Advertisement

ಸಕ್ಕರೆ ನಾಡಿನಲ್ಲಿ ಸಿಹಿ ಕ್ಷಣ : ಮಂಡ್ಯದಲ್ಲಿ ಕನ್ನಡತಿಯ ಇಟಲಿ ಕೃತಿ ಬಿಡುಗಡೆ

02:20 PM Jan 14, 2025 | Team Udayavani |

ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶರಪಂಜರ “ತ್ರಿವೇಣಿ’ ಅವರ ಕೃತಿಯ ಇಟಾಲಿಯನ್‌ ಅನುವಾದ ““ಲ ಗಬ್ಯ ದಿ ಫ್ರೆಚ್ಚೆ” ಕಂಡಿತು ಬೆಳಕು ಕೃತಿ ಗಣ್ಯರಿಂದ ಬಿಡುಗಡೆಯಾದಾಗ ನನಗಾದ ಸಂತೋಷಕ್ಕೆ ಪಾರವಿಲ್ಲ. ಕಷ್ಟಪಟ್ಟರೆ ಫಲ ಉಂಟು ಅನ್ನುವಂತೆ ಎರಡು ವರುಷದ ಕೆಲಸ ಸಾರ್ಥಕವಾಯಿತು.

Advertisement

ತ್ರಿವೇಣಿಯವರ ಪುತ್ರಿ ಮೀರಾ ವೇದಿಕೆಯಲ್ಲಿ ಉಪಸ್ಥಿತರಾಗಿದ್ದಂತೂ ಮತ್ತಷ್ಟು ಸಂತೋಷವಾಯಿತು. ಒಂದು ತಟ್ಟೆಯಲ್ಲಿ ಪುಸ್ತಕ ಇಟ್ಟು ಅದಕ್ಕೆ ಹೂ ಅಲಂಕರಿಸಿ, ಸ್ವಾಮಿಗಳ ಆಶೀರ್ವಾದದೊಡನೆ ಪುಸ್ತಕದ ಬಿಡುಗಡೆ ಘೋಷಿಸಿದಾಗ ಎರಡು ಲಕ್ಷ ಜನ ಚಪ್ಪಾಳೆ ತಟ್ಟಿದಾಗ ನನ್ನನ್ನು ನಾನೆ ಮರೆತೆ!

ಇದು ಕನ್ನಡ ಸಾಹಿತ್ಯ ಲೋಕಕ್ಕೆ ನನ್ನ ಚಿಕ್ಕ ಕಾಣಿಕೆ. ನನ್ನ ಜನ್ಮಸ್ಥಳ ಮೈಸೂರು ಹತ್ತಿರದ ಮಂಡ್ಯ ನೀಡಿದ ಬಳುವಳಿ. ಅನೇಕ ದಿನಪತ್ರಿಕೆಗಳು ನನ್ನ ಬಗ್ಗೆ ಬರೆದರು ಅವರಿಗೆಲ್ಲ ನಾನು ಆಭಾರಿ. ಮಂಡ್ಯದ ಪ್ರಜೆಗಳು ಅದರಲ್ಲೂ ಯುವಜನಾಂಗ ನನ್ನನ್ನು ಅಭಿನಂದಿಸಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ತೋರಿಸಿದ್ದು ಮಹಾನಂದ!

ಇನ್ನು ಮೂರು ದಿನದ ಸಂಭ್ರಮದ ಬಗ್ಗೆ ಹೇಳುವುದಾದರೆ ಪುಟಗಳೇ ಬೇಕು. ಪರಿಷತ್‌ನ ಆದರದ ವಿಶೇಷ ಆತಿಥ್ಯ ಮೈಸೂರಿನ “ಸಂದೀಪ್‌ ದಿ ಪ್ರಿನ್ಸ್‌ ಹೊಟೇಲ್‌ನ ಮನೆಯ ವಾತಾವರಣ, ರುಚಿರುಚಿ ಉಪಾಹಾರ, ಅನಿವಾಸಿಗಳೊಂದಿಗೆ ಮಂಡ್ಯಗೆ ಬಸ್ಸಿನ ಪಯಣ, ಎಲ್ಲಾದರೂ ಇರು…. ಮುಂತಾದ ಹಾಡುಗಳನ್ನು ಹಾಡುತ್ತ, ಪರಿಷತ್‌ನ ಕಣ್ಣು ಹಾಯಿಸುವಷ್ಟು ದೊಡ್ಡಜಾಗ, ತಲುಪಿದಾಗ ಕಂಡ ದೃಶ್ಯ ಅದೆಷ್ಟು ಚೆನ್ನ! ಜನರ ಗುಂಪು, ಶಾಲೆಯ ಮಕ್ಕಳು, ಕರ್ನಾಟಕದ ಬಾವುಟ ಮಾರುವವರು, ಬಾರಿಸು ಕನ್ನಡ ಡಿಂಡಿಮವ ಹಾಡು ಆಗಸದ ವರೆಗೂ ತಲುಪಿತ್ತು!

Advertisement

ಸುಂದರ ವೇದಿಕೆ ಹೂಗಳಿಂದ ಅಲಂಕೃತವಾಗಿ ಶೋಭಿಸಿತ್ತು. ಇನ್ನು ಊಟದ ಬಗ್ಗೆ ಹೇಳುವುದಾದರೆ ಸ್ವಾದಿಷ್ಟ ಶಾಖಾಹಾರಿ ಬಾಳೆಎಲೆ ಊಟ ಸವಿಯುತ್ತ, ವಿದೇಶದ ಕನ್ನಡ ಸಂಘಗಳ ಬಗ್ಗೆ ಮಾತಾಡುತ್ತ ಕಳೆದ ಕ್ಷಣಗಳು ಮರೆಯಲಸಾಧ್ಯ. ನನ್ನ ಜತೆ ಇದ್ದ ಇಟಲಿಯ ಕನ್ನಡ ಹಾಡುಗಳ ಗಾಯಕಿ ಜ್ಯಾನ್ನ ಜಿರಾಲ್ಡಿ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಹಾಡು ಗುನುಗುತ್ತ ನನ್ನ ಜತೆ ಓಡಾಡುತ್ತಿದ್ದರೆ ನಮ್ಮ ಊರು ಪೀಸಾದ ನದಿ ಆನೊರ್‌, ಕಾವೇರಿ ಒಟ್ಟಿಗೆ ಹರಿಯುತ್ತಿದ್ದಂತೆ ಭಾಸವಾಯಿತು!

ಪರಿಷತ್‌ನ ಸಮ್ಮೇಳನದ ನೆನಪು ಅಚ್ಚಳಿಯದಂತೆ ಉಳಿಯುತ್ತದೆ. ಇಂತಹ ಸಂಭ್ರಮದ ಹಬ್ಬಕ್ಕೆ ನನ್ನನ್ನು ಆಹ್ವಾನಿಸಿ ಸಮ್ಮಾನಿಸಿದ ನಾಡೋಜ ಮಹೇಶ್‌ ಜೋಶಿ ಅವರಿಗೆ ನಾನು ಚಿರಋಣಿ. ಎಲ್ಲ ಗಣ್ಯರಿಗೂ ಹಾಗೂ ಪ್ರೇಕ್ಷಕರಿಗೂ ನನ್ನ ಅನಂತಾನಂತ ಧನ್ಯವಾದಗಳು.

ಮತ್ತೊಂದು ಸುದಿನ
ಅಖಿಲ ಭಾರತ ಕನ್ನಡ ಸಮ್ಮೇಳನದ ಸುದಿನಗಳನ್ನು ಮೆಲಕು ಹಾಕುತ್ತಿದ್ದಂತೆ ಮತ್ತೂಂದು ಸದವಕಾಶ! ಕೃತಿಗೆ ಮುನ್ನುಡಿ ಬರೆದ ಎಚ್‌.ಎಸ್‌.ವೆಂಕಟೇಶಮೂರ್ತಿ ಅವರ ಮುಖತಃ ಭೇಟಿ! “ಅನುವಾದದ ಕೃತಿ ಬೇಕು’ ಎಂದು ಅವರು ಆಶಿಸಿದಾಗ ಸಾ ಸುವ ಆಸೆ ಅಂಕುರಿಸಿತ್ತು. ಆದರೆ ಹೇಗೆ ಸಾಧ್ಯ? ಇದು ಗಗನಕ್ಕೆ ಏಣಿ ಹಾಕುವ ಹಾಗೆ ಎಂದು ಮನ ಮುದುಡಿತ್ತು. ಆದರೆ ಸಮ್ಮೇಳನಕ್ಕೆ ಆಹ್ವಾನ ದೊರೆತು ಭಾರತಕ್ಕೆ ಬಂದು ಪುರಸ್ಕಾರದೊಡನೆ ಪುಸ್ತಕ ಬಿಡುಗಡೆ ಆಯಿತೆಂದರೆ ಇದು ದೈವ ಸಂಕಲ್ಪ. ಅರಳಿತ್ತು ಮುದುಡಿದ ತಾವರೆ.

ಹಿರಿಯ ಸಾಹಿತಿ ಎಚ್‌ಎಸ್‌ ವಿ ಅವರ ಮನೆಗೆ ಭೇಟಿಕೊಟ್ಟು ಅವರಿಗೆ ಪುಸ್ತಕ ಕೊಟ್ಟಾಗ ರೋಮಾಂಚನದೊಂದಿಗೆ ಸಂತಸದ ಅಶ್ರುಗಳು ಕಣ್ತುಂಬಿದವು. ಆದರದ ಆತಿಥ್ಯದೊಂದಿಗೆ ಅವರ ಮನೆಯವರ ಜತೆ ಹಾಗೂ ಹಿರಿಯ ಸಾಹಿತಿಗಳೊಡನೆ ಮಾತನಾಡುವ ಅವಕಾಶ, ಅವರ ಕೃತಿ ಯೊಂದನ್ನು ಸೀರೆಯ ಜತೆ ಸ್ವೀಕರಿಸಿದ್ದು, ಈ ಕ್ಷಣಗಳು ಜೀವನದಲ್ಲಿ ಅಚ್ಚಳಿಯದಂತಿರುವುದು. ಬಾಬಾ ಅವರಿಗೆ ಅನುಗ್ರಹಕ್ಕೆ ಕೋಟಿ ಪ್ರಣಾಮಗಳು.

*ಜಯಮೂರ್ತಿ, ಇಟಲಿ

Advertisement

Udayavani is now on Telegram. Click here to join our channel and stay updated with the latest news.