ವಾಷಿಂಗ್ಟನ್: ಅಮೆರಿಕದ ಅತೀದೊಡ್ಡ ವಿಮಾನಯಾನ ಸಂಸ್ಥೆ ಅಮೆರಿಕನ್ ಏರ್ಲೈನ್ಸ್ ಚಟುವಟಿಕೆಗಳಿಗೆ ಮಂಗಳವಾರ ಬೆಳಗ್ಗೆ ಅಡ್ಡಿಯಾಗಿದ್ದು, ಭಾರೀ ಸಮಸ್ಯೆ ಎದುರಿಸಬೇಕಾಯಿತು.
ತಾಂತ್ರಿಕ ತೊಂದರೆ ಕಾರಣದಿಂದಾಗಿ ಸಂಸ್ಥೆಯ ಬಹುತೇಕ ವಿಮಾನಗಳು ಹಾರಾಟ ನಡೆಸಲಿಲ್ಲ ಎಂದು ಅಮೆರಿಕದ ನಾಗರಿಕ ವಿಮಾಯಾನ ಸಂಸ್ಥೆ ಹೇಳಿದೆ.
ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಅಮೆರಿಕನ್ ಏರ್ಲೈನ್ಸ್ ಕೈ ಕೊಟ್ಟಿದ್ದರಿಂದ ಅಮೆರಿಕದಾದ್ಯಂತ ಪ್ರಯಾಣಿಕರು ಭಾರೀ ಸಮಸ್ಯೆಯನ್ನು ಅನುಭವಿಸಿದರು.
ಇಷ್ಟಾಗಿಯೂ, ಕಂಪೆನಿಯು ಸ್ವಲ್ಪ ಹೊತ್ತಿನಲ್ಲಿ ತಾಂತ್ರಿಕ ಸಮಸ್ಯೆ ನೀಗಿಕೊಂಡು ಮತ್ತೆ ವಿಮಾನ ಹಾರಾಟವನ್ನು ಶುರು ಮಾಡಿತು. ವಿಮಾನ ಹಾರಾಟಕ್ಕೆ ಅಗತ್ಯವಿರುವ ತೂಕ ಮತ್ತು ಬ್ಯಾಲೆನ್ಸ್ ಲೆಕ್ಕಾಚಾರ ಹಾಕುವ ವ್ಯವಸ್ಥೆಯಲ್ಲಿ ತಾಂತ್ರಿಕ ತೊಂದ ರೆಯಿಂದ ಸಮಸ್ಯೆ ಎದುರಾಯಿತು ಎಂದು ಸಂಸ್ಥೆ ಹೇಳಿಕೊಂಡಿದೆ.
ಮಂಗಳವಾರ ಸಂಸ್ಥೆಯ 3,300 ವಿಮಾನಗಳು ಹಾರಾಟದ ವೇಳಾಪಟ್ಟಿಯಲ್ಲಿದ್ದವು. ತೊಂದರೆಗಾಗಿ ಸಂಸ್ಥೆಯು ಪ್ರಯಾಣಿಕರಲ್ಲಿ ಕ್ಷಮೆಯನ್ನು ಕೋರಿದೆ. ಎಲ್ಲ ವಿಮಾನಗಳು ಹಾರಾಟವನ್ನು ಸ್ಥಗಿತಗೊಳಿಸುತ್ತಿದ್ದಂತೆ ಪ್ರಯಾಣಿಕರು ಸೋಶಿಯಲ್ ಮೀಡಿಯಾಗಳಲ್ಲಿ ಸಮಸ್ಯೆಗಳನ್ನು ಹಂಚಿಕೊಂಡಿದ್ದರು.