ನವದೆಹಲಿ: ಜಿಮ್ (gym) ಮಾಲೀಕನನ್ನು (35ವರ್ಷ) ಗುಂಡಿಟ್ಟು ಹ*ತ್ಯೆಗೈದಿರುವ ಘಟನೆ ಗುರುವಾರ (ಸೆ.12) ತಡರಾತ್ರಿ ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ I ರಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗ್ರೇಟರ್ ಕೈಲಾಶ್ I ನ ಜನನಿಬಿಡ ಪ್ರದೇಶದಲ್ಲಿ ದುಷ್ಕರ್ಮಿಗಳು ಜಿಮ್ ಮಾಲೀಕನನ್ನು ಗುಂಡಿಟ್ಟು ಕೊ*ಲೆಗೈದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ಗೋಲ್ಡೈ ಬ್ರಾರ್ ನ ನಿಕಟವರ್ತಿ ರೋಹಿತ್ ಗೋದಾರಾ ಈ ಹ*ತ್ಯೆಯ ಹೊಣೆಯನ್ನು ಹೊತ್ತುಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಬಗ್ಗೆ ಎನ್ ಡಿಟಿವಿ ಖಚಿತಪಡಿಸುವುದಿಲ್ಲ ಎಂದು ಹೇಳಿದೆ.
ಅಫ್ಘಾನ್ ಮೂಲದ ನಾದಿರ್ ಶಾ ಸಿಆರ್ ಪಾರ್ಕ್ ಪ್ರದೇಶದಲ್ಲಿ ವಾಸವಾಗಿದ್ದು, ಗುರುವಾರ ತಡರಾತ್ರಿ ಕಾರ್ ಪಾರ್ಕಿಂಗ್ ನಲ್ಲಿ ಮತ್ತೊಬ್ಬ ವ್ಯಕ್ತಿಯ ಜತೆ ಮಾತನಾಡುತ್ತಿದ್ದ. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ್ದ ವ್ಯಕ್ತಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದ, ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದು, ಶಾ ಸ್ಥಳದಲ್ಲೇ ಕೊನೆಯುಸಿರೆಳೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಾ ಮೇಲೆ 6ರಿಂದ 8 ಗುಂಡುಗಳು ಬಿದ್ದಿದ್ದು, ಸ್ಥಳದಲ್ಲಿ ಖಾಲಿಯಾದ ಕಾರ್ಟ್ ರಿಡ್ಜ್ ಸ್ ಬಿದ್ದಿರುವುದು ಪತ್ತೆಯಾಗಿದೆ. ಪೊಲೀಸರ ಮಾಹಿತಿಯಂತೆ, ಶಾ ದುಬೈನಲ್ಲೂ ವ್ಯವಹಾರ ಹೊಂದಿದ್ದು, ಈತನ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳು ಇದ್ದಿರುವುದಾಗಿ ತಿಳಿಸಿದ್ದಾರೆ.