Advertisement

ಲಸಿಕೆಗೆ 18 ವರ್ಷ ಮೇಲ್ಪಟ್ಟವರಿಗೂ ಸ್ಥಳದಲ್ಲೇ ನೋಂದಣಿ ಅವಕಾಶ

03:43 AM May 25, 2021 | Team Udayavani |

ಹೊಸದಿಲ್ಲಿ: ನೀವು 18ರಿಂದ 44ರ ವಯೋಮಾನದವರಾ? ನಿಮ್ಮಲ್ಲಿ ಸ್ಮಾರ್ಟ್‌ ಫೋನ್‌ ಅಥವಾ ಇಂಟರ್ನೆಟ್‌ ಸಂಪರ್ಕ ಇಲ್ಲವೇ? ಹಾಗಿದ್ದರೆ ಲಸಿಕೆ ಪಡೆಯಲು ಕೋವಿನ್‌ ವೆಬ್‌ ಪೋರ್ಟಲ್‌ ನಲ್ಲಿ ನೋಂದಣಿ ಮಾಡಲೇಬೇಕೆಂದೇನೂ ಇಲ್ಲ. ನೇರವಾಗಿ ಸರಕಾರಿ ಲಸಿಕಾ ಕೇಂದ್ರಗಳಿಗೆ ತೆರಳಿ ಅಲ್ಲೇ ನೋಂದಣಿ ಮಾಡಿಕೊಳ್ಳಬಹುದು.

Advertisement

ಇಂಥದ್ದೊಂದು ಅವಕಾಶವನ್ನು ಕೇಂದ್ರ ಸರಕಾರ ಕಲ್ಪಿಸಿದೆ. ಮುಂಚಿತವಾಗಿಯೇ ಕೋವಿನ್‌ ನಲ್ಲಿ ನೋಂದಣಿ ಮಾಡಿಕೊಂಡವರಿಗೆ(18-44 ವಯೋಮಾನದವರು) ಲಸಿಕೆ ವಿತರಣೆ ಕೇಂದ್ರದಲ್ಲಿ ಮೊದಲಿಗೆ ಲಸಿಕೆ ವಿತರಿಸಲಾಗುತ್ತದೆ. ದಿನದ ಅಂತ್ಯದಲ್ಲಿ ಇನ್ನೂ ಲಸಿಕೆಯ ಡೋಸ್‌ಗಳು ಉಳಿದಿದ್ದರೆ ಅದನ್ನು “ನೋಂದಣಿ ಮಾಡದೇ ಬಂದವರಿಗೆ’ ನೀಡಲಾಗುತ್ತದೆ. ಇದರಿಂದ ಲಸಿಕೆ ಪೋಲಾಗುವುದನ್ನು ತಪ್ಪಿಸಿದಂತಾಗುತ್ತದೆ ಎಂದು ಕೇಂದ್ರ ಸರಕಾರ ಹೇಳಿದೆ.

ಹೀಗಿದ್ದರೂ, ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳುವ ನಿರ್ಧಾರವನ್ನು ಆಯಾ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಟ್ಟು ಬಿಡಲಾಗಿದೆ. ಜತೆಗೆ ಸದ್ಯಕ್ಕೆ ಸರಕಾರಿ ಲಸಿಕಾ ಕೇಂದ್ರಗಳಲ್ಲಿ ಮಾತ್ರವೇ ಈ ಸೌಲಭ್ಯವಿದ್ದು, ಖಾಸಗಿಯಲ್ಲಿ ಇರುವುದಿಲ್ಲ ಎಂದೂ ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. 45 ವರ್ಷ ದಾಟಿದವರಿಗೆ ಈಗಲೂ ಸ್ಥಳದಲ್ಲೇ ನೋಂದಣಿ ಮಾಡುವ ಅವಕಾಶವಿದೆ.

ಸ್ಪುಟ್ನಿಕ್‌ ವಿ ಲಸಿಕೆ ಉತ್ಪಾದನೆ ಶುರು
ಹೊಸದಿಲ್ಲಿ: ರಷ್ಯಾ ಸರಕಾರದ ರಷ್ಯನ್‌ ಡೈರೆಕ್ಟ್ ಇನ್ವೆಸ್ಟ್‌ಮೆಂಟ್‌ ಫ‌ಂಡ್‌ (ಆರ್‌ಡಿಐಎಫ್) ಮತ್ತು ದೇಶದ ಪ್ರಮುಖ ಔಷಧೋದ್ಯಮ ಸಂಸ್ಥೆ ಪನಾಸಿಯಾ ಬಯೋಟೆಕ್‌ ಸಹಭಾಗಿತ್ವದಲ್ಲಿ “ಸ್ಪುಟ್ನಿಕ್‌-ವಿ’ ಲಸಿಕೆಯ ಉತ್ಪಾದನೆ ಸೋಮವಾರ ಆರಂಭವಾಗಿದೆ. ಪ್ರತಿ ವರ್ಷ 10 ಕೋಟಿ ಡೋಸ್‌ಗಳನ್ನು ಹಿಮಾಚಲ ಪ್ರದೇಶದಲ್ಲಿ ರುವ ಪನೇಸಿಯಾ ಬಯೋಟೆಕ್‌ನ ಘಟಕದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಈ ಬಗ್ಗೆ ಹೊಸದಿಲ್ಲಿಯಲ್ಲಿ ಸೋಮವಾರ 2 ಸಂಸ್ಥೆಗಳು ಘೋಷಣೆ ಮಾಡಿವೆ. ಅಲ್ಲಿ ಉತ್ಪಾದನೆ ಮಾಡಲಾಗುವ ಲಸಿಕೆಗಳನ್ನು ಗುಣಮಟ್ಟ ಪರೀಕ್ಷೆಗಾಗಿ ರಷ್ಯಾದ ಗಮಾಲೆಯಾ ಕೇಂದ್ರಕ್ಕೆ ರವಾನಿಸಲಾಗುತ್ತದೆ. ಕಳೆದ ತಿಂಗಳು ಈ ಬಗ್ಗೆ ಎರಡೂ ಸಂಸ್ಥೆಗಳೂ ಒಪ್ಪಂದ ಮಾಡಿಕೊಂಡಿದ್ದವು. ಇದಲ್ಲದೆ ಹೈದರಾಬಾದ್‌ನ ಡಾ|ರೆಡ್ಡೀಸ್‌ ಲ್ಯಾಬೊರೇಟರಿ ಮತ್ತು ರಾಯಚೂರಿನ ಶಿಲ್ಪಾ ಮೆಡಿ ಕೇರ್‌ “ಸ್ಪುಟ್ನಿಕ್‌-ವಿ’ ಉತ್ಪಾದಿಸುವ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next