ಸಿರ್ಸಾ, ಹರಿಯಾಣ : ಗುರ್ಮಿತ್ ರಾಮ್ ರಹೀಮ್ ಸಿಂಗ್‌ನ ಡೇರಾ ಸಚ್ಚಾ ಸೌಧಾ ಆವರಣದ ಮೇಲೆ ನಡೆದಿರುವ ದಾಳಿಯ ಎರಡನೇ ದಿನವಾದ ಇಂದು ಡೇರಾ ಸಂಕೀರ್ಣದೊಳಗೆ ಪೊಲೀಸರಿಗೆ ಅಕ್ರಮ ಸ್ಫೋಟಕ ತಯಾರಿಸುವ ಕಾರ್ಖಾನೆ ಪತ್ತೆಯಾಗಿದೆ.
ಡೇರಾ ಸಂಕೀರ್ಣದಿಂದ ಪೊಲೀಸರು ಸುಮಾರು ಸ್ಫೋಟಕಗಳು ತುಂಬಿರುವ ಸುಮಾರು 80 ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದಾರೆ.
ಸ್ಫೋಟಕ ತಯಾರಿಸುವ ಈ ಕಾರ್ಖಾನೆಗೆ ಪೊಲೀಸರು ಈಗ ಬೀಗಮುದ್ರೆ ಜಡಿದಿದ್ದಾರೆ ಮತ್ತು ವಿಧಿ ವಿಜ್ಞಾನ ತಂಡದವರು ಸ್ಫೋಟಕಗಳ ನಮೂನೆಯನ್ನು ಪರೀಕ್ಷಿಸುತ್ತಿದ್ದಾರೆ.
ಅತ್ಯಂತ ಬಿಗಿ ಭದ್ರತೆಯಲ್ಲಿ ನಿನ್ನೆ ಶುಕ್ರವಾರ ಡೇರಾ ಸಚ್ಚಾ ಸೌಧಾ ಆವರಣದ ಮೇಲೆ ದಾಳಿಯನ್ನು ಕೋರ್ಟ್ ಆದೇಶದ ಪ್ರಕಾರ ಆರಂಭಿಸಲಾಗಿತ್ತು. ಇಂದು ಕೂಡ ದಾಳಿ ಮುಂದುವರಿದಿದ್ದು ಅನೇಕ ಬಗೆಯ ಭೂಗತ ಅಕ್ರಮ ಚಟುವಟಿಕೆಗಳು ಒಂದರ ಬಳಿಕ ಒಂದರಂತೆ ಇಲ್ಲಿ ಪತ್ತೆಯಾಗುತ್ತಿವೆ.
ನಿನ್ನೆಯ ಮೊದಲ ಎರಡು ತಾಸಿನ ಶೋಧ – ದಾಳಿ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ನಗದು, ಪ್ಲಾಸ್ಟಿಕ್ ಹಣ ಮತ್ತು ನಿಷೇಧಿತ ಕರೆನ್ಸಿಗಳು ಪತ್ತೆಯಾಗಿದ್ದವು. ಅದೇ ವೇಳೆ ಪೊಲೀಸರು ಕಂಪ್ಯೂಟರ್ ಹಾರ್ಡ್ ಡಿಸ್ಕ್ಗಳು ಮತ್ತು ಕಂಪ್ಯೂಟರ್‌ಗಳನ್ನು ವಶಪಡಿಸಿಕೊಂಡಿದ್ದರು.
ಎಲ್ಲಕ್ಕಿಂತ ಮಿಗಿಲಾಗಿ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳ ಸಹಿತ ಐವರನ್ನು ಡೇರಾ ಕ್ಯಾಂಪಸ್‌ನಿಂದ ಪಾರುಗೊಳಿಸಲಾಗಿತ್ತು.
ಅಧಿಕಾರಿಗಳ ತಂಡ, ಪೊಲೀಸರು ಹಾಗೂ ನೂರಾರು ಛಾಯಾ ಸೈನಿಕ ದಳದವರು ದಾಳಿ ಕಾರ್ಯಾಚರಣೆಗಾಗಿ ತಮ್ಮೊಂದಿಗೆ 50 ವಿಡಿಯೋಗ್ರಾಫರ್‌ಗಳನ್ನು, ಡಜನ್‌ಗೂ ಅಧಿಕ ಲಾಕ್ ಸ್ಮಿತ್‌ಗಳನ್ನು ಒಯ್ದಿದ್ದರು. ಮಾತ್ರವಲ್ಲದೆ ಡೇರಾ ಆವರಣದೊಳಗೆ ಇದೆ ಎನ್ನಲಾಗಿರುವ ಭೂಗತ ಸುರಂಗಗಳನ್ನು ಪತ್ತೆ ಹಚ್ಚಲು ನೆಲ ಕೊರೆವ ಯಂತ್ರಗಳನ್ನೂ ಒಯ್ದಿದ್ದರು.