Advertisement

ಒಮಿಕ್ರಾನ್‌ ಮೂಲ ಪತ್ತೆಗೆ ಅಪರಾಧ ಪ್ರಕರಣದ ತನಿಖಾ ಮಾದರಿ!

11:05 PM Dec 21, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ವೈರಸ್‌ ರೂಪಾಂತರಿ ಒಮಿಕ್ರಾನ್‌ ಸೋಂಕಿನ ಮೂಲ ಪತ್ತೆಗೆ ಈಗ ಪೊಲೀಸರು ಕೊಲೆ ಪ್ರಕರಣದ ತನಿಖೆ ಮಾದರಿ ಅನುಸರಿಸಲಾಗುತ್ತಿದೆ!

Advertisement

ರಾಜ್ಯದಲ್ಲಿ ಇದುವರೆಗೆ 19 ಒಮಿಕ್ರಾನ್‌ ಪತ್ತೆಯಾಗಿದೆ. ಅದರಲ್ಲಿ ಎಂಟು ಪ್ರಕರಣಗಳಲ್ಲಿ ಆರು ವಿದೇಶಿ ಪ್ರಯಾಣಿಕರು ಹಾಗೂ ಇಬ್ಬರು ಅಂತರರಾಜ್ಯ ಪ್ರವಾಸದಿಂದ ಒಮಿಕ್ರಾನ್‌ ಸೋಂಕಿಗೆ ತುತ್ತಾಗಿದ್ದಾರೆ. ಉಳಿದ 11 ಪ್ರಕರಣಗಳು ರಾಜ್ಯದಲ್ಲಿಯೇ ಪತ್ತೆಯಾಗಿವೆ. ಇವರಿಗೆ ರೂಪಾಂತರಿ ವೈರಸ್‌ ಹೇಗೆ ತಗಲಿದೆ ಎನ್ನುವ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿ ಮಾಹಿತಿಯನ್ನು ಕ್ರೋಡೀಕರಣಗೊಳಿಸಬೇಕಾಗಿದೆ. ಇದು ಅಧಿ ಕಾರಿಗಳ ನಿದ್ದೆಗೆಡಿಸಿದ್ದು, ಇದಕ್ಕಾಗಿ ಪೊಲೀಸರು ಸಾಮಾನ್ಯವಾಗಿ ಅಪರಾಧ ಪ್ರಕರಣ ಭೇದಿಸಲು ಅನುಸರಿಸುವ ಕ್ರಮಗಳ ಮಾದರಿಯನ್ನು ಅಧಿಕಾರಿಗಳು ಅನುಸರಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಟ್ರಾವೆಲ್‌ ಹಿಸ್ಟರಿ ಇಲ್ಲದ ವ್ಯಕ್ತಿಯ ಮಾಹಿತಿಗಳನ್ನು ಆಯಾ ಜಿಲ್ಲಾ ಆರೋಗ್ಯಾಧಿಕಾರಿಗಳು ಕಲೆ ಹಾಕಲಿದ್ದಾರೆ. ಪ್ರಾಥಮಿಕ ಹಂತದಲ್ಲಿ ಸೋಂಕಿತರಿಂದ ಹತ್ತು ದಿನಗಳಲ್ಲಿ ಅವರು ಯಾರ್ಯಾರ ಸಂಪರ್ಕಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಸಂಗ್ರಹಿಸಲಿದ್ದಾರೆ. ಜತೆಗೆ ಅಕ್ಕ-ಪಕ್ಕ ಮನೆಯವರಿಂದ, ಸಿಸಿ ಕೆಮರಾ ಫ‌ುಟೇಜ್‌, ಫ್ಲ್ಯಾಟ್‌ಗಳ ಆಗಮನ-ನಿರ್ಗಮನದ ನೋಂದಣಿ ಪುಸ್ತಕ ಸೇರಿದಂತೆ ವಿವಿಧ ರೀತಿಯಲ್ಲಿ ಶೋಧಕಾರ್ಯ ನಡೆಸಿದ್ದಾರೆ. ಆದಾಗ್ಯೂ ಸೋಂಕಿನ ಮೂಲದ ಸ್ಪಷ್ಟತೆ ಸಿಗದಿದ್ದರೆ, ವ್ಯಕ್ತಿಯ ಹತ್ತು ದಿನಗಳ ಮೊಬೈಲ್‌ ನೆಟ್‌ವರ್ಕ್‌ ವಿವರಗಳನ್ನು ತೆಗೆದು ವ್ಯಕ್ತಿಯ ಯಾರ ಸಂಪರ್ಕಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಪ್ರಸ್ತುತ ಕೋವಿಡ್‌ ಸೋಂಕಿತರ ಜಿನೋಮ್‌ ಸಿಕ್ವೆನ್ಸಿಂಗ್‌ ವರದಿಗಳು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರನ್ನು ದೀರ್ಘಾ ವಧಿಯ ಐಸೋಲೇಶನ್‌ಗೆ ಒಳಪಡಿಸಲು ಸಾಧ್ಯವಾಗುತ್ತಿಲ್ಲ. ಇನ್ನು ರಾಜ್ಯದ 19 ಒಮಿಕ್ರಾನ್‌ ಪ್ರಕರಣದಲ್ಲಿ 5 ಅಂತಾರಾಷ್ಟ್ರೀಯ, ಎರಡು ಅಂತರರಾಜ್ಯ ಪ್ರಕರಣ ಹಾಗೂ ಬೆಂಗಳೂರಿನ ವೈದ್ಯರಿಗೆ ಮಾತ್ರ ಸರ್ಕಾರದ ನಿಯಮಾನುಸಾರ ಒಮಿಕ್ರಾನ್‌ ಚಿಕಿತ್ಸೆ ನೀಡಲಾಗಿದೆ. ಉಳಿದ 10 ಪ್ರಕರಣಗಳು ವರದಿ ಬರುವ ಮೊದಲೇ ರೋಗಿಗಳ ಹೋಮ್‌ ಐಸೋಲೇಶನ್‌ ಮುಕ್ತಾಯಗೊಳಿಸಿದ್ದಾರೆ.

ಇದನ್ನೂ ಓದಿ:40 ನಗರಗಳಲ್ಲಿ ಬರಲಿದೆ ವಿಶೇಷ ಹೈಬ್ರಿಡ್‌ ಶಾಲೆ; ದಕ್ಷಿಣ ಏಷ್ಯಾದಲ್ಲಿಯೇ ಇಂಥ ಪ್ರಯತ್ನ ಮೊದಲು

Advertisement

ಹಿಡಿದಿಡುವುದೇ ಸವಾಲು
ರಾಜ್ಯ ಸರಕಾರ ಕೋವಿಡ್‌ ರೂಪಾಂತರಿ ಒಮಿಕ್ರಾನ್‌ ಸೋಂಕಿತರ ಚಿಕಿತ್ಸೆಗೆ ಬಿಡುಗಡೆಗೊಳಿಸಿದ ಹೊಸ ಮಾರ್ಗಸೂಚಿ ರಾಜ್ಯದ ಒಳಗೆ ಯಾವುದೇ ಟ್ರಾವೆಲ್‌ ಹಿಸ್ಟರಿ ಇಲ್ಲದ ಪ್ರಕರಣದಲ್ಲಿ ಪಾಲನೆಯಾಗುತ್ತಿಲ್ಲ. ಕೋವಿಡ್‌ ಪಾಸಿಟಿವ್‌ ಬಂದ ವ್ಯಕ್ತಿಯ ಜಿನೋಮಿಕ್‌ ಸಿಕ್ವೆನ್ಸಿಂಗ್‌ ವರದಿ ಬರಲು ಸುಮಾರು 15ರಿಂದ 30 ದಿನಗಳು ತೆಗೆದುಕೊಳ್ಳುತ್ತಿದೆ. ಶಿವಮೊಗ್ಗ, ಉಡುಪಿ, ಮಂಗಳೂರು, ಧಾರವಾಡ ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣದಲ್ಲಿ ಸೋಂಕಿತರು ಜಿನೋಮಿಕ್‌ ಸಿಕ್ವೆನ್ಸಿಂಗ್‌ ವರದಿ ಬರುವ ಮೊದಲೇ ಸೋಂಕಿನಿಂದ ಗುಣಮುಖರಾಗಿ ಐಸೋಲೇಶನ್‌ನಿಂದ ಹೊರಬಂದಿದ್ದಾರೆ. ಆದರೆ, ಈ ಅವಧಿಯಲ್ಲಿ ಹತ್ತಾರು ಕಡೆ ಅವರೆಲ್ಲರೂ ಓಡಾಡಿದ್ದಾರೆ. ಈ ಅವಧಿಯಲ್ಲಿ ಅವರೆಲ್ಲರೂ ಯಾರ್ಯಾರನ್ನು ಸಂಪರ್ಕಿಸಿದ್ದಾರೆ ಎನ್ನುವುದನ್ನು ಕೆಲವರು ಬಹಿರಂಗಪಡಿಸಲು ಹಿಂದೇಟು ಹಾಕುತ್ತಿದ್ದರೆ, ಇನ್ನು ಹಲವರಿಗೆ ನೆನಪು ಕೂಡ ಇಲ್ಲ.

ಪ್ರಸ್ತುತ ಒಮಿಕ್ರಾನ್‌ ಸೋಂಕಿತರ ಮೂಲಕ ಅವರ ಮೂಲವನ್ನು ಹುಡುಕಲು ಪ್ರಯತ್ನಿಸಲಾಗುತ್ತಿದೆ. ಸಂಪರ್ಕಕ್ಕೆ ಸಿಗದವರನ್ನು ಹಾಗೂ ಮೊಬೈಲ್‌ ಸ್ವಿಚ್‌ ಆಫ್ ಮಾಡಿದವರನ್ನು ಮೊಬೈಲ್‌ ನೆಟ್‌ವರ್ಕ್‌ ಮೂಲಕ ಪತ್ತೆ ಹಚ್ಚಲಾಗುತ್ತಿದೆ.
– ಡಿ. ರಣದೀಪ್‌,
ಆಯುಕ್ತರು, ಆರೋಗ್ಯ ಇಲಾಖೆ

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next