Advertisement

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

11:23 PM May 06, 2024 | Team Udayavani |

ಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಆರಂಭದಲ್ಲೇ ಎಸ್‌ಐಟಿ ತನಿಖೆ ದಿಕ್ಕು ತಪ್ಪುತ್ತಿರುವಂತಿದೆ ಎಂದು ಶಂಕೆ ವ್ಯಕ್ತಪಡಿಸಿರುವ ಜೆಡಿಎಸ್‌ ನಾಯಕರು, ಮಹಿಳೆ ಅಪಹರಣ ದೂರನ್ನು ಕೆ.ಆರ್‌.ನಗರ ಶಾಸಕ ರವಿಶಂಕರ್‌ ಅವರೇ ಮಹಿಳೆಯ ಪುತ್ರನ ಮೂಲಕ ಕೊಡಿಸಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರವಣ ಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್‌.ಬಾಲಕೃಷ್ಣ ಹಾಗೂ ಜೆಡಿಎಸ್‌ ಜಿಲ್ಲಾಧ್ಯಕ್ಷ ಕೆ.ಎಸ್‌.ಲಿಂಗೇಶ್‌ ಅವರು, ಶಾಸಕ ರೇವಣ್ಣರನ್ನು ಹಣಿಯಲು ಸರಕಾರ ಎಸ್‌ಐಟಿಯನ್ನು ಬಳಸಿಕೊಳ್ಳುತ್ತಿದೆ ಎಂದು ದೂರಿದರು.

ರೇವಣ್ಣ ಅವರ ಮೇಲೆ ಮೊದಲು ಲೈಂಗಿಕ ಕಿರುಕುಳದ ಒಂದು ಪ್ರಕರಣ ದಾಖಲಾಯಿತು. ಆ ಮಹಿಳೆಯಿಂದ ದೂರು ಕೊಡಿಸಿದವರು ಯಾರು? ಅದು ಜಾಮೀನು ಕೊಡಬಹುದಾದ ಪ್ರಕರಣವಾಗಿದ್ದರಿಂದ ಅದೇ ಮಹಿಳೆಯ ಅಪಹರಣದ ದೂರನ್ನು ಕೆ.ಆರ್‌.ನಗರದಲ್ಲಿ ದಾಖಲಿಸಲಾಯಿತು. ಕೆ.ಆರ್‌.ನಗರ ಶಾಸಕ ರವಿಶಂಕರ್‌ ಅವರೇ ಮಹಿಳೆಯ ಪುತ್ರನ ಮೂಲಕ ದೂರು ಕೊಡಿಸಿದ್ದಾರೆ ಎಂದು ಆರೋಪಿಸಿದರು.

ದೂರು ದಾಖಲಿಸಿರುವುದರಲ್ಲಿ
ನನ್ನ ಪಾತ್ರವಿಲ್ಲ: ಶಾಸಕ ರವಿಶಂಕರ್‌
ಕೆ.ಆರ್‌.ನಗರ: ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯ ಪುತ್ರ ತನ್ನ ತಾಯಿ ಕಾಣೆಯಾದ ಬಗ್ಗೆ ದೂರು ದಾಖಲಿಸಿರುವುದರಲ್ಲಿ ನನ್ನ ಪಾತ್ರವಿಲ್ಲ. ಇದರಲ್ಲಿ ನನ್ನ ಕುಮ್ಮಕ್ಕಿದೆ ಮತ್ತು ನನ್ನ ಅಣತಿಯಂತೆ ರಾಜಕೀಯ ಪ್ರೇರಿತ ದೂರು ನೀಡಿದ್ದಾನೆಂದು ಹೇಳಿರುವುದು ಸತ್ಯಕ್ಕೆ ದೂರವಾದ ವಿಚಾರ ಎಂದು ಶಾಸಕ ಡಿ.ರವಿಶಂಕರ್‌ ಸ್ಪಷ್ಟಪಡಿಸಿದ್ದಾರೆ.

ಜೆಡಿಎಸ್‌ ಮುಖಂಡ ಲಿಂಗೇಶ್‌ ಅವರ ಆರೋಪಕ್ಕೆ ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇದು ವೈಯಕ್ತಿಕವಾಗಿ ತೇಜೋವಧೆ ಮಾಡಿ ಸಮಾಜದಲ್ಲಿ ನನ್ನ ಹೆಸರಿಗೆ ಕಪ್ಪು ಮಸಿ ಬಳಿಯುವ ಹುನ್ನಾರವಾಗಿದ್ದು, ಆರೋಪವು ನಿರಾಧಾರವಾಗಿದೆ ಎಂದಿದ್ದಾರೆ.
ಸಂತ್ರಸ್ತೆಯ ಪುತ್ರ ನೇರವಾಗಿ ಅಥವಾ ದೂರವಾಣಿ ಮೂಲಕ ವಾಗಲೀ ನನ್ನನ್ನು ಸಂಪರ್ಕಿಸಿಲ್ಲ. ಹೀಗಿರುವಾಗ ದೂರು ನೀಡಲು ಶಾಸಕರ ಕುಮ್ಮಕ್ಕು ಕಾರಣವೆಂದು ಹೇಗೆ ಹೇಳುತ್ತೀರಿ? ಯಾವುದೇ ವಿಚಾರದ ಬಗ್ಗೆ ಮಾತನಾಡುವಾಗ ಸತ್ಯಾಸತ್ಯತೆಯನ್ನು ಅರಿತುಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next