ಚಿತ್ತಾಪುರ: ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಗಾಂಜಾ ಮಾರಾಟ ವಿಚಾರವಾಗಿ ನಡೆದ ಯುವಕನ ಕೊಲೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಸ್ಥಳೀಯ ಪೊಲೀಸ್ ಠಾಣೆ ಪಿಎಸ್‌ಐ ಮಂಜುನಾಥ ರೆಡ್ಡಿ ಅವರನ್ನು ಎಸ್ಪಿ ಇಶಾ ಪಂತ್ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಗಾಂಜಾ ಸಂಬಂಧ ಯುವಕನ ಕೊಲೆ ಪ್ರಕರಣದ ಪರಿಶೀಲನೆಗೆಂದು ಕಳೆದ ರವಿವಾರ ಚಿತ್ತಾಪುರಕ್ಕೆ ಭೇಟಿ ನೀಡಿದ್ದ ಇಶಾ ಪಂತ್ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಹಾಗೂ ಆಶ್ರಯ ಕಾಲೋನಿ ನಿವಾಸಿಗಳಿಂದ ಸಮಗ್ರ ಮಾಹಿತಿ ಕಲೆ ಹಾಕಿದ್ದರು. ಕೊಲೆ ಆರೋಪಿ ಸಲೀಂನಿಂದ ಗಾಂಜಾ ಮಾರಾಟದ ವಿವರ ಪಡೆದ ಅವರು ಸ್ಥಳೀಯ ಪೊಲೀಸರ ಕರ್ತವ್ಯ ಲೋಪದ ಬಗ್ಗೆ ಮಾಹಿತಿ ಪಡೆದು ಬಿಸಿ ಮುಟ್ಟಿಸಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರದಿಂದ ಗಾಂಜಾ ತಂದು ಚಿತ್ತಾಪುರದಲ್ಲಿ ಮಾರಾಟ ಮಾಡುತ್ತಿರುವ ವಿಷಯವನ್ನು ಕೊಲೆ ಆರೋಪಿ ಸಲೀಂ ಎಸ್ಪಿ ಇಶಾ ಪಂತ್ ಅವರ ಎದುರು ಬಾಯಿ ಬಿಟ್ಟಿದ್ದಾನೆ. ಗಾಂಜಾ ಸಂಬಂಧ ಸ್ಥಳೀಯ ಪೊಲೀಸರು ಮೊಬೈಲ್ ಮೂಲಕ ಮಾತನಾಡಿರುವ ವಿವರ, ಠಾಣೆಗೆ ಕರೆಸಿ ಮನೆಗೆ ಕಳುಹಿಸಿರುವ ಕುರಿತು ವಿವರ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಾಂಜಾದಂತ ಕಾನೂನು ಬಾಹಿರ ಪದಾರ್ಥಗಳ ಕುರಿತು ಗಂಭೀರವಾಗಿ ಪರಿಗಣಿಸದೇ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿರುವ ಕೆಲವು ಪೊಲೀಸ್ ಸಿಬ್ಬಂದಿ ನೆತ್ತಿ ಮೇಲೆ ಕಾನೂನು ಕ್ರಮದ ತೂಗುಗತ್ತಿ ನೇತಾಡುತ್ತಿದೆ. ಯಾವ ಪೊಲೀಸರು ಆರೋಪಿ ಸಲೀಂನೊಂದಿಗೆ ಮಾತನಾಡಿದ್ದಾರೆ. ಒಂದು ವರ್ಷದಲ್ಲಿ ಎಷ್ಟು ಸಲ ಕರೆ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ನಾಲ್ಕರಿಂದ ಆರು ಜನ ಸಿಬ್ಬಂದಿ ಸಲೀಂ ಜತೆ ಮೊಬೈಲ್ ಕರೆ ಮೂಲಕ ಮಾತನಾಡಿರುವ ಕುರಿತು ಎಸ್ಪಿ ಅವರಿಗೆ ಮಾಹಿತಿ ಇದೆ ಎಂದು ಗೊತ್ತಾಗಿದೆ.
ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್ ಅವರು ಗಾಂಜಾ ಸಾಗಾಟ, ಮಾರಾಟ ತಡೆಯುವಂತೆ ನಿರ್ದೇಶನ ನೀಡಿದ್ದರು.