Advertisement

ಒಮಿಕ್ರಾನ್ ಹೆಚ್ಚಳವಾದರೂ ಅಂತರರಾಜ್ಯ ಗಡಿ ಬಂದ್ ಇಲ್ಲ: ಸಚಿವ ಡಾ.ಅಶ್ವತ್ಥನಾರಾಯಣ

12:37 PM Jan 05, 2022 | Team Udayavani |

ಬೆಳಗಾವಿ: ಕೊರೊನ ಮತ್ತು ಒಮಿಕ್ರಾನ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದು ನಿಜವಾದರೂ ಬೆಳಗಾವಿ ಸೇರಿದಂತೆ ರಾಜ್ಯದ ಯಾವ ಕಡೆಗಳಲ್ಲೂ ಅಂತರರಾಜ್ಯ ಗಡಿಗಳನ್ನು ಬಂದ್ ಮಾಡುವ ಆಲೋಚನೆ ಸರಕಾರದ ಮುಂದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

Advertisement

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತರರಾಜ್ಯ ಗಡಿಗಳಲ್ಲಿ ರಾಜ್ಯದೊಳಕ್ಕೆ ಬರುವವರನ್ನು ಪರೀಕ್ಷೆಗೆ ಒಳಪಡಿಸಿ, ಹೆಚ್ಚಿನ ನಿಗಾ ವಹಿಸಲಾಗುವುದು. ಸೋಂಕಿತರು ಕಂಡುಬಂದರೆ ಅಂಥವರನ್ನು ಮಾತ್ರ ನಿಯಂತ್ರಿಸಲಾಗುವುದು. ಉಳಿದಂತೆ ಅಂತರರಾಜ್ಯ ಚಟುವಟಿಕೆ ಮತ್ತು ಓಡಾಟಗಳಿಗೆ ಮುಕ್ತ ಅವಕಾಶ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿದರು.

ಪರಿಸ್ಥಿತಿ ಕೈಮೀರಿ ಹೋಗಬಾರದೆಂದು 15 ದಿನಗಳ ಮಟ್ಟಿಗೆ ಸರಕಾರವು ವಾರಾಂತ್ಯದ ಕರ್ಫ್ಯೂ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಸಂಪೂರ್ಣ ಲಾಕ್ ಡೌನನ್ನು ತಡೆಯುವುದೇ ಇದರ ಹಿಂದಿನ ಸದುದ್ದೇಶವಾಗಿದೆ. ಕಚೇರಿಗಳು ಸೇರಿದಂತೆ ಪಬ್, ಬಾರ್, ಚಿತ್ರಮಂದಿರ ಇತ್ಯಾದಿಗಳಲ್ಲಿ ಸಾಮರ್ಥ್ಯದ ಶೇ.50ರಷ್ಟು ಮಾತ್ರ ಜನ ಸೇರುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಮುಂಜಾಗ್ರತಾ ಕ್ರಮಗಳ ಹಿಂದೆ ಮುಖ್ಯವಾಗಿ ಬೆಂಗಳೂರಿನಲ್ಲಿ ಪರಿಸ್ಥಿತಿಯನ್ನು ತಹಬಂದಿಗೆ ತರುವ ಚಿಂತನೆ ಇದೆ. ಹೀಗಾಗಿಯೇ ಅಲ್ಲಿ ಎರಡು ವಾರಗಳ ಮಟ್ಟಿಗೆ ಶಾಲಾಕಾಲೇಜುಗಳನ್ನು ಮುಚ್ಚಲಾಗಿದೆ. ಇದರ ಜತೆಯಲ್ಲೇ 15ರಿಂದ 18 ವರ್ಷದ ಯುವಜನರಿಗೂ ಕೊರೋನಾ ಲಸಿಕೆ ಹಾಕಲು ಆರಂಭಿಸಲಾಗಿದೆ. ಆದ್ದರಿಂದ ಯಾರೂ ಆತಂಕಕ್ಕೆ ಒಳಪಡಬೇಕಾಗಿಲ್ಲ ಎಂದು ಅವರು ಭರವಸೆಯ ನೀಡಿದರು.

ವೈದ್ಯಕೀಯ ಕಾಲೇಜುಗಳಲ್ಲೂ ಅಲ್ಲಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಬೂಸ್ಟರ್ ಡೋಸ್ ಕೊಡಲಾಗುತ್ತಿದ್ದು, ಪರಿಸ್ಥಿತಿಯನ್ನು ಎದುರಿಸಲು ಸಜ್ಜುಗೊಳಿಸಲಾಗಿದೆ. ಹತ್ತು ದಿನಗಳ ನಂತರ ಮತ್ತೊಮ್ಮೆ ಸಮಾಲೋಚಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next