Advertisement

ಅಲ್ಲಿ ಇರೋ ಗ್ರಾಮ ಪಂಚಾಯಿತಿ ಒಂಬುಡ್ಸ್‌ಮನ್‌ ನಮ್ಮಲ್ಲಿ ಏಕೆ ಇಲ್ಲ?

03:45 AM Jul 03, 2017 | Harsha Rao |

ಭ್ರಷ್ಟಾಚಾರ ತಳಮಟ್ಟದವರೆಗೂ ಮುಟ್ಟಿದೆ. ಬಡ ನಿರ್ಗತಿಕರಿಗೆ ಮನೆ ಕಟ್ಟಲು ಕೊಡುವ 50 ಸಾವಿರ, ಒಂದು ಲಕ್ಷದ ಅನುದಾನದ ಪ್ರತಿ ಹಂತದ ಬಿಲ್‌ ಪಾಸಾಗುವಲ್ಲಿ 500, ಸಾವಿರ ರೂ.ಗಳನ್ನು ಕಿತ್ತುಕೊಳ್ಳುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ವಾರ್ಡ್‌ ಸದಸ್ಯರಿದ್ದಾರೆ. ಊರಲ್ಲಿ ಇಲ್ಲದ ಕೆರೆಯ ಹೂಳು ತೆಗೆಯಲಾಗುತ್ತದೆ. ಲೆಕ್ಕದಲ್ಲಿ ರಸ್ತೆ ಮೂರು ವರ್ಷಕ್ಕೆ ಎರಡು ಬಾರಿ ರಿಪೇರಿಯಾಗುತ್ತದೆ. ಹಾಗಾಗಿಯೇ ಒಂದು ಪಂಚಾಯಿತಿ ಚುನಾವಣೆಯಲ್ಲಿ ನಿಲ್ಲಲು ಹಲವು ಲಕ್ಷ ರೂಪಾಯಿಗಳನ್ನು ಭಾವಿ ಜನಪ್ರತಿನಿಧಿಗಳು ಖರ್ಚು ಮಾಡುತ್ತಾರೆ. ಒಂದೆಡೆ ಈ ಅವ್ಯವಹಾರಗಳನ್ನು ತಡೆಯಲು ಸರಳ ಕಾನೂನು ಅಸ್ತ್ರಗಳಿರಲಿಲ್ಲ. ಲೋಕಾಯುಕ್ತಕ್ಕೆ ಅಥವಾ ಸಾಂಪ್ರದಾಯಿಕ ನ್ಯಾಯಾಲಯಗಳಿಗೆ ಹೋಗಬೇಕು. ಸಮಯ, ಖರ್ಚು ಲೆಕ್ಕದಲ್ಲಿ ದುಬಾರಿಯೇ ಸರಿ. ಇದಕ್ಕಿರುವ ಒಂದು ಯುಕ್ತ ಪರಿಹಾರ ಗ್ರಾಮ ಪಂಚಾಯ್ತಿ ಒಂಬುಡ್ಸ್‌ಮನ್‌ ವ್ಯವಸ್ಥೆ.
ಪ್ರಸ್ತುತ ಹಲವು ಕ್ಷೇತ್ರಗಳಲ್ಲಿ ಒಂಬುಡ್ಸ್‌ಮನ್‌ ಮಾದರಿ ಜನಪ್ರಿಯ. ಬ್ಯಾಂಕಿಂಗ್‌, ವಿಮೆ ವಲಯದ ಒಂಬುಡ್ಸ್‌ಮನ್‌ ಯಾನೆ ಲೋಕಪಾಲ ಪಡೆದಿರುವ ನ್ಯಾಯ ತೀರ್ಮಾನದ “ಪವರ್‌’ಗೆ ಬ್ಯಾಂಕ್‌, ವಿಮಾ ಕಂಪನಿಗಳು ಬೆಚ್ಚಿಬೀಳಲೇಬೇಕಾಗಿದೆ. ಸದರಿ ಸಂಸ್ಥೆಗಳಿಗೆ ಲೋಕಪಾಲ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಈ ಲೆಕ್ಕದಲ್ಲಿಯೇ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿ, ಅಧಿಕಾರಿಗಳಿಗೆ ಭಯ ಬೀಳಿಸುವ ಒಂಬುಡ್ಸ್‌ಮನ್‌ ಪ್ರಭಾವಶಾಲಿ.

Advertisement

ಒಂದು ಫ್ಲ್ಯಾಶ್‌ಬ್ಯಾಕ್‌
ಕೇರಳ 2000ದ ಜನವರಿಯಲ್ಲಿಯೇ ಪಂಚಾಯತ್‌ ಒಂಬುಡ್ಸ್‌ಮನ್‌ ಆರಂಭಿಸಿತ್ತು. ಕಾಯ್ದೆಯ ನಿಯಮಗಳನ್ನು ರಚಿಸಿದ ಐದೇ ತಿಂಗಳಿನಲ್ಲಿ ಏಕ ನ್ಯಾಯಾಧೀಶರ ನೇತೃತ್ವದ ಒಂಬುಡ್ಸ್‌ಮನ್‌ ವ್ಯವಸ್ಥೆ ಅಲ್ಲಿ ಜಾರಿಗೆ ಬಂದಿತ್ತು. ಸ್ಥಳೀಯ ಪಂಚಾಯತ್‌ ವ್ಯವಸ್ಥೆಗಳು ಮತ್ತು ಅಲ್ಲಿನ ಅಧಿಕಾರಿಗಳು, ಉದ್ಯೋಗಿಗಳು ನಡೆಸುವ ಭ್ರಷ್ಟಾಚಾರ, ಅಧಿಕಾರ ದುರುಪಯೋಗಗಳ ಕುರಿತಂತೆ ವಿಚಾರಣೆ ನಡೆಸಿ ತೀರ್ಪು ನೀಡುವುದು ಈ ಲೋಕಪಾಲ ಜವಾಬ್ದಾರಿ. ಇದರ ವ್ಯಾಪ್ತಿಗೆ ಪಂಚಾಯತ್‌ ರಾಜ್‌ ಜನಪ್ರತಿನಿಧಿಗಳು, ಅಧ್ಯಕ್ಷರನ್ನು ತರಲಾಗಿದ್ದು ಪರಿಣಾಮಕಾರಿ ಕ್ರಮವಾಗಿತ್ತು. 1994ರ ಕೇರಳ ಪಂಚಾಯತ್‌ ರಾಜ್‌ ಕಾಯ್ದೆಯ ಕಲಂ 13ರ ಪ್ರಕಾರ ಅಲ್ಲಿನ ಪುರಸಭೆಗಳೂ ಈ ಒಂಬುಡ್ಸ್‌ಮನ್‌ ಕಣ್ಗಾವಲಿಗೆ ಒಳಪಡುತ್ತವೆ. ದೇಶದ ಇನ್ನಾéವುದೇ ರಾಜ್ಯದಲ್ಲಿ ಇಂತಹ ಕ್ರಾಂತಿಕಾರಕ ವ್ಯವಸ್ಥೆ ಆವರೆಗೆ ಜಾರಿಗೆ ಬಂದಿರಲಿಲ್ಲ.

ಕೇರಳದ ಒಂಬುಡ್ಸ್‌ಮನ್‌ ಕೂಡ ರಾಜಕಾರಣಿಗಳ ಅವಕೃಪೆಗೆ ಒಳಗಾಯಿತು. ಜಾರಿಗೆ ಬಂದ ಒಂದೇ ವರ್ಷದಲ್ಲಿ 36ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಅಳವಡಿಸಲು ಕಾರಣವಾದದ್ದು ಇದೇ. ಈ ಪಂಚಾಯತ್‌ ಒಂಬುಡ್ಸ್‌ಮನ್‌ ಮಾದರಿ ಮೂಲ ಇಂಗ್ಲೆಂಡ್‌ನ‌ ಸ್ಥಳೀಯ ಸಂಸ್ಥೆ ಒಂಬುಡ್ಸ್‌ಮನ್‌ ಆಧರಿಸಿತ್ತು. ಅಲ್ಲಿಲ್ಲದ ಶಿಕ್ಷೆ, ದಂಡದ ಪ್ರಾಧಾನಗಳನ್ನು ಸೇರಿಸಿದ್ದು ಕೇರಳದ ಹೆಗ್ಗಳಿಕೆ. ಇವತ್ತಿಗೂ ಕೇರಳ ಹೊರತುಪಡಿಸಿ ಇನ್ನಾವುದೇ ರಾಜ್ಯ ಪಂಚಾಯಿತಿ ಒಂಬುಡ್ಸ್‌ಮನ್‌ ವ್ಯವಸ್ಥೆಯನ್ನು ಜಾರಿಗೊಳಿಸಿಲ್ಲ. ಎಲ್ಲ ರಾಜ್ಯಗಳಲ್ಲೂ ಇದನ್ನು ಸಾರ್ಥಕವಾಗಿ ಬಳಸಿಕೊಂಡರೆ ಭ್ರಷ್ಟಾಚಾರ, ಅನೈತಿಕತೆಯಲ್ಲಿ ಮುಳುಗಿಹೋಗಿರುವ ಸ್ಥಳೀಯ ವ್ಯವಸ್ಥೆಗಳು ಹೊಸ ಚೈತನ್ಯ ಪಡೆಯಬಹುದು ಎಂದು ಅಂದು ಅಂದುಕೊಳ್ಳಲಾಗಿತ್ತು. ಆಗಿದ್ದೇನು?

ಹುಟ್ಟಿದ್ದು ಹಲವು ಭರವಸೆಗಳು
ಕೇರಳದಲ್ಲಿ ಈ ವ್ಯವಸ್ಥೆ ಆರಂಭವಾದಾಗ 7 ಜನರ ಸಮಿತಿಯನ್ನು ಓರ್ವ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನಿರ್ವಹಿಸುವ ನಿಯಮವಿತ್ತು. ರಾಜ್ಯಸರ್ಕಾರ 2001ರಲ್ಲಿ ತಿದ್ದುಪಡಿ ಮಾಡಿ ಏಕ ವ್ಯಕ್ತಿ ಒಂಬುಡ್ಸ್‌ಮನ್‌ ಪದ್ಧತಿಯನ್ನು ಚಾಲ್ತಿಗೆ ತಂದಿತು. ಅಲ್ಲಿನ ವ್ಯವಸ್ಥೆಯಲ್ಲಿ ಲಿಖೀತ ದೂರು ಸಲ್ಲಿಸುವವರು ಕೇವಲ 10 ರೂಪಾಯಿಗಳ ಕೋರ್ಟ್‌ ಶುಲ್ಕ ಕಟ್ಟಿದರೆ ಆಯಿತು. ವಿಶೇಷ ಸಂದರ್ಭಗಳಲ್ಲಿ ಮಾತ್ರ, ಅದೂ ನ್ಯಾಯಾಧೀಶರ ಒಪ್ಪಿಗೆ ಪಡೆದರಷ್ಟೇ ವಕೀಲರ ನೆರವು ಹೊಂದಲು ಅವಕಾಶ. ನೇರವಾಗಿ ದೂರುದಾರರೇ ವಿಚಾರಣೆಯಲ್ಲಿ ಪಾಲ್ಗೊಳ್ಳುವುದು ಶೀಘ್ರ ಇತ್ಯರ್ಥಕ್ಕೆ ಪೂರಕ. ನಾಗರಿಕರು ಖುದ್ದಾಗಿ ಅಥವಾ ಅಂಚೆ, ಫ್ಯಾಕ್ಸ್‌ ಮೂಲಕ ಪ್ರಕರಣ ದಾಖಲಿಸಲು ಅವಕಾಶ.

ಒಂದು ಅಂಕಿಅಂಶಗಳ ಪ್ರಕಾರ, 2001ರಲ್ಲಿ 4215ರಲ್ಲಿ 2254 ಇತ್ಯರ್ಥವಾಗಿತ್ತು. 2003-04ರಲ್ಲಿ 232 ಪ್ರಕರಣಗಳನ್ನು ಸ್ವೀಕರಿಸಿದ ದಿನವೇ ಇತ್ಯರ್ಥಪಡಿಸಲಾಗಿತ್ತು. ಉಳಿದಂತೆ ಆ ವರ್ಷ 921 ದೂರು ಪರಿಹಾರ ಕಂಡುಕೊಂಡಿತ್ತು.  1,153ರಲ್ಲಿ 860 ಅದೇ ವರ್ಷ ದಾಖಲಾಗಿದ್ದು. ಖುದ್ದು ಒಂಬುಡ್ಸ್‌ಮನ್‌ 23 ಪ್ರಕರಣಗಳನ್ನು ಹೆಚ್ಚಿನ ತನಿಖೆಗೆ ಭ್ರಷ್ಟಾಚಾರ ವಿರೋಧಿ ಬ್ಯೂರೋಗೆ ಸೂಚಿಸಿ ವರ್ಗಾಯಿಸಿತು. ಆದರೆ ಈ ದಾಖಲೆಗಳು 13 ವರ್ಷಗಳಷ್ಟು ಹಿಂದಿನವು. ಪಂಚಾಯಿತಿ ಒಂಬುಡ್ಸ್‌ಮನ್‌ ಈಗಲೂ ಕೇರಳದಲ್ಲಿ ಚಾಲ್ತಿಯಲ್ಲಿದೆ ಎಂಬ ಒಂದು ಮಾಹಿತಿಯ ಹೊರತಾಗಿ ಇನ್ನಾವುದೇ ಮಾಹಿತಿ ಅತಿ ಹೆಚ್ಚಿನ ಸಾಕ್ಷರತೆ ಹೊಂದಿರುವ ರಾಜ್ಯದ ಅಂತಜಾìಲ ತಾಣಗಳಲ್ಲಿಲ್ಲ ಎಂಬುದು ದುರಂತ.
ಆದರೆ ಮೊದಲ ಕೆಲ ವರ್ಷಗಳಲ್ಲಿ ಕೇರಳ ಪಂಚಾಯಿತಿ ಒಂಬುಡ್ಸ್‌ಮನ್‌ ನೀಡಿದ ತೀರ್ಪುಗಳು ಐತಿಹಾಸಿಕ. 2008ರಲ್ಲಿ ಕೇರಳದಲ್ಲಿ ಕಚ್ಚಾ ಪ್ಲಾಸ್ಟಿಕ್‌ಗೆ ಅಭಾವವಿದ್ದ ಕಾಲದಲ್ಲಿ ಎಲ್ಲ ಸ್ಥಳೀಯ ಆಡಳಿತಗಳು ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯನ್ನು ವೈಜಾnನಿಕವಾಗಿ ನಿರ್ವಹಿಸಲು ವಿವರವಾದ ಆದೇಶವನ್ನು ಕೊಚ್ಚಿಯ ಒಂದು ಪ್ರಕರಣದ ಹಿನ್ನೆಲೆಯಲ್ಲಿ ಹೊರಡಿಸಲಾಗಿತು. ಇದನ್ನು ಕೇರಳ ಸರ್ಕಾರ ಗಂಭೀರವಾಗಿ ಪರಿಗಣಿಸದಾಗ ಅಲ್ಲಿ ಸ್ಥಳೀಯ ಸರ್ಕಾರ ಎಲ್‌ಎಸ್‌ಜಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಒಂಬುಡ್ಸ್‌ಮನ್‌ ಸ್ಪಷ್ಟ ನಿರ್ದೇಶನವನ್ನು ಜಾರಿಗೊಳಿಸಿತು. ಗ್ರಾಮ ಸಭೆಗಳು ತಮ್ಮ ಹಿಂದಿನ ತೀರ್ಮಾನಗಳನ್ನು ಕಾನೂನುಬಾಹಿರ ಅಥವಾ ಅಸಮರ್ಪಕ ಎಂದು ಪರಿಗಣಿಸಿ ಬದಲಿಸುವ ಅವಕಾಶವನ್ನು ಒಂಬುಡ್ಸ್‌ಮನ್‌ 2000ರಲ್ಲಿ ನೀಡಿತು. ಕೇರಳದ ಮುನ್ಸಿಪಾಲಿಟೀಸ್‌ ಆ್ಯಕ್ಟ್ ಆ್ಯಂಡ್‌ ರೂಲ್ಸ್‌ ಅನ್ವಯ, ಕಟ್ಟಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ 30 ದಿನಗಳೊಳಗೆ ಯಾವುದೇ ನಿರ್ಧಾರವನ್ನು ಅರ್ಜಿದಾರನಿಗೆ ತಿಳಿಸದಿದ್ದಲ್ಲಿ ಅದನ್ನು ಕಲ್ಪಿತ ಒಪ್ಪಿಗೆ ಎಂದೇ ಪರಿಗಣಿಸಬಹುದು ಎಂಬ ಅಂಶವನ್ನು ಎತ್ತಿಹಿಡಿದಿದ್ದು ಇದೇ ಒಂಬುಡ್ಸ್‌ಮನ್‌.

Advertisement

ಬಡಜನರಿಗಾಗಿ ಕೇರಳ ಸರ್ಕಾರ ಮನೆ ಕಟ್ಟಿಸಿಕೊಡಲು ಯೋಜಿಸಿದ್ದು ಥನಲ್‌ ಕಾರ್ಯಕ್ರಮ. ಇದರ ಫ‌ಲಾನುಭವಿಗಳು ಸೂಚಿತ ಅಳತೆ ಮೀರಿ ಮತ್ತು ಹೆಚ್ಚು ಸೌಲಭ್ಯ ಸೇರಿಸಿ ಕಟ್ಟಿದ್ದು ಲೋಕಪಾಲರ ಎದುರು ಆಕ್ಷೇಪ ಸಲ್ಲಿಕೆಯಾಗಿತ್ತು. ನ್ಯಾಯಾಧೀಶರು ಇಂತಹ ಮಂದಿಯನ್ನು ಬಡವರು ಎಂದು ಪರಿಗಣಿಸುವುದು ಸರಿಯಲ್ಲ ಎಂದೇ ತೀರ್ಮಾನಿಸಿ ಅವರಿಗೆ ಮಂಜೂರಾದ ಮೊತ್ತವನ್ನು ಮರಳಿ ಪಡೆಯಲು ಆದೇಶಿಸಿದ್ದು ಕೂಡ ಉಲ್ಲೇಖಾರ್ಹ.

ರಾಜಕಾರಣಿಗಳ ಅವಕೃಪೆ!
ಇಷ್ಟೆಲ್ಲ ಸಾಧನೆಗಳ ಹೊರತಾಗಿಯೂ ಕೇರಳ ಪಂಚಾಯಿತಿ ಲೋಕಪಾಲ ಕೂಡ17 ವರ್ಷಗಳ ಹಿಂದೆಯೇ  ರಾಜಕಾರಣಿಗಳ ಅವಕೃಪೆಗೆ  ಸಿಲುಕಿದೆ. ನಿರಂತರ ತಿದ್ದುಪಡಿಗೊಳಗಾದ ಕಾಯ್ದೆ ಬಂದ ಒಂದೇ ವರ್ಷದಲ್ಲಿ 36ಕ್ಕೂ ಅಧಿಕ ತಿದ್ದುಪಡಿ ಕಾಣುವಂತಾಯಿತು. ವಾಸ್ತವವಾಗಿ ಈ ಲೋಕಪಾಲ ಮಾದರಿಯ ಮೂಲ ಇಂಗ್ಲೆಂಡ್‌ನ‌ ಸ್ಥಳೀಯ ಸಂಸ್ಥೆ ಒಂಬುಡ್ಸ್‌ಮನ್‌ ಮಾದರಿಯನ್ನು ಅನುಸರಿಸಿದೆ. ಅಲ್ಲಿಲ್ಲದ ಶಿಕ್ಷೆ, ದಂಡದ ಪ್ರಾಧಾನಗಳನ್ನು ಸೇರಿಸಿದ್ದು ಕೇರಳದ ಹೆಗ್ಗಳಿಕೆ. 

ವೈಯುಕ್ತಿಕ ಪ್ರಕರಣಗಳಲ್ಲದೆ ಸಮದಾಯಕ್ಕೆ ಬೇಕಾದ ತೀರ್ಮಾನಗಳನ್ನು ಕೂಡ ಈ ಲೋಕಪಾಲ ಕೈಗೊಳ್ಳಬಹುದು. ಪತ್ರಿಕಾ ವರಿದಿ, ಟಿವಿ ಸುದ್ದಿಗಳನ್ನು ಆಧರಿಸಿ ಸ್ವಯಂ ವಿವೇಚನೆಯಿಂದ ಪ್ರಕರಣಗಳನ್ನು ಕೈಗೆತ್ತಿಕೊಳ್ಳಬಹುದು ಎಂಬುದು ವೈಶಿಷ್ಟ್ಯ. ನಿಜಕ್ಕೂ ಈ ಮಾದರಿಯನ್ನು ಕೇಂದ್ರ ಸರ್ಕಾರ ಗಮನಿಸಿ ಎಲ್ಲ ರಾಜ್ಯಗಳಲ್ಲಿಯೂ ಅಳವಡಿಸಿಕೊಳ್ಳಲು ಸೂಚನೆ ನೀಡಬಹುದಿತ್ತು. ಆಗಲಾದರೂ ಭ್ರಷ್ಟಾಚಾರ, ಅನೈತಿಕತೆಯಲ್ಲಿ ಮುಳುಗಿಹೋಗಿರುವ ಸ್ಥಳೀಯ ವ್ಯವಸ್ಥೆಗಳು ಹೊಸ ಚೈತನ್ಯ ಪಡೆಯುತ್ತಿತ್ತೇನೋ…..!

ಕರ್ನಾಟಕದಲ್ಲೂ ಚಿಂತನೆ ನಡೆದಿತ್ತು
ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಸಮರ್ಥವಾಗಿ ಜಾರಿಗೆ ಕೊಟ್ಟಿದ್ದು ಕರ್ನಾಟಕ. ಆದರೆ ಹೊಸ ಹುಟ್ಟಿಗೆ ತೋರಿದ ಉತ್ಸಾಹವನ್ನು ಆ ವ್ಯವಸ್ಥೆಯನ್ನು ನೇರ್ಪುಗೊಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾಗಿಲ್ಲ. ಕೇರಳದಲ್ಲಿ ಜಾರಿಗೆ ಬಂದ ಬರೋಬ್ಬರಿ 10 ವರ್ಷಗಳ ನಂತರ, 2010ರ ಅಕ್ಟೋಬರ್‌ 4ರಂದು ರಾಜ್ಯ ಸರ್ಕಾರ ಹೊರಡಿಸಿದ ಗೆಜೆಟ್‌ ಪ್ರಕಟಣೆಯಂತೆ ಪಂಚಾಯತ್‌ ಒಂಬುಡ್ಸ್‌ಮನ್‌ರನ್ನು ಜಿಲ್ಲಾ ಪಂಚಾಯಿತಿಗೆ ಒಬ್ಬರಂತೆ ನೇಮಿಸಲು ಅವಕಾಶ ಕಲ್ಪಿಸಲಾಯಿತು. ಅದರ ಪ್ರಕಾರ, ಅಗತ್ಯ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಥವಾ ಗ್ರಾಮ ಪಂಚಾಯಿತಿಗೂ ಒಬ್ಬರಂತೆ ನೇಮಿಸಲು ಅವಕಾಶ ಇಡಲಾಯಿತು. ಆದರೆ ಅಂತಹ ವೇಳೆ ಒಂಬುಡ್ಸ್‌ಮನ್‌ರ ಕಾರ್ಯವ್ಯಾಪ್ತಿಯನ್ನು ನಿರ್ದಿಷ್ಟಗೊಳಿಸಿ ಆದೇಶ ಹೊರಡಿಸಬೇಕು ಎಂದು ಸೂಚಿಸಲಾಯಿತು.

ರೂಪಿತ ನಿಯಮಗಳ ಪ್ರಕಾರ, ಒಂಬುಡ್ಸ್‌ಮನ್‌ ತನ್ನ ಕಾರ್ಯವ್ಯಾಪ್ತಿಯ ಜಿಪಂ, ತಾಪಂ, ಗ್ರಾಪಂ ಅಧಿಕಾರಿಗಳ, ನೌಕರರ ವಿರುದ್ಧವಲ್ಲದೆ ಚುನಾಯಿತ ಸದಸ್ಯರ ವಿರುದ್ಧದ ದೂರುಗಳನ್ನು ಕೂಡ ತನಿಖೆಗೆ ಒಳಪಡಿಸಬಹುದು. ತನಿಖೆ ಹಾಗೂ ತೆಗೆದುಕೊಂಡ ಕ್ರಮ ಕುರಿತಾಗಿ ಒಂಬುಡ್ಸ್‌ಮನ್‌ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಪಂಚಾಯಿತಿ ಸಂಸ್ಥೆಗಳ ಜನಪ್ರತಿನಿಧಿಗಳು, ಅಧಿಕಾರಿಗಳು ತೆಗೆದುಕೊಂಡ ಕ್ರಮ, ನಡೆಗಳನ್ನು ವಿಮರ್ಶೆಗೆ ಲೋಕಪಾಲ ಒಳಪಡಿಸಬಹುದು ಎನ್ನಲಾಗಿತ್ತು. 

ಅಷ್ಟಕ್ಕೂ ಒಂಬುಡ್ಸ್‌ಮನ್‌ಗೆ ಸಾರ್ವಜನಿಕರ ದೂರು ಬಂದರೆ ಮಾತ್ರ ತನಿಖೆಗೆ ಮುಂದಾಗಬೇಕಿಲ್ಲ. ಅವರೇ ಜನಪರ ಹಿತಾಸಕ್ತಿಯನ್ನು ಪರಿಗಣಿಸಿ ಸ್ವಯಂಪ್ರೇರಣೆಯಿಂದ ತನಿಖೆ ಕೈಗೆತ್ತಿಕೊಳ್ಳಲು ಅಧಿಕಾರ ನೀಡಲಾಗಿತ್ತು. ಸರ್ಕಾರಕ್ಕೆ ಕೂಡ ತನಿಖೆ ನಡೆಸಲು ಇವರನ್ನು ಆದೇಶಿಸುವ ಹಕ್ಕಿದೆ. ಪಂಚಾಯಿತಿ ಸಂಸ್ಥೆಗಳೆಂದರೆ ಜಿಪಂ, ತಾಪಂ, ಗ್ರಾಮ ಪಂಚಾು¤ಗಳಲ್ಲದೆ ಈ ಸ್ಥಳೀಯ ವ್ಯವಸ್ಥೆಯಿಂದ ಹಣಕಾಸು ನೆರವು ಪಡೆದಿರುವ ಎಲ್ಲ ಸಂಸ್ಥೆ ಕೂಡ ಇದರ ವ್ಯಾಪ್ತಿಗೆ ಬರುತ್ತದೆ. ಸ್ವಯಂಸೇವಾ ಸಂಸ್ಥೆಯೊಂದು ಗ್ರಾಮ ಪಂಚಾಯಿತಿ ಒಂದರಿಂದ ಆರ್ಥಿಕ ನೆರವು ಪಡೆದಿದ್ದಲ್ಲಿ ಅಂತಹ ಎನ್‌ಜಿಓ ವಿರುದ್ಧ ಕೂಡ ಲೋಕಪಾಲದಲ್ಲಿ ದೂರು ದಾಖಲಿಸಬಹುದು. ಜಿಪಂ, ತಾಪಂ, ಗ್ರಾಪಂಗಳ ವಿರುದ್ಧ ಸಮಸ್ಯೆ ಉಂಟಾದಲ್ಲಿ, ಅವ್ಯವಹಾರ ನಡೆದಿದ್ದಲ್ಲಿ, ಲೋಪದೋಷಗಳ ಸಂಬಂಧ ಸಾರ್ವಜನಿಕರು ದೂರು ಕೂಡ ತನಿಖೆಗೆ ಸ್ವೀಕರಿಸಬೇಕಾಗುತ್ತದೆ ಎಂದು ಕ್ರಾಂತಿಕಾರಕ ಹೊಳಹು ನೀಡಿತ್ತು. 

ದೂರು ಕೆಲವು ನಿರ್ದಿಷ್ಟ ಅಂಶಗಳನ್ನು ಪರಿಗಣಿಸಿ ತನಿಖೆಗೆ ಒಳಗಾಗುತ್ತದೆ. ಕಾಯ್ದೆ, ನಿಯಮಗಳ ಉಲ್ಲಂಘನೆಯಾದ ಪ್ರಕರಣವಾಗಿರಬೇಕು. ಅಧಿಕಾರಿ, ಚುನಾಯಿತ ಪ್ರತಿನಿಧಿಯಿಂದ ಸೇವಾಲೋಪ, ನಿರ್ಲಕ್ಷ್ಯ, ಕರ್ತವ್ಯ ಲೋಪ, ಅಕ್ರಮ ನಡವಳಿಕೆ, ಸ್ವಜನಪಕ್ಷಪಾತ ಆಗಿದ್ದಲ್ಲಿ ದೂರು ಸಲ್ಲಿಸಬಹುದು. ಅರ್ಜಿ ವಿಲೇವಾರಿಯಲ್ಲಿ ವಿಳಂಬ ಅಥವಾ ಲೋಪವಾಗಿದ್ದರೂ ದೂರು ಅರ್ಹ. ಪಂಚಾಯತ್‌ ಸಂಸ್ಥೆಯಿಂದ ಬರಬೇಕಾದ ಹಣ ಬಾರದಿದ್ದಲ್ಲಿ, ಪಂಚಾಯತ್‌ನ ಮಾಸಿಕ ಸಭೆ ಕರೆಯುವಲ್ಲಿ ವಿಳಂಬ ಆಗಿದ್ದಲ್ಲಿ, ಫ‌ಲಾನುಭಯ ಆಯ್ಕೆಯಲ್ಲಿ ನ್ಯೂನತೆ ಮಾಡಿದ್ದರೆ ಕೂಡ ದೂರಬಹುದು. ಪಂಚಾಯತ್‌ ರಾಜ್‌ ಕಾಯ್ದೆಯನ್ವಯ ಅಥವಾ ಅದರಡಿ ರಚಿತವಾದ ನಿಯಮಗಳಲ್ಲಿ ಹೇಳಿದ ಕರ್ತವ್ಯಗಳನ್ನು ನಿರ್ವಹಿಸದಿರುವುದು ಕಂಡುಬಂದರೂ ದೂರು ಸಲ್ಲಿಸಬಹುದು. ಪಂಚಾಯಿತಿ ಅಥವಾ ಪಂಚಾಯತ್‌ ಸಂಸ್ಥೆ ವಿರುದ್ಧ ನೇರ ಆರೋಪ ಮಾಡುವುದಿದ್ದರೆ ದೂರಿನೊಂದಿಗೆ ಅಫಿಡವಿಟ್‌ ಸಲ್ಲಿಸಬೇಕು ಎಂದು ಕಾಯ್ದೆಯಲ್ಲಿ ಸೂಚಿಸಲಾಗಿದೆ.

ಎಂದಿನಂತೆ ದೂರು ಸ್ವೀಕರಿಸಿದ ಒಂಬುಡ್ಸ್‌ಮನ್‌ ಆರೋಪಿಗಳ ಅಭಿಪ್ರಾಯ ಕೇಳುತ್ತಾರೆ. ತನಿಖೆ ನಡೆಸುತ್ತಾರೆ. ವರದಿ ತಯಾರಿಸಿ ಮುಂದಿನ ಕ್ರಮಕ್ಕೆ ಸರ್ಕಾರಕ್ಕೆ ಕಳುಹಿಸುತ್ತಾರೆ. ಒಂಬುಡ್ಸ್‌ಮನ್‌ರಿಗೆ ಹಲವು ಅಧಿಕಾರಗಳನ್ನು ನೀಡಲಾಗಿದೆ. ತನಿಖೆಗಾಗಿ ಯಾವುದೇ ದಾಖಲೆ, ಮಾಹಿತಿಗಳನ್ನು ಯಾರಿಂದ ಬೇಕಾದರೂ ಕೇಳಿ ಪಡೆಯಬಹುದು. ಒಂಬುಡ್ಸ್‌ಮನ್‌ ಕೇಳಿದ್ದನ್ನು ಕೊಡಲೇಬೇಕಾಗುತ್ತದೆ.  ಸಿಲ್‌ ಪೊ›ಸೀಜರ್‌ ಕೋಡ್‌ನ‌ಂತೆ ಯಾವುದೇ ವ್ಯಕ್ತಿಯನ್ನು ಸಮನ್ಸ್‌ ಕೊಟ್ಟು ಕರೆಸಿ ಅವರ ವಿಚಾರಣೆ ನಡೆಸುವ ಅಧಿಕಾರ ಒಂಬುಡ್ಸ್‌ಮನ್‌ರಿಗೆ ದತ್ತವಾಗಿರುತ್ತದೆ. ದಾಖಲಾತಿಗಳನ್ನು ತಪಾಸಣೆ ಮಾಡಲು ಮತ್ತು ಹಾಜರಾತಿಗೆ ಆದೇಶಿಸುವ ಅಧಿಕಾರ, ಅಫಿಡೆವಿಟ್‌ ಮುಖಾಂತರ ಸಾಕ್ಷ್ಯ ಪಡೆಯುವ ಅಧಿಕಾರ ಕೊಡಲಾಗಿದೆ ಎಂದು ವಿವರಿಸಲಾಗಿತ್ತು.

ಸಾಕ್ಷ್ಯ ಮತ್ತು ದಾಖಲಾತಿಗಳ ಪರೀಕ್ಷೆಗೆ ಸಮಿತಿಯನ್ನು ಲೋಕಪಾಲ ರಚಿಸಬಹುದು. ಒಂಬುಡ್ಸ್‌ಮನ್‌ ಎದುರು ನಡೆಯುವ ಎಲ್ಲ ಕಲಾಪಗಳು ಇಂಡಿಯನ್‌ ಪೀನಲ್‌ ಕೋಡ್‌ ಕಲಂ 193ರ ಪ್ರಕಾರ ನ್ಯಾಯಾಂಗ ಕಲಾಪವಾಗಿ ಪರಿಗಣಿತವಾಗುತ್ತದೆ. ಆದರೆ ಕರ್ನಾಟಕದ ಲೋಕಾಯುಕ್ತ ವ್ಯವಸ್ಥೆಯಲ್ಲಿ ಲೋಕಾಯುಕ್ತ, ಉಪಲೋಕಾಯುಕ್ತರು ತನಿಖೆ ನಡೆಸುತ್ತಿದ್ದರೆ ಪಂಚಾಯತ್‌ ಲೋಕಪಾಲ ಮಧ್ಯಪ್ರವೇಶಿಸುವಂತಿಲ್ಲ. ಬೇರೆ ತನಿಖಾ ಸಂಸ್ಥೆಯಿಂದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೂ ಒಂಬುಡ್ಸ್‌ಮನ್‌ ಪ್ರತ್ಯೇಕ ತನಿಖೆಗೆ ಮುಂದಾಗುವಂತಿಲ್ಲ…..

ಮೇಲಿನ ಅಂಶಗಳಿರುವ ಕಾಯ್ದೆ ಸಿದ್ಧವಾದದ್ದಷ್ಟೇ, ಕಾನೂನಿನ ಹಿಂದೆ ರಚಿಸಬೇಕಾದ ನಿಯಮಗಳು ರೂಪಗೊಳ್ಳಲಿಲ್ಲ. ರಾಜ್ಯ ಮಟ್ಟದಲ್ಲಿ ಹಾಗೂ ಸ್ಥಳೀಯವಾಗಿ ದೂರು ನಿರ್ವಹಣೆಯ ಮೂಲಭೂತ ಸೌಕರ್ಯ, ತಂಡವನ್ನು ಸರ್ಕಾರ ಒದಗಿಸಲಿಲ್ಲ. ಈ ನಡುವೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಭ್ರಷ್ಟಾಚಾರ ಮತ್ತಿತರ ದೂರು ನಿರ್ವಹಣೆಗೆ ಎನ್‌ಆರ್‌ಇಜಿ ಒಂಬುಡ್ಸ್‌ಮನ್‌ ಆರಂಭಿಸಬೇಕು ಎಂದು ಆದೇಶಿಸಿತು. ಸದ್ಯ ಕರ್ನಾಟಕದಲ್ಲೂ ಎನ್‌ಆರ್‌ಇಜಿ ಒಂಬುಡ್ಸ್‌ಮನ್‌ ಕಾರ್ಯನಿರ್ವಹಿಸುತ್ತಿದೆ. ಪಂಚಾಯಿತಿ ಒಂಬುಡ್ಸ್‌ಮನ್‌ ಕರ್ನಾಟಕದಲ್ಲಂತೂ ಇಲ್ಲ. ಎನ್‌ಆರ್‌ಇಜಿ ಒಂಬುಡ್ಸ್‌ಮನ್‌ ಕುರಿತಾಗಿ ಇನ್ನೊಮ್ಮೆ ಇದೇ ಕಾಲಂನಲ್ಲಿ ಅವಲೋಕನ ನಡೆಸೋಣ.

-ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
 

Advertisement

Udayavani is now on Telegram. Click here to join our channel and stay updated with the latest news.

Next