಲಾರ್ಡ್ಸ್ ನಲ್ಲಿ ನಡೆದ ಫೈನಲ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ 6 ವಿಕೆಟಿಗೆ ಕೇವಲ 138 ರನ್‌ ಗಳಿಸಿತು. ಕುಮಾರ ಸಂಗಕ್ಕರ ಏಕಾಂಗಿಯಾಗಿ ಹೋರಾಡಿ ಅಜೇಯ 64 ರನ್‌ ಗಳಿಸಿದರು. ಪಾಕಿಸ್ಥಾನ ಕೇವಲ 2 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ವನ್‌ಡೌನ್‌ನಲ್ಲಿ ಬಂದ ಶಾಹಿದ್‌ ಅಫ್ರಿದಿ ಅಜೇಯ 54 ರನ್‌ ಬಾರಿಸಿದರು.

Advertisement

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-6 ವಿಕೆಟಿಗೆ 138 (ಕುಮಾರ ಸಂಗಕ್ಕರ ಅಜೇಯ 64, ಏಂಜೆಲೊ ಮ್ಯಾಥ್ಯೂಸ್‌ 35, ಸನತ್‌ ಜಯಸೂರ್ಯ 17, ಅಬ್ದುಲ್‌ ರಜಾಕ್‌ 20ಕ್ಕೆ 3, ಅಫ್ರಿದಿ 20ಕ್ಕೆ 1). ಪಾಕಿಸ್ಥಾನ-18.4 ಓವರ್‌ಗಳಲ್ಲಿ 2 ವಿಕೆಟಿಗೆ 139 (ಶಾಹಿದ್‌ ಅಫ್ರಿದಿ ಅಜೇಯ 54, ಕಮ್ರಾನ್‌ ಅಕ್ಮಲ್‌ 37, ಮುರಳೀಧರನ್‌ 20ಕ್ಕೆ 1).

ಪಂದ್ಯಶ್ರೇಷ್ಠ: ಶಾಹಿದ್‌ ಅಫ್ರಿದಿ. ಸರಣಿಶ್ರೇಷ್ಠ: ತಿಲಕರತ್ನ ದಿಲ್ಶನ್‌.

Advertisement

Udayavani is now on Telegram. Click here to join our channel and stay updated with the latest news.

Next