Advertisement

ರಾವೂರ-ಲಕ್ಷ್ಮೀಪುರವಾಡಿ ಶಹಾಬಾದ ತೆಕ್ಕೆಗೆ

03:32 PM Jan 21, 2021 | Team Udayavani |

ವಾಡಿ: ಗ್ರಾಮಸ್ಥರ ತೀವ್ರ ವಿರೋಧದ ಮಧ್ಯೆಯೂ ನಗರ ಸಮೀಪದ ರಾವೂರ ಮತ್ತು ಲಕ್ಷ್ಮೀಪುರವಾಡಿ ಗ್ರಾಮಗಳು ನೂತನ ಶಹಾಬಾದ ತಾಲೂಕಿಗೆ ಸೇರ್ಪಡೆಯಾಗಿವೆ. ಸರ್ಕಾರದ ಗ್ರಾಮ ಹಂಚಿಕೆ ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು, ಗ್ರಾಮಸ್ಥರಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಸರಕಾರ ಚಿತ್ತಾಪುರ ತಾಲೂಕನ್ನು ವಿಂಗಡಿಸಿ ಶಹಾಬಾದ, ಕಾಳಗಿ ನೂತನ ತಾಲೂಕುಗಳನ್ನಾಗಿ ಘೋಷಣೆ ಮಾಡುತ್ತಿದ್ದಂತೆ ಗ್ರಾಮಗಳ ವಿಂಗಡಣೆಯೂ ಮಾಡಲಾಗಿತ್ತು.

Advertisement

ರಾವೂರ ಮತ್ತು ಲಕ್ಷ್ಮೀಪುರವಾಡಿ (ಗಾಂಧಿನಗರ) ಗ್ರಾಮಗಳನ್ನು ಚಿತ್ತಾಪುರ ತಾಲೂಕಿನಿಂದ ಬೇರ್ಪಡಿಸಿ ಶಹಾಬಾದ ತಾಲೂಕಿಗೆ ಸೇರ್ಪಡೆ ಮಾಡುವ
ಮೂಲಕ ಆಕ್ಷೇಪಣೆಗೆ ಅರ್ಜಿ ಆಹ್ವಾನಿಸಲಾಗಿತ್ತು. ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಏರ್ಪಡಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ರಾವೂರ ಮತ್ತು ಲಕ್ಷ್ಮೀಪುರವಾಡಿ ಗ್ರಾಮದ ಮುಖಂಡರು, ಚಿತ್ತಾಪುರಕ್ಕೆ ಸಮೀಪದಲ್ಲಿರುವ ನಮ್ಮೂರುಗಳನ್ನು ಶಹಾಬಾದ ತಾಲೂಕಿಗೆ ಸೇರ್ಪಡೆ ಮಾಡಿರುವುದು ಅವೈಜ್ಞಾನಿಕ ತೀರ್ಮಾನ ಎಂದು ವಾದಿಸಿದ್ದರು. ರಾವೂರ ಮತ್ತು ಲಕ್ಷ್ಮೀಪುರವಾಡಿ ಗ್ರಾಮಗಳು ಚಿತ್ತಾಪುರ ತಾಲೂಕಿನಲ್ಲೇ ಉಳಿಸಿಕೊಳ್ಳಬೇಕು ಎಂದು ಅರ್ಜಿ ಸಲ್ಲಿಸಿದ್ದರು.

ಆದರೆ, ಗ್ರಾಮಸ್ಥರ ಅಭಿಪ್ರಾಯವನ್ನು ಸರಕಾರ ತಿರಸ್ಕರಿಸಿದ್ದು, ಎರಡು ಗ್ರಾಮಗಳನ್ನು ಶಹಾಬಾದ ತಾಲೂಕಿಗೆ ಸೇರ್ಪಡೆ ಮಾಡಿ ಅಂತಿಮ ಆದೇಶ ಹೊರಡಿಸಿದೆ. ಸರಕಾರದ ಈ ತೀರ್ಮಾನವನ್ನು ಗ್ರಾಮದ ಕಾಂಗ್ರೆಸ್‌ ಮುಖಂಡರು ಖಂಡಿಸುತ್ತಿದ್ದರೆ, ಬಿಜೆಪಿ ನಾಯಕರು ಸರಕಾರದ ಆದೇಶವನ್ನು ಬಹಿರಂಗವಾಗಿ ಸ್ವಾಗತಿಸುತ್ತಲೇ ಆಂತರಿಕ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಗ್ರಾಮಸ್ಥರ ವಿರೋಧದ ನಡುವೆಯೂ ಎರಡೂ ಗ್ರಾಮಗಳು ಇನ್ನುಮುಂದೆ ಅಧಿಕೃತವಾಗಿ ಶಹಾಬಾದ ನೂತನ ತಾಲೂಕಿನ ತೆಕ್ಕೆಗೆ ಸೇರಿಕೊಂಡಿದ್ದು, ಚಿತ್ತಾಪುರ ತಾಲೂಕಿನೊಂದಿಗಿದ್ದ ಏಳು ದಶಕಗಳ ಆಡಳಿತಾತ್ಮಕ ಸಂಬಂಧ ಕಳಚಿಕೊಂಡಂತಾಗಿದೆ.

ರಾವೂರ ಮತ್ತು ಲಕ್ಷ್ಮೀಪುರವಾಡಿ ಗ್ರಾಮಗಳನ್ನು ಶಹಾಬಾದ ನೂತನ ತಾಲೂಕಿಗೆ ಸೇರ್ಪಡೆ ಮಾಡಿದ ಸರಕಾರದ ಕ್ರಮ ಸ್ವಾಗತಿಸುತ್ತೇವೆ. ಮುಂದಿನ
ದಿನಗಳಲ್ಲಿ ಸೇಡಂ ಜಿಲ್ಲೆಯಾಗಲಿದ್ದು, ಆಗ ಚಿತ್ತಾಪುರ ತಾಲೂಕು ಸೇಡಂ ಜಿಲ್ಲೆಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ರಾವೂರ ಗ್ರಾಮವು ಸಮೀಪದ ಕಲಬುರಗಿ ಜಿಲ್ಲೆಯಲ್ಲಿ ಉಳಿಯಬೇಕು ಎನ್ನುವ ಉದ್ದೇಶದಿಂದ ಶಹಾಬಾದ ತಾಲೂಕು ನೆಚ್ಚಿಕೊಂಡಿದ್ದೇವೆ.

ಡಾ| ಗುಂಡಣ್ಣ ಬಾಳಿ, ಬಿಜೆಪಿ ಹಿರಿಯ
ಮುಖಂಡ, ರಾವೂರ

Advertisement

ಚಿತ್ತಾಪುರ ತಾಲೂಕಿನಿಂದ ಬೇರ್ಪಟ್ಟ ಶಹಾಬಾದ ನೂತನ ತಾಲೂಕಿಗೆ ರಾವೂರ ಮತ್ತು ಲಕ್ಷ್ಮೀಪುರವಾಡಿ (ಗಾಂಧಿ ನಗರ) ಗ್ರಾಮಗಳನ್ನು ಸೇರ್ಪಡೆ ಮಾಡಿ ಸರಕಾರ ಅಂತಿಮ ಆದೇಶ ಪ್ರಕಟಿಸಿದೆ. ಈ ನಡುವೆ ಅಭಿಪ್ರಾಯ ಸಂಗ್ರಹಿಸಲು ಕರೆಯಲಾಗಿದ್ದ ಸಭೆಯಲ್ಲಿ ಶಹಾಬಾದ ತಾಲೂಕು ಸೇರ್ಪಡೆಗೆ ಗ್ರಾಮದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಚಿತ್ತಾಪುರದಲ್ಲೇ ಉಳಿಸಿ ಎಂದು ಅರ್ಜಿ ಕೊಟ್ಟಿದ್ದರು. ಅದನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಆದರೂ ಅಂತಿಮ ಆದೇಶದಲ್ಲಿ ಈ ಎರಡೂ ಗ್ರಾಮಗಳು ಶಹಾಬಾದ್‌ಗೆ ಸೇರ್ಪಡೆಯಾಗಿವೆ.
ಉಮಾಕಾಂತ ಹಳ್ಳೆ, ತಹಶೀಲ್ದಾರ್‌, ಚಿತ್ತಾಪುರ

ನಮ್ಮ ಬಲವಾದ ವಿರೋಧದ ಮಧ್ಯೆಯೂ ಬಿಜೆಪಿ ಸರಕಾರ ರಾವೂರ ಮತ್ತು ಲಕ್ಷ್ಮೀಪುರವಾಡಿ ಗ್ರಾಮವನ್ನು ಶಹಾಬಾದ ತಾಲೂಕಿಗೆ ಸೇರ್ಪಡೆ ಮಾಡುವ ಮೂಲಕ ಬಹುಸಂಖ್ಯಾತ ಗ್ರಾಮಸ್ಥರ ಮನವಿಯನ್ನು ಧಿಕ್ಕರಿಸಿದೆ. ಇಂತಹ ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ನಿಲ್ಲಬೇಕಾದ ಬಿಜೆಪಿ ನಾಯಕರು, ಸರಕಾರದ ನಡೆಯನ್ನು  ಸಮರ್ಥಿಸಿಕೊಳ್ಳುತ್ತಿದ್ದಾರೆ. ಶಾಸಕ ಪ್ರಿಯಾಂಕ್‌ ಖರ್ಗೆ ಮಾರ್ಗದರ್ಶನದಲ್ಲಿ ಹೋರಾಟ ಆರಂಭಿಸುತ್ತೇವೆ. ರಾವೂರ ಮತ್ತು ಲಕ್ಷ್ಮೀಪುರವಾಡಿ ಗ್ರಾಮಗಳನ್ನು ಶಹಾಬಾದ ತಾಲೂಕಿಗೆ ಸೇರ್ಪಡೆಯಾಗಲು ಬಿಡುವುದಿಲ್ಲ.

ಶ್ರೀನಿವಾಸ ಸಗರ, ಕೆಪಿಸಿಸಿ ಸದಸ್ಯ, ರಾವೂರ

*ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next