Advertisement

Ram Mandir ಉದ್ಘಾಟನೆಯ ದಿನ ಮೋದಿ ಸೇರಿ ಐವರಿಗೆ ಮಾತ್ರ ಗರ್ಭಗುಡಿ ಪ್ರವೇಶ

11:16 AM Dec 29, 2023 | Team Udayavani |

ಹೊಸದಿಲ್ಲಿ/ಅಯೋಧ್ಯೆ: ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ನಡೆಯುವ ದಿನ ಜ.22ರಂದು ಗರ್ಭಗುಡಿಗೆ ಐವರಿಗೆ ಮಾತ್ರ ಪ್ರವೇಶಿಸಲು ಅವಕಾಶ ಕಲ್ಪಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ರಾಜ್ಯ ಪಾಲೆ ಆನಂದಿ ಬೆನ್‌ ಪಟೇಲ್‌, ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್‌, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗ ವತ್‌, ಮಂದಿರದ ಮುಖ್ಯ ಅರ್ಚಕ ಈ ಸಂದರ್ಭದಲ್ಲಿ ಇರಲಿದ್ದಾರೆ. ಪ್ರಾಣ ಪ್ರತಿಷ್ಠೆ ನಡೆಯುವ ಸಂದರ್ಭದಲ್ಲಿ ಪರದೆಯನ್ನು ಹಾಕಲು ತೀರ್ಮಾನಿಸಲಾಗಿದೆ.

Advertisement

ಈ ಐವರ ಸಮ್ಮುಖದಲ್ಲಿಯೇ ಪ್ರತಿಷ್ಠಾಪನೆ ಮಾಡಲಾಗುವ ರಾಮ ಲಲ್ಲಾನ ವಿಗ್ರಹವನ್ನು ತೆರೆಯಲಾಗುತ್ತದೆ. ಧಾರ್ಮಿಕ ವಿಧಿ ವಿಧಾನಗಳ ಅನ್ವಯ ವಿಗ್ರಹಕ್ಕೆ ಮೊದಲು ಕನ್ನಡಿ ತೋರಿಸಲಾಗುತ್ತದೆ. ನಂತರ ಮೂವರು ಆಚಾರ್ಯರ ನೇತೃತ್ವದ ತಂಡ ದಾಲ್‌ಪೂಜೆಯನ್ನು ನಡೆಸಿಕೊಡಲಿದೆ. ಮೊದಲ ತಂಡದ ನೇತೃತ್ವವನ್ನು ಸ್ವಾಮಿ ಗೋವಿಂದ ದೇವ್‌ ಗಿರಿ, ಕಾಂಚಿ ಕಾಮಕೋಟಿ ಪೀಠದ ವಿಜಯೇಂದ್ರ ಸರಸ್ವತಿ ಸ್ವಾಮೀಜಿಗಳು 2ನೇ ತಂಡವನ್ನು , ಕಾಶಿಯಲ್ಲಿರುವ 21 ಮಂದಿ ಧಾರ್ಮಿಕ ವಿದ್ವಾಂಸರ ತಂಡ ಮೂರನೇ ತಂಡ ನಡೆಸಿಕೊಡಲಿದೆ.

ನಾಳೆ ಏರ್‌ಪೋರ್ಟ್‌, ರೈಲು ನಿಲ್ದಾಣ ಲೋಕಾರ್ಪಣೆ ಮಾಡಲಿರುವ ಪ್ರಧಾನಿ

ಅಯೋಧ್ಯೆಯಲ್ಲಿ ಈಗ ಸಂಭ್ರಮದ ವಾತಾವರಣ. ಮುಂದಿನ ತಿಂಗಳ 22ರಂದು ರಾಮ ಮಂದಿರದ ಪ್ರಾಣ ಪ್ರತಿಷ್ಠೆ ನಡೆಯಲಿರುವಂತೆಯೇ ಡಿ.30 ರಂದು 11,100 ಕೋಟಿ ರೂ.ಗಳಿಗೂ ಅಧಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಪುನಃ ಅಭಿವೃದ್ಧಿಪಡಿಸಲಾಗಿರುವ ಅಯೋಧ್ಯೆಯ ರೈಲು ನಿಲ್ದಾಣ, ವಿಮಾನ ನಿಲ್ದಾಣ ಉದ್ಘಾಟನೆ ಪ್ರಮುಖವಾಗಿ ಇರಲಿದೆ.

ಮಂಗಳೂರು- ಮಡ್‌ಗಾಂವ್‌, ಬೆಂಗಳೂರು- ಕೊಯಮತ್ತೂರು ಸೇರಿದಂತೆ ಐದು ವಂದೇ ಭಾರತ್‌ ಎಕ್ಸ್‌ಪ್ರೆಸ್‌, ಬಿಹಾರದ ದರ್ಭಾಂಗ ದಿಂದ ಅಯೋಧ್ಯೆ, ಬೆಂಗಳೂರಿನಿಂದ ಪಶ್ಚಿಮ ಬಂಗಾಲದ ಮಾಲ್ಡಾಕ್ಕೆ ಸಂಚರಿಸಲಿರುವ 2 ಅಮೃತ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರಕ್ಕೆ ಪ್ರಧಾನಿ ಶನಿವಾರ ಹಸುರು ನಿಶಾನೆ ತೋರಿಸಲಿದ್ದಾರೆ.
ಈ ಎಲ್ಲ ಕಾರ್ಯಕ್ರಮಗಳ ಬಳಿಕ ಅವರು 15 ಕಿ.ಮೀ. ದೂರ ಬೃಹತ್‌ ರೋಡ್‌ ಶೋ ನಡೆಸಲಿದ್ದಾರೆ.

Advertisement

ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಫೈನಲ್‌
ಸದ್ಯ ವಿಮಾನ ನಿಲ್ದಾಣಕ್ಕೆ “ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಅಯೋಧ್ಯೆ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣ’ ಎಂಬ ಹೆಸರು ಇದೆ. ಡಿ.30ರಂದು ಪ್ರಧಾನಿ ಮೋದಿ ಏರ್‌ಪೋರ್ಟ್‌ಗೆ “ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾಧಾಮ’ ಎಂದು ಹೊಸ ಹೆಸರು ಇರಿಸಲಿದ್ದಾರೆ ಎನ್ನಲಾಗಿದೆ.

240 ಕೋಟಿ ರೂ. ರೈಲು ನಿಲ್ದಾಣದ ಮೊದಲ ಹಂತದ ಅಭಿವೃದ್ಧಿ ವೆಚ್ಚ
1,450 ಕೋಟಿ ರೂ. ವಿಮಾನ ನಿಲ್ದಾಣ ಕಾಮಗಾರಿ ವೆಚ್ಚ
10ಲಕ್ಷ ಪ್ರಯಾಣಿಕರು ಏರ್‌ಪೋರ್ಟ್‌ನಲ್ಲಿ ನಿರ್ವಹಣೆ ಸಾಮರ್ಥ್ಯ

ಕರೆದರೆ ಹೋಗುವೆ: ಸಿಎಂ ಸೊರೇನ್‌
ಆಹ್ವಾನ ಇನ್ನೂ ಬಂದಿಲ್ಲ: ಶರದ್‌
ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರೆ ತೆರಳುವೆ ಎಂದು ಝಾರ್ಖಂಡ್‌ ಸಿಎಂ, ಝಾರ್ಖಂಡ್‌ ಮುಕ್ತಿ ಮೋರ್ಚಾ ನಾಯಕ ಹೇಮಂತ್‌ ಸೊರೇನ್‌ ಹೇಳಿದ್ದಾರೆ. ಇನ್ನೊಂದೆಡೆ ಎನ್‌ಸಿಪಿ ಸಂಸ್ಥಾಪಕ ಶರದ್‌ ಪವಾರ್‌ ಜ.22ರ ಕಾರ್ಯಕ್ರಮದ ಬಗ್ಗೆ ತಮಗೆ ಆಹ್ವಾನ ಇನ್ನೂ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next