ಕಲಬುರಗಿ: ಜಾಗತಿಕ ಮಟ್ಟದಲ್ಲಿ ಕೋಲಾಹಲ ಸೃಷ್ಟಿಸಿದ ಕೊರೊನಾ ಅನೇಕ ಜನರನ್ನು ಬಲಿ ತೆಗೆದುಕೊಂಡು ಅತೀವ ಭಯ ಮೂಡಿಸಿದೆ. ಕೊರೊನಾ ಮೂರನೇ ಅಲೆ ಒಮಿಕ್ರಾನ್ ರೂಪದಲ್ಲಿ ಬಂದಿದ್ದು ಜನ ಗಲಿಬಿಲಿಗೊಂಡಿದ್ದಾರೆ. ಮುಂಜಾಗ್ರತಾ ಕ್ರಮ ಕೈಗೊಂಡಲ್ಲಿ ಸೋಂಕಿಗೆ ಹೆದರುವ ಅವಶ್ಯಕತೆ ಇಲ್ಲ ಎಂದು ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಸಮುದಾಯ ಔಷಧ ವಿಭಾಗದ ಸಹಾಯಕ ಪ್ರಾದ್ಯಾಪಕಿ ಡಾ| ಚೇತನಾ ಸಿಂಗೋಡೆ ಹೇಳಿದರು.
ನಗರದ ಖಾಜಾ ಬಂದಾನವಾಜ ವಿಶ್ವವಿದ್ಯಾಲಯದಲ್ಲಿ ಜೈವಿಕ ತಂತ್ರಜ್ಞಾನ, ಆಹಾರ ಮತ್ತು ಪೋಷಣಾ ವಿಭಾಗಗಳು ಜಂಟಿಯಾಗಿ ಏರ್ಪಡಿಸಿದ್ದ ಕೋವಿಡ್ ಜಾಗೃತಿ, ಆಹಾರ ಮತ್ತು ಜೀವನ ಪದ್ಧತಿ ಹಾಗೂ ಆಪ್ತ ಸಮಾಲೋಚನೆ ಶಿಬಿರದಲ್ಲಿ ಅವರು ಮಾತನಾಡಿದರು.
ಯಾವುದೇ ವ್ಯಕ್ತಿಗೆ ಜ್ವರ, ನೆಗಡಿ, ಕೆಮ್ಮು ಕಂಡು ಬಂದಲ್ಲಿ ತಕ್ಷಣ ಪ್ರತ್ಯೇಕವಾಗಿ ಇರಬೇಕು. ಲಕ್ಷಣಗಳು ಕಡಿಮೆಯಾಗದಿದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿ ಚಿಕಿತ್ಸೆ ತೆಗೆದುಕೊಳ್ಳಬೇಕು. ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಸ್ಯಾನಿಟೈಸರ್ ಬಳಕೆ, ಆಗಾಗ ಕೈತೊಳೆ ಕೊಳ್ಳುವುದು ಮುಂತಾದ ಜಾಗ್ರತಾ ಕ್ರಮ ಪಾಲಿಸಿದರೆ ಹೆದರುವ ಅವಶ್ಯಕತೆ ಇಲ್ಲ. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು ಅತಿ ಮುಖ್ಯ. ಲಸಿಕೆಯಿಂದ ಪ್ರಾಣಾಪಾಯದಿಂದ ರಕ್ಷಣೆ ಪಡೆಯಬಹುದು ಎಂದು ಸಲಹೆ ನೀಡಿದರು.
ರೋಗವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ| ಜೀನತ್ ಬೇಗಂ, ಜಿಲ್ಲೆಯಲ್ಲಿ ಕೇವಲ 15-16 ಬ್ಲಿಡ್ ಬ್ಯಾಂಕ್‌ಗಳಿದ್ದು, ಪ್ರತಿ ವರ್ಷ ಸುಮಾರು 1,000 ಜನರಿಗೆ ರಕ್ತದ ಅವಶ್ಯಕತೆಯಿದೆ. ಆದರೆ ರಕ್ತ ಕೊರತೆ ನೀಗಿಸಲು ನೆರೆರಾಜ್ಯ ಮಹಾರಾಷ್ಟ್ರದಿಂದ ರಕ್ತ ತರಿಸಿಕೊಳ್ಳಲಾಗುತ್ತಿದೆ. ಹೀಗಾಗಿ ಮನುಷ್ಯ ತನ್ನ ಜೀವನದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡುವುದಯ ಸೂಕ್ತ ಎಂದರು.
ಸಮಾಜ ಮತ್ತು ವಿಜ್ಞಾನ ನಿಕಾಯದ ಡೀನ್ ಡಾ| ನಿಶಾತ್ ಆರೀಫ್ ಹುಸೇನಿ ಅಧ್ಯಕ್ಷತೆ ವಹಿಸಿದ್ದರು. ಡಾ| ಶಕೀಲ ಆಹ್ಮದ್, ಪ್ರಿಯಾಂಕಾ, ಡಾ| ಸೈಯದ್ ಇಕ್ಬಾಲ್ ಅಹ್ಮದ್, ಡಾ| ಜಹಾನಾರಾ ಕುದ್ಸಿ, ಯೂಸಫ್ ಹುಸೇನಿ, ಅಹ್ಮದ್ ಅಶ್ಫಾಕ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.