Advertisement
12ನೇ ಶತಮಾನದಿಂದ ಹಿಡಿದು ಇದುವರೆಗೂ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ, ಸಮಾಜ ಧರ್ಮ, ಕಲೆ, ವಿಜ್ಞಾನ, ಸಂಸ್ಕಾರ, ವಚನತತ್ವ ಚಿಂತನೆಗಳ ಮೇಲೆ ಬಸವಣ್ಣನವರಿಂದ ಆದಷ್ಟು ಪ್ರಭಾವ ಈ ಭರತ ಖಂಡದಲ್ಲಿ ಇನ್ನೊಬ್ಬರಿಂದಾಗಿಲ್ಲ ಎಂಬುದು ಅಷ್ಟೇ ಸತ್ಯ. ಬಸವಣ್ಣನವರ ಕುರಿತು ನಡೆದಷ್ಟು ಅಧ್ಯಯನಗಳು, ಪುಸ್ತಕ ಮುದ್ರಣಗಳು ಇನ್ನೊಬ್ಬರ ಬಗೆಗೆ ನಡೆದಿಲ್ಲ. ದೇಶ, ಕಾಲ, ಮಿತಿಗಳನ್ನು ಮೀರಿ ಮುಂದುವರೆದಿರುವ ಬಸವಣ್ಣನವರ ವ್ಯಕ್ತಿತ್ವದ ವಿಶೇಷತೆ ಇದು. ಅಂತೆಯೇ ಯುಗ ಯುಗದ ಉತ್ಸಾಹ, ಯುಗ ಪುರುಷ ಬಸವಣ್ಣ ಎಂದು ಕರೆಯುತ್ತಾರೆ. ಇಂದಿಗೂ ಅವರ ವಚನಗಳನ್ನು ಓದುತ್ತಿದ್ದರೆ ನಮ್ಮ ಇವತ್ತಿನ ಸಂದರ್ಭವನ್ನೇ ಕುರಿತು ಬಸವಣ್ಣನವರು ತಮ್ಮ ವಚನಗಳಲ್ಲಿ ಮಾತನಾಡುತ್ತಿದ್ದಾರೆ ಎಂದು ಅನಿಸುತ್ತದೆ. ನಾವಿಂದು ಎದುರಿಸುತ್ತಿರುವ ಅನೇಕ ಸಮಸ್ಯೆ, ತವಕ ತಲ್ಲಣಗಳಿಗೆ ಮತ್ತು ನಮಗೆ ಕಾಡುತ್ತಿರುವ ಪ್ರಶ್ನೆಗಳಿಗೆ ಬಸವಣ್ಣನವರು ವಚನಗಳ ಮೂಲಕ ಉತ್ತರಿಸುತ್ತಿದ್ದಾರೆಂದು ಅನಿಸುತ್ತದೆ. 12ನೇ ಶತಮಾನದ ಬಸವಣ್ಣನವರು 21ನೇ ಶತಮಾನಕ್ಕೆ ಸಲ್ಲುವ ಈ ಪರಿ ನಿಜಕ್ಕೂ ಅದ್ಭುತವೆನಿಸುತ್ತದೆ.
Related Articles
ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ ಎನ್ನುವಂತೆ “ಬಿತ್ತಿದ ಬೀಜದ ಫಲವು ವಿಪರೀತ ಚಾರಿತ್ರ್ಯ ನೋಡಾ, ತನ್ನಲ್ಲಿ ತಾನೆಯಾಗಿ ಆಗಮವ ನೇರಿದಾತನೇ ಸ್ವಯಂಕೃತ ಸಹಜ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನು’ ಎಂದು ಚೆನ್ನಬಸವಣ್ಣ ನವರು ತಮ್ಮ ವಚನದಲ್ಲಿ ಸ್ವಯಂಕೃತ ಗುರು ಬಸವಣ್ಣನವರು ಎಂದು ಹೇಳಿದ್ದಾರೆ. ಬಸವಣ್ಣನವರು ಆ ನಿರಾಕಾರ ಚೈತನ್ಯ ಸ್ವರೂಪವಾದ ಕೂಡಲಸಂಗಮದೇವರನ್ನೇ ಜ್ಞಾನ ಗುರುವನ್ನಾಗಿ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ವಚನದಲ್ಲಿ ಪ್ರಸ್ತುತಪಡಿಸಿರು ವುದನ್ನು ನೋಡಬಹುದು. “ಎನ್ನಗುರು ಪರಮಗುರು ನೀವೆ ಕಂಡಯ್ನಾ, ಎನ್ನ ಗತಿಮತಿ ನೀವೆ ಕಂಡಯ್ನಾ, ಎನ್ನ ಅರಿವಿನ ಜ್ಯೋತಿ ನೀವೆ ಕಂಡಯ್ನಾ, ಎನ್ನಂತರಂಗ ಬಹಿರಂಗದ ಮಹವು ನೀವೆ ಕಂಡಯ್ನಾ, ಕೂಡಲಸಂಗಮದೇವಾ, ನೀವೆನಗೆ ಗುರು, ನಾ ನಿಮಗೆ ಶಿಷ್ಯನೆಂಬುದನು ನಿಮ್ಮ ಶರಣ ಸಿದ್ದರಾಮಯ್ಯದೇವರೆ ಬಲ್ಲರು’ ಎಂದು ಸ್ಪಷ್ಟವಾಗಿ ಬಸವಣ್ಣನವರು ತಮ್ಮ ಗುರು ಕೂಡಲಸಂಗಮದೇವರು ಎಂಬುದನ್ನು ತಿಳಿಸಿದ್ದಾರೆ.
Advertisement
ಇಷ್ಟಲಿಂಗ ಜನಕ ಬಸವಣ್ಣನವರುಬಸವಣ್ಣನವರು ಕಪ್ಪಡಿಸಂಗಮದಲ್ಲಿದ್ದಾಗ ಹಲವಾರು ಧರ್ಮಗ್ರಂಥ, ವೇದಾಗಮ, ಶಾಸ್ತ್ರಪುರಾಣ ಗ್ರಂಥಗಳನ್ನು ಅಧ್ಯಯನ ಮಾಡಿ ಅದರಲ್ಲಿರುವ ನ್ಯೂನತೆಯನ್ನು ತಿಳಿದುಕೊಂಡು, ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ಇರುವಂತಹ ಪರಮಾತ್ಮ (ದೇವರು) ನಿರಾಕಾರವಾಗಿದ್ದಾನೆಂದು ತಿಳಿದು ನಿಶ್ಚಯಿಸಿಕೊಂಡು ಜಗತ್ತು ಗೋಳಾಕಾರವಾಗಿದೆ ಆ ಗೋಳಾಕಾರ ರೂಪದಲ್ಲಿ ಇಷ್ಟಲಿಂಗ ವನ್ನು ಕಂಡು ಹಿಡಿದು, ಅದನ್ನು ತಯಾರಿಸಿ ಮೊದಲು ತಾವು ಧರಿಸಿ ನಂತರ ಅಕ್ಕ ನಾಗಲಾಂಬಿಕೆಯವರಿಗೆ ಕೊಟ್ಟು ಮುಂದೆ ಇತರ ಶರಣರ ಬಳಗಕ್ಕೆ ದೀಕ್ಷೆಯ ಮೂಲಕ ನೀಡಿದರು. ಈ ಕಾರ್ಯ ಕಪ್ಪಡಿ ಸಂಗಮದಲ್ಲಿದ್ದಾಗ 12 ವರ್ಷಗಳ ತಪಸ್ಸಿನ (ಅಧ್ಯಯನ) ಫಲವಾಗಿ ಸತತ ಪರಿಶ್ರಮ ಸಾಧನೆಯಿಂದ ಸಾಧ್ಯವಾಗಿದೆ ಎಂದು ತಮ್ಮ ವಚನದಲ್ಲಿಯೆ ತಿಳಿಸಿದ್ದಾರೆ. “ಎನ್ನ ಹೃದಯ ಸಿಂಹಾಸನದ ಮೇಲೆ ಮೂರ್ತಗೊಂಡಡೆ, ಎನ್ನ ಬಯಕೆ ಸಯವಾಯಿತ್ತು. ಹಿಂದೆ ಹನ್ನೆರಡು ವರುಷದಲ್ಲಿದ್ದ ಚಿಂತೆಯಿಂದು ನಿಶ್ಚಿಂತೆಯಾಯಿತ್ತು, ಕೂಡಲಸಂಗಮದೇವರು ಕೃಪಾಮೂರ್ತಿ ಯಾದ ಕಾರಣ ನಾನು ಬದುಕಿದೆನು’ ಎಂದಿದ್ದಾರೆ. ಇನ್ನು ಬಸವಣ್ಣನವರ ಸಮಕಾಲೀನ ಶರಣರು ತಮ್ಮ ವಚನಗಳಲ್ಲಿ “ಇಷ್ಟಲಿಂಗ ಜನಕ’ ಬಸವಣ್ಣನವ ರೆಂಬುದನ್ನು ಸ್ಪಷ್ಟಪಡಿಸಿದ್ದಾರೆ. “ಹರಿಬ್ರಹ್ಮಾದಿಗಳಿಗಗೋಚರವಾದ ಕೂಡಲಚೆನ್ನಸಂಗಯ್ಯನೆಂಬ ಲಿಂಗವ ತೋರಿದ ಬಸವಣ್ಣ ಗುರುವೆ ಶರಣು ಶರಣು’. “ಅಯ್ನಾ ನಿಮ್ಮ ಶರಣ ಬಸವಣ್ಣನಿಂದ ಲಿಂಗವ ಕಂಡು ಒಳಗೆ ಬೈಚಿಟ್ಟುಕೊಂಡೆನಯ್ನಾ’, “ಪ್ರಥಮಂತು ಬಸವಣ್ಣ ದ್ವಿತಿಯಂತು ಲಿಂಗವು ತೃತಿಯಂತು ತತ್ವಬ್ರಹ್ಮಾಂಡವೆಲ್ಲ ಅಕಳಂತ ಗುಣನಿಧಿ ಚಿದಾನಂದ ಬಸವಂಗೆ ಬಕುತನಾದನೈ ಯೋಗಿನಾಥ’, “ಆದಿ ಲಿಂಗ ಅನಾದಿ ಬಸವಣ್ಣನು. ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು’, “ಜಗತ್ ಸ್ವಯಂಭು’ ಎಂಬ ಗುಹೇಶ್ವರನ ಕರಸ್ಥಲದಲ್ಲಿ ಹಿಡಿದಾಡುತ್ತಿರ್ದಡೆ ಆದಿಲಿಂಗವೆಂದು ಬಗೆಯದು ಲೋಕವೆಲ್ಲ. ಗುಹೇಶ್ವರಾ ನಿಮ್ಮ ಶರಣ ಬಸವಣ್ಣ, ಅಚ್ಚಲಿಂಗವ ಹಿಡಿದ ಕಾರಣ. ಬರಿಯ ಲಿಂಗದ ಮಸ್ತಕವಾಯಿತ್ತು ತ್ರಿಜಗದೊಳಗೆ! ಅನುಭವ ಮಂಟಪ, 770 ಅಮರಗಣಂಗಳ ಮಾಡಿದ ಬಸವಣ್ಣನವರುವಿಶ್ವದ ಪ್ರಪ್ರಥಮ ಪಾರ್ಲಿಮೆಂಟ್ (ಸಂಸತ್) ಎಂದು ಕರೆಯಲ್ಪಡುತ್ತಿರುವ “ಅನುಭವ ಮಂಟಪ’ 12ನೇ ಶತಮಾನದಲ್ಲಿ ಧರ್ಮಗುರು ಬಸವಣ್ಣನವರು ಸ್ಥಾಪಿಸಿದರು. ಈ ಅನುಭವ ಮಂಟಪದಲ್ಲಿ ಎಲ್ಲ ಕಾಯಕದ, ಎಲ್ಲ ಜನಾಂಗದ, ಶರಣ-ಶರಣೆಯರು ಸದಸ್ಯರಾದರು. ನಿತ್ಯ ಶರಣರು ತಮ್ಮ ಅನುಭಾವದ ವಚನಗಳನ್ನು ರಚಿಸಿ, ಇಲ್ಲಿ ಚರ್ಚಿಸಿ ವಚನ ಭಂಡಾರಕ್ಕೆ ಒಪ್ಪಿಸುತ್ತಿದ್ದರು. ಈ ಅನುಭವ ಮಂಟಪದಲ್ಲಿಯೇ ಶೂನ್ಯಪೀಠ ಸ್ಥಾಪಿಸಲ್ಪಟ್ಟು, ಅದರ ಪ್ರಥಮಾಧ್ಯಕ್ಷರನ್ನಾಗಿ ವ್ಯೋಮಕಾಯ ಜಂಗಮ ಮೂರ್ತಿ ಅಲ್ಲಮ ಪ್ರಭುದೇವರನ್ನು ನೇಮಿಸಿದ್ದರು. ಇವರ ಮಾರ್ಗ ದರ್ಶನದಂತೆ ಬಸವಣ್ಣನವರು ಮೊದಲುಗೊಂಡು ಎಲ್ಲ ಶರಣ ಬಂಧುಗಳು ನಡೆದುಕೊಳ್ಳುತ್ತಿದ್ದರು. ಇವರಲ್ಲಿ 770 ಅಮರಗಣಂ ಗಳು, ಉಳಿದ ಶರಣ-ಶರಣೆಯರು ಬಂದು ಚಿಂತನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. “ಅನುಭವ ಮಂಟಪವನು ಮಾಡಿ ಅನುಭವ ಮೂರ್ತಿಯಾದ ನಮ್ಮ ಬಸವಯ್ಯನು. ಏಳುನೂರೆಪ್ಪತ್ತು ಅಮರಗಣಂಗಳ ಅನುಭವಮೂರ್ತಿ ಮಾಡಿದಾತ ನಮ್ಮ ಬಸವಯ್ಯನು’ ಎಂದು ತಾಯಿ ನೀಲಾಂಬಿಕೆಯವರು ತಮ್ಮ ವಚನದಲ್ಲಿ ಉಲ್ಲೇಖೀಸಿದ್ದಾರೆ. ಇಂತಹ ಮಹಾಮಹಿಮ ಸಂಗನಬಸವಣ್ಣ ಎನಗೆಯೂ ಗುರು, ನಿಮಗೆಯೂ ಗುರು, ಜಗವೆಲ್ಲಕ್ಕೂ ಗುರು ಕಾಣಾ ಗುಹೇಶ್ವರ ಎಂದು ಪ್ರಭುದೇವರು ಹೇಳಿದ್ದಾರೆ. ಗುರು ಬಸವಣ್ಣನವರು ಕ್ರಿ.ಶ. 1105ರಲ್ಲಿ ಈಗಿನ ವಿಜಯಪುರ ಜಿಲ್ಲೆಯ ಬಾಗೇವಾಡಿ ಮಂಡಿಗೆಯ ಮಾದರಸನ ಸತಿ ಮಾದ= ಲಾಂಬಿಕೆಯರ ಉದರದಲ್ಲಿ ಜನ್ಮತಾಳಿ ಬಾಗೇವಾಡಿ ಯಿಂದ-ಕಪ್ಪಡಿಸಂಗಮಕ್ಕೆ ನಂತರ ಮಂಗಳವೆಡೆಗೆ -ಇಲ್ಲಿಂದ ಕಲ್ಯಾಣಕ್ಕೆ ಬಂದು 62 ವರ್ಷಗಳ ಕಾಲ ಬಾಳಿ ನಮ್ಮ ನಿಮ್ಮೆಲ್ಲರಿಗೂ ಬೆಳಕಾಗಿದ್ದಾರೆ. ಈ ಮಹಾತ್ಮರ ಕರುಣೆ ನಮ್ಮ ನಿಮ್ಮೆಲ್ಲರಿಗೆ ದೊರೆಯಲೆಂದು ಪ್ರಾರ್ಥಿಸುವೆ. ಬಸವ ಗುರುವಿನ ಪಾದಕ್ಕೆ ಶರಣು ಶರಣಾರ್ಥಿಗಳು. -ಪ್ರಕಾಶ ಅಸುಂಡಿ