ಬಳ್ಳಾರಿ: ಸುಪ್ರೀಂ ಹೀರೋ ಶಶಿಕುಮಾರ ಪುತ್ರ ಅಕ್ಷಿತ್ ಶಶಿಕುಮಾರ್, ಸನಾದಿ ಅಪ್ಪಣ್ಣ ಮೊಮ್ಮಗಳು ಕೀರ್ತಿ ಕಲ್ಕೆರೆ ನಾಯಕಿಯಾಗಿ ನಟಿಸಿರುವ “ಓ ಮೈ ಲವ್’ ಜುಲೈ 15ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ನಾಯಕ ಅಕ್ಷಿತ್ ಶಶಿಕುಮಾರ್ ಮೊದಲಬಾರಿಗೆ ಬಣ್ಣ ಹಚ್ಚಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದು, ನಾಯಕಿ ಕೀರ್ತಿಕಲ್ಕೆರೆ ಅವರಿಗೆ ಇದು ಎರಡನೇ ಚಿತ್ರವಾಗಿದೆ ಎಂದು ಚಿತ್ರದ ನಿರ್ದೇಶಕ ಸ್ಮೈಲ್ ಶ್ರೀನು, ನಿರ್ಮಾಪಕ ಬಿ.ರಾಮಾಂಜಿನಿ ಅವರು ನಗರದ ಪತ್ರಿಕಾಭವನದಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಿಡುಗಡೆ, ಚಿತ್ರೀಕರಣ, ತಾರಾಗಣ ಕುರಿತು ಮಾಹಿತಿ ನೀಡಿದರು.
ನಿರ್ದೇಶಕ ಸ್ಮೈಲ್ ಶ್ರೀನಿವಾಸ್ ಮಾತನಾಡಿ, ಚಿತ್ರದ ಕಥೆ ಒಂದು ತ್ರಿಕೋನ ಕಥಾ ಹಂದರ ಹೊಂದಿದೆ. ಇಡೀ ಕುಟುಂಬ ಕುಳಿತುಕೊಂಡು ನೋಡಬಹುದಾದ ಚಿತ್ರವಾಗಿದ್ದು, ವಾಣಿಜ್ಯ ಮೌಲ್ಯಗಳನ್ನು ಹೊಂದಿರುವ ಪಕ್ಕ ಕಮರ್ಷಿಯಲ್ ಚಿತ್ರವಾಗಿದೆ ಎಂದು ತಿಳಿಸಿದರು.
ಚಿತ್ರವನ್ನು ಬೆಂಗಳೂರು ಸುತ್ತಮುತ್ತ, ಉತ್ತರಪ್ರದೇಶ, ಮಧ್ಯಪ್ರದೇಶ, ಗೋವಾದಲ್ಲಿ ಚಿತ್ರೀಕರಣ ಮಾಡಲಾಗಿದೆ. ಆರು ಹಾಡುಗಳಿವೆ. ಡ್ಯಾನ್ಸ್‌ಗೆ ಹೆಸರಾಗಿರುವ ಶಶಿಕುಮಾರ ಅವರ ಪುತ್ರ ತಂದೆಗೆ ತಕ್ಕಂತೆ ಡ್ಯಾನ್ಸ್ ಮಾಡಿದ್ದಾರೆ. ಇದಲ್ಲದೆ ಚಿತ್ರದಲ್ಲಿ ನಾಲ್ಕು ಫೈಟ್‌ಗಳಿದ್ದು, ಅದ್ಭುತವಾಗಿ ಮೂಡಿಬಂದಿವೆ ಎಂದ ಅವರು, ತಾರಾಗಣದಲ್ಲಿ ಅತ್ಯಂತ ನುರಿತ ಕಲಾವಿದರ ದಂಡೇ ಇದೆ.
ಮಗಧೀರ ಚಿತ್ರದಲ್ಲಿ ರಾಮಚರಣ್ ತೇಜಗೆ ಟಕ್ಕರ್ ಕೊಟ್ಟ ದೇವ್‌ಗಿಲ್, ಮನೋರಂಜನ್ ರವಿಚಂದ್ರನ್ ಜೊತೆ ಪ್ರಾರಂಭ ಎಂಬ ಸಿನಿಮಾದಲ್ಲಿ ನಟಿಸಿದ್ದ ಕೀರ್ತಿ ಕಲ್ಕೆರೆ, ಸಾಧು ಕೋಕಿಲ, ಪವಿತ್ರ ಲೋಕೇಶ್, ಎಸ್. ನಾರಾಯಣ್, ಅಕ್ಷತ ಅಶೋಕ್ ಸೇರಿದಂತೆ ಬಹುದೊಡ್ಡ ನಟ, ನಟಿಯರು ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಅವರು ತಿಳಿಸಿದರು.
ಚಿತ್ರದ ನಿರ್ಮಾಪಕ ಬಿ. ರಾಮಾಂಜಿನಿ ಮಾತನಾಡಿ, ಇದು ಬಳ್ಳಾರಿಯವರೇ ಮಾಡಿದ ಚಿತ್ರ. ನಾನು ಮತ್ತು ಚಿತ್ರದ ನಿರ್ದೇಶಕ ಸ್ಮೈಲ್ ಶ್ರೀನಿವಾಸ್ ಸಹ ಬಳ್ಳಾರಿಯವರು. ಹಾಗಾಗಿ ಈ ಚಿತ್ರದ ಮೇಲೆ ಸಹಜವಾಗಿಯೇ ಬಳ್ಳಾರಿಗರಿಗೆ ವಿಶೇಷ ಪ್ರೀತಿ ಇದ್ದೇ ಇದೆ. ಚಿತ್ರದ ಟೀಸರ್ ಅನ್ನು ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ, ತೆಲುಗು ಚಿತ್ರದ ಪಿತಾಮಹ ಕೆ. ರಾಘವೇಂದ್ರ ರಾವ್, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ರಾವ್ ಬಿಡುಗಡೆ ಮಾಡಿದ್ದಾರೆ ಎಂದು ಅವರು
ತಿಳಿಸಿದರು.
ನಾಯಕ ನಟ ಅಕ್ಷಿತ್ ಮಾತನಾಡಿ, ಇದು ನನ್ನ ಮೊದಲ ಚಿತ್ರ. ಚಿತ್ರದಲ್ಲಿ ನಾನು ನಿರ್ದೇಶಕರ ಅಣತಿಯಂತೆ ಕೆಲಸ ಮಾಡಿದ್ದೇನೆ. ಫೈಟ್ ಮಾಡುವಾಗ ಕೈಗೆ ಗಾಯವಾಗಿ ಹೊಲಿಗೆ ಬಿದ್ದಿವೆ. ಇನ್ನು ಡ್ಯಾನ್ಸ್ ಅನ್ನು ನನ್ನ ತಂದೆ ಹಾಗೆಯೇ ಎಂಜಾಯ್ ಮಾಡಿಕೊಂಡು ಕುಣದಿದ್ದೇನೆ. ಖಂಡಿತಾ ನಿಮಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ. ಚಿತ್ರದ ಹಾಡೊಂದು ಯುಟ್ಯೂಬ್‌ನಲ್ಲಿ ಬಿಡುಗಡೆಮಾಡಿದ್ದು, 1.4 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಎಂದರು. ಚಿತ್ರದಲ್ಲಿ ಪ್ರಮುಖ
ಪಾತ್ರವೊಂದನ್ನು ನಿಭಾಯಿಸಿರುವ ಅಕ್ಷತ್ ಅಶೋಕ್ ಇದ್ದರು.