ನವದೆಹಲಿ: ಕೋವಿಡ್ 19 ನೂತನ ರೂಪಾಂತರ ತಳಿ ಸೋಂಕು ಒಂಬತ್ತು ಮಂದಿಯಲ್ಲಿ ಪತ್ತೆಯಾಗಿದ್ದು, ಇವರೆಲ್ಲರನ್ನೂ ಜೈಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂಬತ್ತು ಮಂದಿಯ ವರದಿ ನೆಗೆಟಿವ್ ಎಂದು ಬಂದ ಹಿನ್ನೆಲೆಯಲ್ಲಿ ಗುರುವಾರ(ಡಿಸೆಂಬರ್ 09) ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಲಾಗಿದೆ.
ರಾಜಸ್ಥಾನ್ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಎಲ್ಲಾ ಒಂಬತ್ತು ಮಂದಿ ಸಂಪೂರ್ಣವಾಗಿ ಆರೋಗ್ಯವಂತರಾಗಿದ್ದಾರೆ. ಅವರ ರಕ್ತ, ಸಿ.ಟಿ ಸ್ಕ್ಯಾನ್ ಸೇರಿದಂತೆ ಎಲ್ಲಾ ಪರೀಕ್ಷೆಯ ವರದಿಯು ನೆಗೆಟಿವ್ ಬಂದಿದೆ. ಆದರೂ ಏಳು ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ವೈದ್ಯರು ಸೂಚಿಸಿರುವುದಾಗಿ ವರದಿ ತಿಳಿಸಿದೆ.
ಕೋವಿಡ್ ನ ನೂತನ ರೂಪಾಂತರ ತಳಿ ಒಮಿಕ್ರಾನ್ ಸುದ್ದಿ ಹೊರಬಿದ್ದ ನಂತರ ನಾವು ಎಚ್ಚರಿಕೆಯಿಂದ ಇದ್ದು, ಈ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದೇವೆ ಎಂದು ರಾಜಸ್ಥಾನ್ ಆರೋಗ್ಯ ಸಚಿವ ಪರ್ಸಾದಿ ಲಾಲ್ ಮೀನಾ ತಿಳಿಸಿದ್ದಾರೆ.
ಜಿನೋಮ್ ಸೀಕ್ವೆನ್ಸಿಂಗ್ ವರದಿ ಬಂದ ನಂತರ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸೋಂಕಿತರಿಗೆ ಚಿಕಿತ್ಸೆ ನೀಡಲು ಆರಂಭಿಸಲಾಗಿತ್ತು. ಅಲ್ಲದೇ ಸೋಂಕಿತರ ಸಂಪರ್ಕಕಕ್ಕೆ ಬಂದ ವ್ಯಕ್ತಿಗಳನ್ನು ಗುರುತಿಸಿ, ಪತ್ತೆಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ವರದಿ ಹೇಳಿದೆ.
ಒಮಿಕ್ರಾನ್ ಸೋಂಕು ಕ್ಷಿಪ್ರವಾಗಿ ಹರಡಬಲ್ಲದು, ಆದರೆ ಇದು ಡೆಲ್ಟಾ ಮಾದರಿ ಸೋಂಕಿಂತ ಹೆಚ್ಚು ಅಪಾಯಕಾರಿಯಾಗಿಲ್ಲ ಎಂದು ಸವಾಯಿ ಮೆಡಿಕಲ್ ಕಾಲೇಜ್ ಪ್ರಿನ್ಸಿಪಾಲ್ ಡಾ.ಸುಧೀರ್ ಭಂಡಾರಿ ತಿಳಿಸಿದ್ದಾರೆ.