ಧಾರವಾಡ: “ಮರಳಿ ಮನೆಗೆ’ ಕಾದಂಬರಿ ಆಧಾರಿತ ಮರಳಿ ಮನೆಗೆ ಚಲನಚಿತ್ರ ಮೇ 5ರಂದು ಬಿಡುಗಡೆಯಾಗಲಿದೆ ಎಂದು ಸಾಹಿತಿ ಯೋಗೀಶ್ ಮಾಸ್ಟರ್ ಹೇಳಿದರು. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಳಿ ಮನೆಗೆ ಚಲನಚಿತ್ರವು, ಕೌಟುಂಬಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಒಳಗೊಂಡಿದೆ.
ನಿಖೀಲ್ ಹೋಂ ಸ್ಕ್ರೀನ್ ನಿರ್ಮಾಣದಲ್ಲಿ ಮೂಡಿ ಬಂದಿದೆ. ಈ ಚಲನಚಿತ್ರದಲ್ಲಿ ಶೃತಿ, ಸುಚೇಂದ್ರ ಪ್ರಸಾದ, ಅನಿರುದ್ಧ, ಶಂಕರ ಆರ್ಯನ್, ಸಹನಾ, ಅರುಂಧತಿ ಜತ್ಕರ್ ಮುಂತಾದ ಕಲಾವಿದರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂದರು. ಚಿತ್ರವನ್ನು ಸುಭಾಷ ಗೌಡ ಮತ್ತು ಎಸ್.ಎನ್. ಲಿಂಗೇಗೌಡ ಚಿತ್ರ ನಿರ್ಮಾಣ ಮಾಡಿದ್ದಾರೆ.
ಚಿತ್ರಕ್ಕೆ ರಾಜ್ ಶಿವಶಂಕರ ಛಾಯಾಗ್ರಹಣವಿದ್ದು, ಚಿತ್ರಕಥೆ, ಸಾಹಿತ್ಯ, ಸಂಗೀತ ಮತ್ತು ನಿರ್ದೇಶನದ ಹೊಣೆಯನ್ನು ತಾವೇ ಹೊತ್ತಿರುವುದಾಗಿ ತಿಳಿಸಿದ ಅವರು ರಾಜ್ಯದ 50ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ಚಿತ್ರ ತೆರೆ ಕಾಣಲಿದೆ ಎಂದರು.
ಮರಾಠಿ ಕುಟುಂಬವೊಂದು ಪ್ರಧಾನವಾಗಿರುವ ಈ ಚಿತ್ರದಲ್ಲಿ ಮರಾಠಿ ಭಾಷೆಯ ಪ್ರಯೋಗವಿದ್ದು, ಅದಕ್ಕೆ ಕನ್ನಡ ಉಪಶೀರ್ಷಿಕೆಗಳನ್ನು ನೀಡಲಾಗಿದೆ. ಸಂತ ಸಾವತಿ ಮತ್ತು ಸಂತ ಜ್ಞಾನೇಶ್ವರ ರಚಿತ ಮರಾಠಿ ಅಭಂಗ ಗೀತೆಗಳನ್ನೂ ಅಳವಡಿಸಲಾಗಿದೆ.
ತಿಪಟೂರು ಸಮೀಪದ ದಂಡಿನ ಶಿವರ, ಅಮ್ಮಸಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು. ಚಿತ್ರದಲ್ಲಿ ಗೀತೆಗಳಿಗೆ ಹೆಚ್ಚಿನ ಪ್ರಾಧ್ಯಾನತೆ ನೀಡಿದ್ದು, ಮೇಘನಾ ವೆಂಕಟೇಶ, ಚೇತನ ಸಾಸ್ಕಾ, ಮುನಿರಾಜು, ಶ್ವೇತಾ ಪ್ರಭು ಹಾಗೂ ರಘುನಂದನ ಭಟ್ ಹಾಡಿದ್ದಾರೆ ಎಂದರು. ಶಂಕರ ಆರ್ಯನ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.