ಅದು 1973. ಪುಟ್ಟಣ್ಣ ಕಣಗಾಲ್ ನಿರ್ದೇಶನದ “ಎಡಕಲ್ಲು ಗುಡ್ಡದ ಮೇಲೆ’ ಚಿತ್ರ ಬಿಡುಗಡೆಯಾಗಿ ಸೂಪರ್‌ಹಿಟ್ ಎನಿಸಿಕೊಂಡಿತ್ತು. ಅದು ಅಂದಿಗೂ, ಇಂದಿಗೂ, ಎಂದಿಗೂ ಎವರ್‌ಗ್ರೀನ್. ಭಾರತಿಸುತ ಅವರ “ಎಡಕಲ್ಲು ಗುಡ್ಡದ ಮೇಲೆ’ ಕಾದಂಬರಿ ಆಧರಿತ ಈ ಚಿತ್ರದಲ್ಲಿ ಜಯಂತಿ, ಚಂದ್ರಶೇಖರ್, ಆರತಿ, ಶಿವರಾಮ್ ಇತರರು ನಟಿಸಿದ್ದರು. ಈಗೇಕೆ ಆ ಚಿತ್ರದ ಪೀಠಿಕೆ ಅಂತೀರಾ? ವಿಷಯ ಇರೋದೇ ಇಲ್ಲಿ. ಈಗ ಅದೇ ಶೀರ್ಷಿಕೆ ಇರುವ ಸಿನಿಮಾವೊಂದು ಸದ್ದಿಲ್ಲದೆಯೇ ಶುರುವಾಗಿ, ಇನ್ನೇನು ಮುಗಿಯೋ ಹಂತಕ್ಕೆ ಬಂದಿದೆ.
ಹೌದು, “ಎಡಕಲ್ಲು ಗುಡ್ಡದ ಮೇಲೆ’ ಹೆಸರಿನ ಚಿತ್ರವೊಂದನ್ನು ಹೊಸ ತಂಡ ಈಗಾಗಲೇ ಚಿತ್ರೀಕರಿಸಿದೆ. ಈ ಚಿತ್ರಕ್ಕೆ ವಿವಿನ್ ಸೂರ್ಯ ನಿರ್ದೇಶಕರು. ಇದು ಅವರ ಮೊದಲ ಚಿತ್ರ. ಆಗಿನ “ಎಡಕಲ್ಲು ಗುಡ್ಡದ ಮೇಲೆ’ ಚಿತ್ರಕ್ಕೂ ಈಗಿನ “ಎಡಕಲ್ಲು ಗುಡ್ಡದ ಮೇಲೆ’ ಸಿನಿಮಾಗೂ ಯಾವುದೇ ಸಂಬಂಧವಿಲ್ಲ. ಆದರೆ, ಆ ಚಿತ್ರದಲ್ಲಿ ನಟಿಸಿದ್ದ ಹಿರಿಯ ಕಲಾವಿದೆ ಜಯಂತಿ ಹಾಗೂ ಚಂದ್ರಶೇಖರ್ ಪುನಃ ಈ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಆರತಿ ಇದ್ದರು, ಇಲ್ಲಿ ಭಾರತಿ ವಿಷ್ಣುವರ್ಧನ್ ಇದ್ದಾರೆ. ಅಲ್ಲಿ ಶಿವರಾಮ್ ಇದ್ದರು. ಇಲ್ಲಿ ದತ್ತಣ್ಣ ಇದ್ದಾರೆ.
ಅಷ್ಟಕ್ಕೂ “ಎಡಕಲ್ಲು ಗುಡ್ಡದ ಮೇಲೆ’ ಅಂದಾಕ್ಷಣ, ಇನ್ನೇನೋ ನೆನಪು ಮಾಡಿಕೊಂಡರೆ ಆ ಊಹೆ ತಪ್ಪು. ಇಲ್ಲಿ ಆ ಚಿತ್ರದಲ್ಲಾಗುವಂತಹ ಆಕಸ್ಮಿಕ ಘಟನೆಗಳು ನಡೆಯೋದಿಲ್ಲ! ಅಂದಹಾಗೆ, ಇದು ಮಕ್ಕಳ ಚಿತ್ರ ಅನ್ನೋದೇ ವಿಶೇಷ. ಇಲ್ಲಿ ನಾಲ್ಕು ಮಕ್ಕಳ ಮೇಲೆ ಕಥೆ ಸಾಗಲಿದೆ. ಇಲ್ಲಿ ಹಿರಿಯ ಕಲಾವಿದರನ್ನು ಹೊರತುಪಡಿಸಿದರೆ, ನಾಯಕ-ನಾಯಕಿ ಅಂತಿರೋದಿಲ್ಲ. ಇಲ್ಲಿ ಕಥೆಯೇ ಹೀರೋ. ಮಕ್ಕಳ ಕಥೆಯಲ್ಲಿ ಚಂದ್ರಶೇಖರ್, ಜಯಂತಿ, ದತ್ತಣ್ಣ, ಭಾರತಿ ವಿಷ್ಣುವರ್ಧನ್ ಇವರೆಲ್ಲರೂ ಬಂದುಹೋಗುತ್ತಾರಷ್ಟೇ.
ಅಷ್ಟಕ್ಕೂ ಆ “ಎಡಕಲ್ಲು ಗುಡ್ಡದ ಮೇಲೆ’ ಸಿನಿಮಾಗೂ, ಈ ಚಿತ್ರಕ್ಕೂ ಸಂಬಂಧವಿಲ್ಲ. ಆದರೆ, ಕಥೆಗೆ ಆ ಶೀರ್ಷಿಕೆ ಹತ್ತಿರವಾಗಿದ್ದರಿಂದಲೇ ಅದನ್ನು ಇಡಲಾಗಿದೆ ಎಂಬುದು ನಿರ್ದೇಶಕ ವಿವಿನ್ ಸೂರ್ಯ ಅವರ ಮಾತು. ಈಗಾಗಲೇ ನಿರ್ದೇಶಕರು ಸದ್ದಿಲ್ಲದೆಯೇ ಶೇ.60 ರಷ್ಟು ಚಿತ್ರೀಕರಣ ಮುಗಿಸಿದ್ದಾರೆ. ಇನ್ನುಳಿದ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ. ಈ ಚಿತ್ರವನ್ನು ಬಹುತೇಕ ಮೈಸೂರಲ್ಲಿ ಚಿತ್ರೀಕರಿಸಲಾಗಿದೆ.
ಇಲ್ಲಿ ಮಕ್ಕಳು ಏನೆಲ್ಲಾ ಮಾಡುತ್ತಾರೆ ಅನ್ನೋದು ಗೌಪ್ಯ. ಆದರೂ, ಮಕ್ಕಳೆಲ್ಲ “ಎಡಕಲ್ಲು ಗುಡ್ಡದ ಮೇಲೆ’ ಹೋದಾಗ ನಡೆಯೋ ಘಟನೆಗಳೇ ಚಿತ್ರದ ಜೀವಾಳ. ಅಂದಹಾಗೆ, ಚಿತ್ರಕ್ಕೆ ಶಂಕರ್ ಕ್ಯಾಮೆರಾ ಹಿಡಿದಿದ್ದಾರೆ. ಸಂಗೀತಕ್ಕೆ ಯಾರನ್ನು ಬಳಸಿಕೊಳ್ಳಬೇಕೆಂಬ ಗೊಂದಲ ನಿರ್ದೇಶಕರಲ್ಲಿದೆ. ಅದೇನೆ ಇರಲಿ, ಈಗ ಹಳೇ ಶೀರ್ಷಿಕೆಗಳ ಪರ್ವ. ಆ ಸಾಲಿಗೆ “ಎಡಕಲ್ಲು ಗುಡ್ಡದ ಮೇಲೆ’ ಸಹ ಸೇರ್ಪಡೆ.