ಮಹಾನಗರ: ಬೀಡಿ ಕಾರ್ಮಿಕರಿಗೆ 2018 ಎ. 1ರಿಂದ ಸಾವಿರ ಬೀಡಿಗೆ 210 ಕನಿಷ್ಠ ಕೂಲಿ ನಿಗದಿಯಾಗಿದೆ. ಆದರೆ ಬೀಡಿ ಮಾಲಕರು ಈ ಕನಿಷ್ಠ ಕೂಲಿಯನ್ನು ಜಾರಿ ಮಾಡಿರುವುದಿಲ್ಲ. ಬದಲಿಗೆ ಈ ಕೂಲಿಯನ್ನು ಕಾರ್ಮಿಕರಿಗೆ ಮೋಸ ಮಾಡಲು ವಾರದಲ್ಲಿ 2 ದಿನಗಳ
ಕೆಲಸ ನೀಡಿ ಒಡೆದು ಆಳುವ ತಂತ್ರವನ್ನು ಅಳವಡಿಸುತ್ತಿರುವುದು ಖಂಡನೀಯ ಎಂದು ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ ಹೇಳಿದರು. ಮಂಗಳೂರಿನ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಮುಂದುಗಡೆ ಮಂಗಳವಾರದಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಬುಧವಾರ (ಎರಡನೇ ದಿನ) ಅವರು ಮಾತನಾಡಿದರು.
ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಫೆಡರೇಶನ್ ಅಧ್ಯಕ್ಷ ವಸಂತ ಆಚಾರಿ ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳು ತಮಗೂ ಕಾರ್ಮಿಕರ ಸಮಸ್ಯೆಗಳಿಗೂ ಸಂಬಂಧವಿಲ್ಲವೆಂದು ವರ್ತಿಸುತ್ತಿರುವುದು ಖಂಡನೀಯ. ವಿಧಾನಸಭಾ ಮತ್ತು ಸಂಸತ್ ಚುನಾವಣೆಯಲ್ಲಿ ನಿಂತು ಗೆಲ್ಲುತ್ತಾರೆ. ಆದರೆ ಅನಂತರ ಉಳ್ಳವರ ಪರವಾಗಿ ಸ್ಪಂದಿಸುತ್ತಾರೆ. ಮುಂದಿನ ಹೋರಾಟ ಜನಪ್ರತಿನಿಧಿಗಳ ಮನೆ ಮುಂದೆ ಕಾರ್ಯಕ್ರಮ ನಡೆಸುವುದು ಅನಿವಾರ್ಯವಾಗುತ್ತದೆ ಎಂದು
ಹೇಳಿದರು.
ಆ. 9ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದುಗಡೆ ಧರಣಿ ಸತ್ಯಾಗ್ರಹವನ್ನು ಮುಂದುವರಿಸಲಾಗುವುದು. ಈ ಮಧ್ಯೆ ಡಿಎಲ್‌ಸಿಯವರು ಜಂಟಿ ಮಾತುಕತೆಯನ್ನು ಕೂಡ ನಿಗದಿಪಡಿಸಿದ್ದು, ಸಮಸ್ಯೆ ಪರಿಹಾರವಾಗದಿದ್ದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಮುಂದುವರಿಸಲಾಗುವುದು ಎಂದರು.
ಫೆಡರೇಶನ್ ಉಪಾಧ್ಯಕ್ಷ ಬಾಬು ದೇವಾಡಿಗ ಮಾತನಾಡಿದರು. 2ನೇ ದಿನದ ಧರಣಿ ಸತ್ಯಾಗ್ರಹದ ನೇತೃತ್ವವನ್ನು ಬೀಡಿ ಕಾರ್ಮಿಕರ ಸಂಘಗಳ ಮುಂದಾಳುಗಳಾದ ಪುಷ್ಪಾ ಶಕ್ತಿನಗರ, ವಿಲಾಸಿನಿ, ಸುಂದರ ಕುಂಪಲ, ಜಯರಾಮ, ಶ್ರೀನಿವಾಸ, ಜನಾರ್ದನ ಕುತ್ತಾರ್, ಪುಷ್ಪಾ ಕುಂಪಲ, ಯು.ಬಿ. ಲೋಕಯ್ಯ, ಕೆ. ಸದಾಶಿವ ದಾಸ್, ಗಂಗಯ್ಯ ಅಮೀನ್ ಮೊದಲಾದವರು ವಹಿಸಿದ್ದರು. ಯು.ಜಯಂತ ನಾಯ್ಕ ಸ್ವಾಗತಿಸಿ, ಪದ್ಮಾವತಿ ಶೆಟ್ಟಿ ವಂದಿಸಿದರು.