ಬೆಂಗಳೂರು: ಭಾಗ್ಯಲಕ್ಷ್ಮೀ ಯೋಜನೆಯನ್ನು ಕೇಂದ್ರ ಸರಕಾರದ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯ ಜತೆ ವಿಲೀನಗೊಳಿಸಿ ಅಂಚೆ ಇಲಾಖೆ ಮೂಲಕ ಜಾರಿ ಗೊಳಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಐಎಂಎ ಪ್ರಕರಣದ ಹಿನ್ನೆಲೆಯಲ್ಲಿ ಹೆಚ್ಚಿನ ಬಡ್ಡಿ ಆಸೆ ತೋರಿಸಿ ಖಾಸಗಿ ಹಣಕಾಸು ಸಂಸ್ಥೆಗಳು ಠೇವಣಿ ಸಂಗ್ರಹಿಸಿ ವಂಚನೆ ಮಾಡುವುದನ್ನು ನಿಯಂತ್ರಿಸಲು ಹೊಸ ಕಾನೂನು ರೂಪಿಸಲು ಸಂಪುಟ ನಿರ್ಧರಿಸಿದೆ.
ಭಾಗ್ಯಲಕ್ಷ್ಮೀ ಯೋಜನೆಯು ಸುಕನ್ಯಾ ಸಮೃದ್ಧಿ ಯೋಜನೆಯ ಜತೆ ವಿಲೀನಗೊಳಿಸಿದ ಅನಂತರ 2020-21ರಿಂದ ಜಾರಿಗೆ ಬರಲಿದ್ದು, ಮರು ವಿನ್ಯಾಸದಡಿ ಭಾಗ್ಯಲಕ್ಷ್ಮೀ ಹೆಸರು ಮುಂದುವರಿಯಲಿದೆ. ಪ್ರಸ್ತುತ ಎಲ್‌ಐಸಿ ಜತೆ ಯೋಜನೆ ಸಂಬಂಧ ಒಪ್ಪಂದವಿದ್ದು, ಅದು ಅಂಚೆ ಇಲಾಖೆಗೆ ವರ್ಗಾವಣೆಯಾಗಲಿದೆ.
ಪ್ರಸ್ತುತ ಯೋಜನೆಯಿಂದ ಸರಕಾರಕ್ಕೆ ವಾರ್ಷಿಕ 2 ಸಾವಿರ ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ. ಇದನ್ನು ತಪ್ಪಿಸಲು ಸುಕನ್ಯಾ ಸಮೃದ್ಧಿ ಯೋಜನೆಯಡಿ ವಿಲೀನಗೊಳಿಸಿ ಅಂಚೆ ಇಲಾಖೆ ಮೂಲಕ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಹೊಸ ಕಾನೂನು
ಖಾಸಗಿ ಹಣಕಾಸು ಸಂಸ್ಥೆಗಳ ವಂಚನೆ ತಪ್ಪಿಸಲು “ಕರ್ನಾಟಕ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ನಿಯಮಗಳು-2020′ ರೂಪಿಸಲು ಸಂಪುಟ ನಿರ್ಧರಿಸಿದೆ.
ಕೇಂದ್ರ ಸರಕಾರದಲ್ಲಿ ಈ ಕುರಿತು ವಿಶೇಷ ಕಾಯ್ದೆ ಇದ್ದು, ಅದಕ್ಕೆ ಪೂರಕವಾಗಿ ರಾಜ್ಯ ಸರಕಾರವು ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ನಿಯಮ ರೂಪಿಸಲಾಗುತ್ತಿದೆ. ಇದರಿಂದ ವಂಚನೆ ತಡೆಗಟ್ಟಬಹುದು. ಹಣಕಾಸು ಸಂಸ್ಥೆಗಳು ಠೇವಣಿದಾರರನ್ನು ಪಾಲುದಾರರು ಎಂದು ಪರಿಗಣಿಸಿ ಲಾಭ ಮತ್ತು ನಷ್ಟಕ್ಕೆ ಭಾಗಿದಾರರು ಎಂಬಂತೆ ಪರಿಗಣಿಸುವುದರಿಂದ ಸಾರ್ವಜನಿಕರು ಮೋಸ ಹೋಗುತ್ತಿದ್ದು, ಇದನ್ನು ತಪ್ಪಿಸುವುದು ಇದರ ಉದ್ದೇಶ.
ಈ ಮಧ್ಯೆ ವಿಧಾನಪರಿಷತ್‌ನಲ್ಲಿ ಅಂಗೀಕಾರವಾಗದ ಕಾರಣ “ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ಮಸೂದೆ, 2020’ಕ್ಕೆ ಎರಡನೇ ಬಾರಿಗೆ ಅಧ್ಯಾದೇಶ ಹೊರಡಿಸಲು ಸಂಪುಟ ಅನುಮೋದನೆ ನೀಡಿದೆ.
ರಾಷ್ಟ್ರೀಯ ಚಂಡ ಮಾರುತ ಅಪಾಯ ತಡೆಗಟ್ಟುವ ಯೋಜನೆ ಯಡಿ ಕರಾವಳಿಯ 3 ಜಿಲ್ಲೆಗಳಿಗೆ ಹವಾಮಾನ ಮುನ್ಸೂಚನೆ ಪದ್ಧತಿ ಅನುಷ್ಠಾನಗೊಳಿಸುವ 26.92 ಕೋಟಿ ರೂ. ಮೊತ್ತದ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.