ನವದೆಹಲಿ: ಮಂಗಳವಾರ ರಾಜ್ಯಸಭೆಯಲ್ಲಿ ನೋಟು ಅಮಾನ್ಯ ಕ್ರಮ ಹಾಗೂ ಸುಸ್ತಿದಾರರ ವಿಚಾರವನ್ನೆತ್ತಿಕೊಂಡು ಪ್ರತಿಪಕ್ಷಗಳು ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳ ಮಳೆಯನ್ನೇ ಸುರಿಸಿತು. ಶೂನ್ಯ ವೇಳೆಯಲ್ಲಿ ಅಪನಗದೀಕರಣ ವಿಚಾರ ಎತ್ತಿದ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, ನೋಟು ಅಮಾನ್ಯದ ಬಳಿಕ ಸಂಗ್ರಹವಾದ ಹಳೇ ನೋಟುಗಳ ಮೌಲ್ಯ ಬಹಿರಂಗಪಡಿಸದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
‘9 ತಿಂಗಳಲ್ಲಿ ಮಗುವೇ ಹುಟ್ಟುತ್ತದೆ. ಆದರೆ, ದೇಶದ ಬ್ಯಾಂಕುಗಳಿಗೆ ಎಷ್ಟು ನೋಟುಗಳು ಬಂದವು ಎಂಬುದು ಇನ್ನೂ ಗೊತ್ತಾಗಿಲ್ಲ. ನಾವು ಚಂದ್ರ, ಮಂಗಳ, ಡಿಜಿಟಲ್ ಭಾರತದ ಬಗ್ಗೆ ಮಾತನಾಡುತ್ತೇವೆ. ಆದರೆ, ಸಂಗ್ರಹವಾದ ಹಣವನ್ನು ಎಣಿಕೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ,’ ಎಂದು ಪ್ರಶ್ನಿಸಿದರು. ಇವರ ಹೇಳಿಕೆಗೆ ಇತರೆ ಪ್ರತಿಪಕ್ಷಗಳೂ ದನಿಗೂಡಿಸಿದವು.
ಇದಕ್ಕೆ ಲಿಖೀತ ಉತ್ತರ ನೀಡಿದ ವಿತ್ತ ಸಚಿವ ಅರುಣ್ ಜೇಟ್ಲಿ,
‘ಅಮಾನ್ಯಗೊಂಡ ನೋಟುಗಳನ್ನು ಆರ್‌ಬಿಐ ಎಣಿಕೆ ಮಾಡುತ್ತಿದೆ. ಪ್ರಕ್ರಿಯೆ ಮುಂದುವರಿದಿದ್ದು, ಅಂಕಿಸಂಖ್ಯೆಯಲ್ಲಿ ಸ್ಪಷ್ಟನೆ ಇರಲಿ ಎಂಬ ಕಾರಣಕ್ಕೆ ಯಂತ್ರಗಳ ಮೂಲಕವೂ ಎಣಿಕೆ ಮಾಡಲಾಗುತ್ತಿದೆ. ಆದಷ್ಟು ಬೇಗ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ’ ಎಂದಿದ್ದಾರೆ. ಜತೆಗೆ, ನೋಟು ಅಮಾನ್ಯ ಕ್ರಮದಿಂದ ದೇಶಕ್ಕೆ ಅನುಕೂಲವಾಗಿದ್ದು, 2016ರ ನ.9 ರಿಂದ 2017ರ ಜ.10ರವರೆಗೆ ಐಟಿ ಇಲಾಖೆ ದೇಶಾದ್ಯಂತ 610 ಕೋಟಿ ರೂ. ಮೌಲ್ಯದ ನಗದು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದೆ. 5,400 ಕೋಟಿಗೂ ಹೆಚ್ಚು ಅಘೋಷಿತ ಆದಾಯ ಪತ್ತೆಯಾಗಿದೆ ಎಂದಿದ್ದಾರೆ.
ಸುಸ್ತಿದಾರರ ಹೆಸರು ಪ್ರಕಟಿಸಿ: ತದನಂತರ, ಎಸ್ಪಿ ನಾಯಕ ನರೇಶ್ ಅಗರ್ವಾಲ್ ಅವರು ಸುಸ್ತಿದಾರರ ವಿಚಾರ ಪ್ರಸ್ತಾಪಿಸಿ, ಟಾಪ್ 100 ಸುಸ್ತಿದಾರರ ಹೆಸರನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದರು. ಮರುಪಾವತಿ ಮಾಡಿಲ್ಲವೆಂದು ರೈತರ, ವಿದ್ಯಾರ್ಥಿಗಳ ಹೆಸರು ಬಹಿರಂಗಪಡಿಸುವ ಸರ್ಕಾರ, ಸುಸ್ತಿದಾರ ಕಾರ್ಪೊರೇಟ್ ಕುಳಗಳ ಹೆಸರನ್ನೇಕೆ ಬಹಿರಂಗಪಡಿಸುತ್ತಿಲ್ಲ? ಮೊದಲು ಅವರ ಹೆಸರನ್ನು ಪ್ರಕಟಿಸಿ. ಅವರು ಯಾರ ರಕ್ಷಣೆಯಲ್ಲಿ ಅವಿತಿದ್ದಾರೆ ಎಂಬುದು ತಿಳಿಯಲಿ ಎಂದು ಒತ್ತಾಯಿಸಿದರು. ಇತ್ತೀಚೆಗೆ ದೇಶದ ಒಟ್ಟು ಅನುತ್ಪಾದಕ ಆಸ್ತಿಯ ಪೈಕಿ ಶೇ.25ರಷ್ಟನ್ನು 12 ಮಂದಿ ಹೊಂದಿದ್ದಾರೆ ಎಂದು ಆರ್‌ಬಿಐ ಹೇಳಿತ್ತು. ಆದರೆ, ಅವರ ಹೆಸರು ಬಹಿರಂಗಪಡಿಸಲ್ಲ ಎಂದೂ ತಿಳಿಸಿತ್ತು.
ಏತನ್ಮಧ್ಯೆ, ಲೋಕಸಭೆಯಲ್ಲಿ ಪ್ರತಿಪಕ್ಷಗಳು ಸಂಸದರ ಅಮಾನತು, ಗೋರಕ್ಷಣೆ ಹೆಸರಲ್ಲಿ ಹತ್ಯೆ ಕುರಿತು ಚರ್ಚೆ ಮತ್ತಿತರ ವಿಚಾರಗಳನ್ನು ಎತ್ತಿಕೊಂಡು ಗದ್ದಲ ನಡೆಸಿದ್ದು, ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಮೇಡಂ ಸ್ಪೀಕರ್, ನಮ್ಮ ಪಕ್ಷದ 6 ಮಂದಿ ಸಂಸದರ ಅಮಾನತು ಆದೇಶವನ್ನು ದಯವಿಟ್ಟು ಹಿಂಪಡೆಯಿರಿ. ನೀವು ತುಂಬಾ ಒಳ್ಳೆಯ ಮನಸ್ಸಿನವರು.
– ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ನಾಯಕ
ಓಹೋ, ಅದಕ್ಕೆ ನೀವು ಏನನ್ನು ಬೇಕಿದ್ದರೂ ನನ್ನ ಮೇಲೆ ಎಸೆಯಬಹುದು ಎಂದು ಯೋಚಿಸಿದ್ದೀರಾ?
– ಸುಮಿತ್ರಾ ಮಹಾಜನ್, ಲೋಕಸಭೆ ಸ್ಪೀಕರ್