ಬೆಂಗಳೂರು: ದೇಶದಲ್ಲಿ ಒಂದು ಕಡೆ ಬಜೆಟ್‌ನ ಸಿರಿ ಕಂಡರೆ, ಮತ್ತೂಂದೆಡೆ ಕಾಂಗ್ರೆಸ್‌ಗೆ ಉರಿ ಕಾಣಿಸುತ್ತಿದೆ. ಈ ಬಾರಿಯ ಕೇಂದ್ರ ಬಜೆಟ್ ಇಡೀ ದೇಶದಲ್ಲಿ ಸಂಚಲನ ಉಂಟುಮಾಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದರು.
ರಾಜ್ಯ ಬಿಜೆಪಿ ವತಿಯಿಂದ ನಗರದ ಪುರಭವನ ಬಳಿ ಶನಿವಾರ ನಡೆದ “ಕೇಂದ್ರ ಬಜೆಟ್ ಅಭಿನಂದನಾ ಸಮಾರಂಭ’ದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಈವರೆಗೂ ಹಲವಾರು ಬಜೆಟ್‌ಗಳು ಬಂದಿದೆ, ಆದರೆ, ಪ್ರಧಾನಿ ಮೋದಿ ಹಾಗೂ ಸಚಿವ ಪಿಯೂಷ್ ಗೋಯಲ್ ಅವರು ಈ ಬಾರಿ ನಮಗೆ ಕೊಟ್ಟಿರುವ ಬಜೆಟ್‌ನಲ್ಲಿ ಸಿರಿ ಕಾಣಿಸುತ್ತಿದ್ದು, ಅದರಲ್ಲಿರುವ ಅಭಿವೃದ್ಧಿ ಹಾಗೂ ಜನಪರ ಯೋಜನೆಗಳನ್ನು ಕಂಡು,
ಕೇಳಿ ಕಾಂಗ್ರೆಸ್‌ಗೆ ಉರಿ ಕಾಣಿಸಿಕೊಳ್ಳುತ್ತಿದೆ ಎಂದ ಅವರು “ಮೋದಿಯ ಬಜೆಟ್, ವಿರೋಧಿಗಳಿಗೆ ಟಿಕೆಟ್’ ಎಂದು ಘೋಷಣೆ ಕೂಗಿದರು. ಇನ್ನು ಬಜೆಟ್ ಮೂಲಕ ಪ್ರಧಾನಿ ಮೋದಿ ದೇಶದ ಜನಗಳಿಗೆ ಲಾಲಿಪಪ್ ಕೋಡುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕೆ ಮಾಡುತ್ತಿದ್ದು, 60ಕ್ಕೂ ಹೆಚ್ಚು ವರ್ಷ ದೇಶದ ಆಡಳಿತ ಮಾಡಿದ ಕಾಂಗ್ರೆಸ್ ಜನರಿಗೆ ಒಂದು ಕಾಳು ಕಡೆಲೆ ಕೊಡಲಿಲ್ಲ ಎಂದು ವ್ಯಂಗ್ಯವಾಡಿರು.
ಈ ಬಾರಿ ಬಜೆಟ್‌ನಲ್ಲಿ ಶ್ರೀಸಾಮಾನ್ಯನಿಗೆ ತೆರಿಗೆ ಹೊರೆಯನ್ನು ಇಳಿಸಿ ಬಂಪರ್ ಕೊಡುಗೆ ನೀಡಲಾಗಿದೆ. ವೃದ್ದಾಪ್ಯದಲ್ಲಿರುವವರಿಗೆ ಐತಿಹಾಸಿಕ ಯೋಜನೆಯೊಂದನ್ನು ತರುವ ಮೂಲಕ ಪ್ರತಿ ತಿಂಗಳು 3,000 ರೂ. ನೀಡುತ್ತಿದ್ದಾರೆ. ಒಟ್ಟಾರೆ ಈ ಬಾರಿ ವಿವಿಧ ಯೋಜನೆ ಮೂಲಕ 12 ಕೋಟಿ ರೈತ ಕುಟುಂಬ, 62 ಕೊಟಿ ಜನ ಕಾರ್ಮಿಕರಿಗೆ ಸೇರಿದಂತೆ ರಕ್ಷಣಾ ವಲಯಕ್ಕೆ ದಾಖಲೆಯ ಮೂರು ಲಕ್ಷ ಕೋಟಿ ರೂ. ಕೊಟ್ಟಿದ್ದು, ಒಟ್ಟಾರೆ ಈ ಬಜೆಟ್ “ಜೈ ಜವಾನ್ ಜೈ ಕಿಸಾನ್ ಜೈ ಕಾರ್ಮಿಕ್’ ಎಂಬ ತ್ರಿವಿಧ ಸೂತ್ರವನ್ನು ಪಾಲಿಸಿದ್ದಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಕೇಂದ್ರ ಬಜೆಟ್‌ನಲ್ಲಿ ರೈತರಿಗೆ, ಕಾರ್ಮಿಕರಿಗೆ, ಮಧ್ಯಮವರ್ಗದವರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚಿನ ನೆರವು ನೀಡಲಾಗಿದೆ. ಈ ಮೂಲಕ ಈ ಬಜೆಟ್ ಎಲ್ಲರನ್ನು ಒಳಗೊಂಡಿದ್ದು, ಈ ಬಜೆಟ್‌ನಿಂದ ಕಾಂಗ್ರೆಸ್ ಸೇರಿದಂತೆ ಎಲ್ಲ ವಿರೋಧ ಪಕ್ಷಗಳು ದಿಕ್ಕಾಪಾಲಾಗಿವೆ. ಇಷ್ಟು ದಿನ ಮೋದಿ ಜೀ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದ ವಿರೋಧಿಗಳ ಬಾಯಿಗೆ ಬೀಗ ಬಿದ್ದಿದೆ.
ಮುಖ್ಯವಾಗಿ ಮಾಜಿ ಪ್ರಧಾನಿ ದೇವೇಗೌಡ, ಮಮತಾ ಬ್ಯಾನರ್ಜಿ ಸೇರಿದಂತೆ ಎಲ್ಲರೂ ಚಿಂತೆಗೀಡಾಗಿದ್ದಾರೆ. ಇನ್ನು ಈ ಬಜೆಟ್ ಜಾರಿಗೆ ಬರಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಕಳೆದ ಬಾರಿ ಅವರು ಮಂಡಿಸಿದ ಬಜೆಟ್ ಜಾರಿಗೆ ಬಂತೇ ಅವರು ಎಂದು ಪ್ರಶ್ನಿಸಿದ ಅವರು ಕೇಂದ್ರ ಸರ್ಕಾರ ರೈತ ವಿರೋಧಿ ಎಂದು ಹೇಳುತ್ತಿದ್ದವರಿಗೂ ಬಜೆಟ್ ಮೂಲಕ ಪ್ರಧಾನಿ ನರೇಂದ್ರಮೋದಿ ಉತ್ತರ ನೀಡಿದ್ದಾರೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಪ್ರದಾನ ಕಾರ್ಯದರ್ಶಿ ರವಿಕುಮಾರ್, ರಾಜ್ಯ ಕಾರ್ಯದರ್ಶಿ ಜಯದೇವ್, ತೇಜಸ್ವಿನಿ ಗೌಡ, ಬೆಂಗಳೂರು ಮಹಾನಗರ ಬಿಜೆಪಿ ಅಧ್ಯಕ್ಷ ಪಿ.ಎನ್.ಸದಾಶಿವ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.