Advertisement

ಜುಲೈ 23ಕ್ಕೆ ಕುರುಕ್ಷೇತ್ರ ಶುರು!

11:41 AM Apr 15, 2017 | Team Udayavani |

ಕಳೆದ ಕೆಲವು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ “ಕುರುಕ್ಷೇತ್ರ’ ಎಂಬ ಹೆಸರಿನ ಚಿತ್ರವೊಂದು ಚಾಲ್ತಿಯಲ್ಲಿದೆ. ಈ ಚಿತ್ರದಲ್ಲಿ ಕನ್ನಡದ ದೊಡ್ಡ ದೊಡ್ಡ ಸ್ಟಾರ್‌ಗಳು ಒಟ್ಟಾಗಿ ನಟಿಸುತ್ತಾರಂತೆ, ಚಿತ್ರವು ಸದ್ಯದಲ್ಲೇ ಸೆಟ್ಟೇರಲಿದೆಯಂತೆ, ಕನ್ನಡದ ಅತೀ ದೊಡ್ಡ ಬಜೆಟ್‌ನ ಚಿತ್ರವು ಇದಾಗಲಿದೆಯಂತೆ ಎಂಬ ಮಾತುಗಳು ಕೇಳಿ ಬರುತ್ತಲೇ ಇದೆ. ಇದೆಷ್ಟು ಸತ್ಯ ಅಥವಾ ಸುಳ್ಳು ಎನ್ನುವುದು ಒಂದು ಕಡೆಯಾದರೆ, ಈ ಚಿತ್ರವನ್ನು ಯಾರು ನಿರ್ಮಿಸುತ್ತಾರೆ ಎಂಬ ಗೊಂದಲವೂ ಹಲವರಲ್ಲಿ ಇತ್ತು.

Advertisement

ಕೆಲವರು ಈ ಚಿತ್ರವನ್ನು ಮುನಿರತ್ನ ನಿರ್ಮಿಸುತ್ತಾರೆ ಎಂದರೆ, ಈ ಚಿತ್ರವನ್ನು ನಿರ್ಮಿಸುತ್ತಿರುವುದು ಜಯಶ್ರೀ ದೇವಿ ಎಂಬ ಮಾತೂ ಇತ್ತು. ಹೀಗೆ ಗೊಂದಲದ ಗೂಡಾಗಿದ್ದ “ಕುರುಕ್ಷೇತ್ರ’ ಚಿತ್ರ ನಿಜಕ್ಕೂ ಸೆಟ್ಟೇರುತ್ತದಾ ಎಂಬ ಪ್ರಶ್ನೆ ಹಲವರಿಗಿತ್ತು. ಅದಕ್ಕೆ ಸರಿಯಾಗಿ ನಟ ಸುದೀಪ್‌ ಸಹ, “ಈ ಸುದ್ದಿ ಕೇಳುವುದಕ್ಕೆ ಚೆನ್ನಾಗಿದೆ. ಆದರೆ, ಇದು ಬಹಳ ಕಷ್ಟ’ ಎಂಬರ್ಥದಲ್ಲಿ ಹೇಳಿದ್ದರು. ಹಾಗಾಗಿ “ಕುರುಕ್ಷೇತ್ರ’ ಎಂಬ ಚಿತ್ರ ಸೆಟ್ಟೇರುವುದೇ ಸುಳ್ಳು ಮತ್ತು ಅದೊಂದು ಕಪೋಕಲ್ಪಿತ ಸುದ್ದಿ ಎಂಬಂತಹ ಮಾತುಗಳೂ ಇದ್ದವು.

ಈ ಸರಿ-ತಪ್ಪು, ನಿಜ-ಸುಳ್ಳುಗಳಿಗೆ ಕೊನೆಗೂ ಬ್ರೇಕ್‌ ಬಿದ್ದಿದೆ. “ಕುರುಕ್ಷೇತ್ರ’ ಎಂಬ ಚಿತ್ರವಾಗುತ್ತಿರುವುದಷ್ಟೇ ಅಲ್ಲ, ಆ ಚಿತ್ರವನ್ನು ತಾವು ನಿರ್ಮಿಸುತ್ತಿರುವುದು ಹೌದು ಎಂದು ಸ್ವತಃ ಮುನಿರತ್ನ ಒಪ್ಪಿಕೊಂಡಿದ್ದಾರೆ. ಶುಕ್ರವಾರ ಸಂಜೆ ನಡೆದ “ಪುಟಾಣಿ ಸಫಾರಿ’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಮುನಿರತ್ನ ಬಂದಿದ್ದರು. ಹಾಡುಗಳು ಬಿಡುಗಡೆ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು “ಕುರುಕ್ಷೇತ್ರ’ ಚಿತ್ರವನ್ನು ನಿರ್ಮಿಸುತ್ತಿರುವುದಷ್ಟೇ ಅಲ್ಲ, ಚಿತ್ರ ಜುಲೈ ತಿಂಗಳ 23ರಂದು ಪ್ರಾರಂಭವಾಗಲಿದೆ ಅಂತಲೂ ಹೇಳಿದ್ದಾರೆ.

“ಹೌದು, ನಾನು “ಕುರುಕ್ಷೇತ್ರ’ ಚಿತ್ರ ಮಾಡುತ್ತಿರುವುದು ಹೌದು. ಚಿತ್ರ ಇದೇ ಜುಲೈ 23ಕ್ಕೆ ಪ್ರಾರಂಭವಾಗಲಿದೆ. ಇನ್ನು ಮುಂದಿನ ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಸದ್ಯಕ್ಕಂತೂ ದುರ್ಯೋಧನನ ಪಾತ್ರಕ್ಕೆ ದರ್ಶನ್‌ ಅವರು ಫಿಕ್ಸ್‌ ಆಗಿದ್ದಾರೆ. ಇನ್ನು ಚಿತ್ರವನ್ನು ನಾಗಣ್ಣ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಮುಖವಾಗಿ ಆರು ಪಾತ್ರಗಳು ಬೇಕು ಮತ್ತು ಕನ್ನಡದ ಮುಖ್ಯ ಹೀರೋಗಳೇ ಬೇಕು. ನನಗೆ ಬೇರೆ ಭಾಷೆಯ ಹೀರೋಗಳಾಗಲೀ, ಕನ್ನಡದ ಸಣ್ಣ-ಪುಟ್ಟ ಹೀರೋಗಳಾಗಲೀ ಖಂಡಿತಾ ಬೇಡ’ ಎಂದು ಸ್ಪಷ್ಟಪಡಿಸುತ್ತಾರೆ ಅವರು.

ದೊಡ್ಡ ಹೀರೋಗಳು ಚಿತ್ರದ ಮುಖ್ಯ ಪಾತ್ರಗಳನ್ನು ಮಾಡಬೇಕು ಎನ್ನುವ ಅವರ ಆಸೆಯೇನೋ ಸರಿ. ಆದರೆ, ಆರು ಮುಖ್ಯ ಪಾತ್ರಗಳನ್ನು ಯಾರು ಮಾಡಬೇಕು ಮತ್ತು ಮುನಿರತ್ನ ಅವರ ಮನಸ್ಸಿನಲ್ಲಿ ಯಾವ ಪಾತ್ರವನ್ನು ಯಾರು ಮಾಡಿದರೆ ಚೆನ್ನ ಎಂದಿದೆ ಎಂದರೆ ಉತ್ತರ ಹೀಗಿದೆ. “ಕರ್ಣನ ಪಾತ್ರವನ್ನು ಸುದೀಪ್‌ ಮಾಡಬೇಕು ಎನ್ನುವುದು ನನ್ನಾಸೆ. ಏಕೆಂದರೆ, ದರ್ಶನ್‌ ಅವರು ದುರ್ಯೋಧನನ ಪಾತ್ರ ಮಾಡುತ್ತಿದ್ದಾರೆ.

Advertisement

ದರ್ಶನ್‌ ಮತ್ತು ಸುದೀಪ್‌ ಅವರು ಸ್ನೇಹಿತರಾಗಿರುವುದರಿಂದ ದುರ್ಯೋಧನ ಮತ್ತು ಕರ್ಣನ ಪಾತ್ರಗಳನ್ನು ಅವರೇ ಮಾಡಿದರೆ ಚಂದ ಎಂಬುದು ನನ್ನ ಅನಿಸಿಕೆ. ಇನ್ನು ಧರ್ಮರಾಯ ಪಾತ್ರವನ್ನು ಶಿವರಾಜಕುಮಾರ್‌, ಭೀಮನ ಪಾತ್ರವನ್ನು ಉಪೇಂದ್ರ, ಅರ್ಜುನನ ಪಾತ್ರವನ್ನು ಪುನೀತ್‌ ಮಾಡಿದರೆ ಚೆನ್ನಾಗಿರುತ್ತದೆ. ಇದು ನನ್ನ ಅನಿಸಿಕೆ ಅಷ್ಟೇ. ಇನ್ನೂ ಕೆಲವು ಪಾತ್ರಗಳಿಗೆ ದೊಡ್ಡ ಹೀರೋಗಳೃ ಬೇಕು. ಆದರೆ, ಯಾರೆಲ್ಲಾ ಚಿತ್ರದಲ್ಲಿ ನಟಿಸಬಹುದು ಗೊತ್ತಿಲ್ಲ.

ಇಲ್ಲಿ ಇನ್ನೂ ಒಂದು ಪ್ರಮುಖ ಸಮಸ್ಯೆಯಿದೆ. ದ್ರೌಪದಿ ವಸ್ತ್ರಾಪಹರಣ ಸಂದರ್ಭದಲ್ಲಿ, ಹೀರೋಗಳೆಲ್ಲಾ ತಲೆ ತಗ್ಗಿಸಿ ಕೂರಬೇಕು. ಹಾಗಾಗಿ ದೊಡ್ಡ ಹೀರೋಗಳು ಒಪ್ಪುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಇತ್ತೀಚೆಗೆ ಎಲ್ಲೋ ಒಂದು ಕಡೆ ಓದಿದ್ದೆ. ಅದೇನೆಂದರೆ, ಡಾ ರಾಜಕುಮಾರ್‌ ಅವರು ತಮಗೆ ಗೊಮ್ಮಟೇಶ್ವರನ ಪಾತ್ರ ಸಿಕ್ಕರೂ ಮಾಡುತ್ತೀನಿ ಎಂದಿದ್ದರಂತೆ. ಅದೇ ನಿಜವಾದ ಕಲೆ. ಒಬ್ಬ ಕಲಾವಿದ ತನ್ನ ಇಮೇಜ್‌ ಬಿಟ್ಟು ಮಾಡಿದರೆ, ಸಿನಿಮಾ ಉಳಿಯುತ್ತದೆ’ ಎನ್ನುತ್ತಾರೆ ಮುನಿರತ್ನ.

ಎಲ್ಲಾ ಸರಿ, ಬೇರೆ ಪಾತ್ರಗಳಿಗೆ ಮುನಿರತ್ನ ಯಾವ್ಯಾವ ಕಲಾವಿದರನ್ನು ಸಂಪರ್ಕಿಸಿದ್ದಾರೆ ಎಂದರೆ, ಅಲ್ಲೊಂದು ಸಮಸ್ಯೆ ಗುರುತಿಸುತ್ತಾರೆ ಮುನಿರತ್ನ. “ದೊಡ್ಡ ಹೀರೋಗಳನ್ನು ಅಪ್ರೋಚ್‌ ಮಾಡಬಹುದು. ಆದರೆ, ಒಂದು ಪಾತ್ರಕ್ಕೆ ಒಬ್ಬ ನಟ ಫಿಕ್ಸ್‌ ಆದರೆ, ಅದೇ ಪಾತ್ರದ ನಿರೀಕ್ಷೆಯಲ್ಲಿರುವ ಮಿಕ್ಕವರು ಹಿಂದೆ ಸರಿಯುತ್ತಾರೆ. ಒಂದಂತೂ ಸತ, ಇಷ್ಟೊಂದು ಹೀರೋಗಳು ಒಟ್ಟಿಗೇ ನಟಿಸಿದರೆ, ಖಂಡಿತಾ ಕನ್ನಡ ಚಿತ್ರರಂಗ ಬೇರೆ ಮಟ್ಟಕ್ಕೆ ಹೋಗುತ್ತದೆ. ಅಷ್ಟೇ ಅಲ್ಲ, ಇವರೆಲ್ಲಾ ಒಂದೇ ಚಿತ್ರದಲ್ಲಿ ನಟಿಸಿದರೆ, ಕನ್ನಡ ಚಿತ್ರರಂಗ ಒಗ್ಗಟ್ಟಾಗಿದೆ ಎಂದು ಸಹ ತೋರಿಸಿಕೊಳ್ಳಬಹುದು’ ಎನ್ನುತ್ತಾರೆ ಮುನಿರತ್ನ.

ಇನ್ನು ದೊಡ್ಡ ದೊಡ್ಡ ಹೀರೋಗಳನ್ನು ಸೇರಿಸಿಕೊಂಡು ಸಿನಿಮಾ ಮಾಡಿದರೆ, ಬಜೆಟ್‌ ಹೆಚ್ಚಾಗುತ್ತದೆ ಎಂಬ ಬಗ್ಗೆ ಮುನಿರತ್ನ ಅವರಿಗೆ ಚಿಂತೆ ಇಲ್ಲ. “ನಾನು ಬಜೆಟ್‌ ಲೆಕ್ಕ ಹಾಕಿಲ್ಲ. ಸಿನಿಮಾ ಏನು ಕೇಳುತ್ತದೋ ಅದಾಗುತ್ತದೆ ಅಷ್ಟೇ. ಸದ್ಯಕ್ಕೆ ಕಲಾವಿದರ ಮತ್ತು ತಂತ್ರಜ್ಞರ ಆಯ್ಕೆಯಾಗುತ್ತಿದೆ. ಮುಂದಿನ 10 ದಿನಗಳಲ್ಲಿ ಒಂದೊಂದೇ ವಿಷಯ ಸ್ಪಷ್ಟವಾಗಲಿದೆ. “ಕಠಾರಿವೀರ ಸುರಸುಂದರಾಂಗಿ’ ಚಿತ್ರವನ್ನು ಬಹಳ ಬೇಗ ಮುಗಿಸಿ, ಬಿಡುಗಡೆ ಮಾಡಿದ್ದೆ. ಈ ಚಿತ್ರ, ಅದಕ್ಕಿಂತ ಬೇಗ ಮುಗಿಯಲಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಮುಂದಿನ ಫೆಬ್ರವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತೀನಿ’ ಎಂದು ಮಾತು ಮುಗಿಸುತ್ತಾರೆ ಮುನಿರತ್ನ.

Advertisement

Udayavani is now on Telegram. Click here to join our channel and stay updated with the latest news.

Next