Advertisement

Karnataka ಶಿಕ್ಷಣ ವ್ಯವಸ್ಥೆ ಹಾಳು ಮಾಡಿದ್ದೇ ಸರ್ಕಾರದ ಸಾಧನೆ: ಸುರೇಶ್‌ ಕುಮಾರ್‌

08:31 PM May 17, 2024 | Team Udayavani |

ಬೆಂಗಳೂರು: ಅತ್ಯಂತ ವೈಜ್ಞಾನಿಕವಾಗಿ ರೂಪಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿಗೆ ರಾಜಕೀಯ ಮೇಲಾಟದ ಕಾರಣ ತಿಲಾಂಜಲಿ ಕೊಟ್ಟು ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವುದಾಗಿ ಭರವಸೆ ಕೊಟ್ಟು ಇದುವರೆಗೂ ಅನುಷ್ಠಾನ ಮಾಡದೆ ಇರುವುದು ಈ ಸರ್ಕಾರದ ಒಂದು ವರ್ಷದ ಸಾಧನೆ ಎಂದು ಶಾಸಕ ಎಸ್‌.ಸುರೇಶ್‌ ಕುಮಾರ್‌ ವ್ಯಂಗ್ಯವಾಡಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಕಾಂಗ್ರೆಸ್‌ ಸರ್ಕಾರ ಕಳೆದ ಒಂದು ವರ್ಷದ ಅವಧಿಯಲ್ಲಿ ಪದವಿ ತರಗತಿಗಳಲ್ಲಿ, ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಜತೆ ಚೆಲ್ಲಾಟ ಆಡುತ್ತಿದೆ. ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿಗಳ ಭವಿಷ್ಯವನ್ನೇ ಮಸಕು ಮಾಡುತ್ತಿದೆ. ಸಿಇಟಿ ವ್ಯವಸ್ಥೆಯನ್ನು ಹಾಳುಗೆಡಹಿದ ಕೀರ್ತಿಯೂ ಇದೇ ಸರ್ಕಾರಕ್ಕೆ ಸಲ್ಲಬೇಕು. ಸವರ್‌ì ಡೌನ್‌ ಕಾರಣಕ್ಕೆ ಪ್ರವೇಶಪತ್ರ ಪಡೆಯಲು ವಿದ್ಯಾರ್ಥಿಗಳಿಗೆ ಆಗಲಿಲ್ಲ. ಎಸ್ಸೆಸ್ಸೆಲ್ಸಿಗೆ 3 ಪರೀಕ್ಷೆ ಮಾಡಿ ಮಕ್ಕಳ ಗಾಂಭೀರ್ಯ ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.

15 ಸಾವಿರ ಗ್ರಾಜುಯೇಟ್‌ ಪ್ರೈಮರಿ ಟೀಚರ್ಸ್‌ (ಜಿಪಿಟಿ) ನೇಮಕಾತಿಗೆ ಅವಕಾಶ ಇದ್ದರೂ ಅಸ್ತವ್ಯಸ್ತ ವ್ಯವಸ್ಥೆ ಸೃಷ್ಟಿಸಿ ನೇಮಕ ಮಾಡದೆ, ಕೆಲಸ ಕೊಡದೆ ಎಲ್ಲ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟು ಮಾಡಿದ್ದಾರೆ. ಶೈಕ್ಷಣಿಕ ವರ್ಷ ಸನಿಹದಲ್ಲಿದ್ದರೂ ರಾಜ್ಯ ಸರ್ಕಾರ ಅಧಿಕೃತ ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್‌.ಹರೀಶ್‌ ಉಪಸ್ಥಿತರಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಮಾಡಿದ ಬಳಿಕ ಸರ್ಕಾರ ಶಿಕ್ಷಣ ನೀತಿ ಸಮಿತಿ ರಚಿಸಿತ್ತು. ಆ ಸಮಿತಿಯನ್ನು ಸಮರ್ಥವಾಗಿ ಮುನ್ನಡೆಸಲೂ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಪೂರ್ಣಾವಧಿ ಶಿಕ್ಷಣ ಸಚಿವರೇ ಇಲ್ಲದಿರುವುದೇ ಇದಕ್ಕೆ ಕಾರಣ. ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟ, ಅವರ ಭವಿಷ್ಯವನ್ನೇ ಹಾಳು ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದ್ದೇ ದೊಡ್ಡ ಕೊಡುಗೆ ಎಂದು ದೂರಿದರು.

ಮಕ್ಕಳು, ಪಾಲಕರು, ಶಾಲಾ ಮುಖ್ಯಸ್ಥರ ಜತೆ ಸಂವಾದ ಮಾಡಿ ಉದ್ದೇಶ ಸ್ಪಷ್ಟಗೊಳಿಸದೇ ನ್ಯಾಯಾಲಯದ ವರೆಗೆ ಪ್ರಕರಣ ಹೋಗಿತ್ತು. ನ್ಯಾಯಾಲಯದ ತಡೆಯಾಜ್ಞೆ, ಅದರ ತೆರವು, ಪರೀಕ್ಷೆ ದಿನ ಪ್ರಕಟಿಸುವುದು ಸೇರಿದಂತೆ ಹಲವು ಬೆಳವಣಿಗೆ ನಡೆದಿದೆ. ಎಳೆ ಮಕ್ಕಳ ಮನಸ್ಥಿತಿ, ಪೋಷಕರ ಆತಂಕವನ್ನು ಗಣನೆಗೇ ತೆಗೆದುಕೊಂಡಿಲ್ಲ. ಈ ಮಕ್ಕಳಿಗೆ ಮತ ಇಲ್ಲದ ಕಾರಣ ಹೀಗೆ ಮಾಡುತ್ತಿದ್ದಾರೆ. ಅವರ ಜೀವನವನ್ನು ಅಂಧಕಾರಕ್ಕೆ ಒಯ್ಯುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next