Advertisement

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

12:22 PM May 18, 2024 | ಕೀರ್ತನ್ ಶೆಟ್ಟಿ ಬೋಳ |

2024ರ ಇಂಡಿಯನ್ ಪ್ರೀಮಿಯರ್ ಲೀಗ್ ನ ಅತ್ಯಂತ ರೋಚಕ ಪಂದ್ಯ ಎಂದೇ ಪರಿಗಣಿಸಲಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹಣಾಹಣಿಗೆ ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಗುತ್ತಿದೆ. ಶನಿವಾರ (ಮೇ 18) ರಂದು ನಡೆಯಲಿರುವ ಆರ್ ಸಿಬಿ- ಸಿಎಸ್ ಕೆ ನಡುವಿನ ರೋಚಕ ಹಣಾಹಣಿಗೆ ಇದೀಗ ಮಳೆರಾಯನ ಕಾಟ ಎದುರಾಗಿದೆ.

Advertisement

ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಎರಡೂ ತಂಡಗಳು ಪ್ಲೇ ಆಫ್ ಬಾಗಿಲಿಗೆ ಬಂದು ನಿಂತಿರುವ ಕಾರಣ ಹೈವೋಲ್ಟೇಜ್ ಕ್ಲ್ಯಾಶ್ ಪಂದ್ಯ ಮಳೆಯ ಕಾರಣದಿಂದ ರದ್ದಾಗಬಾರದು ಎಂದು ಕ್ರೀಡಾಭಿಮಾನಿಗಳು ಹಾರೈಸುತ್ತಿದ್ದಾರೆ.

ಆದರೆ ಈ ಪಂದ್ಯವು ಚಿನ್ನಸ್ವಾಮಿಯಲ್ಲಿ ನಡೆಯುತ್ತಿರುವ ಕಾರಣ ಸಣ್ಣ ನಿರಾಳತೆಯು ಅಭಿಮಾನಿಗಳಲ್ಲಿದೆ. ಎಷ್ಟೇ ಮಳೆ ಬಂದರೂ ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಪಂದ್ಯ ಆರಂಭಿಸುವ ವಿಶೇಷ ತಂತ್ರಜ್ಞಾನ ಬೆಂಗಳೂರಿನಲ್ಲಿದೆ. ಅದುವೇ ಸಬ್ ಏರ್ ಡ್ರೈನೇಜ್ ಸಿಸ್ಟಂ.

ಹಾಗಾದರೆ ಏನಿದು ಸಬ್ ಏರ್ ಡ್ರೈನೇಜ್ ಸಿಸ್ಟಂ? ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇದನ್ನು ಯಾವಾಗ ಅಳವಡಿಸಲಾಯಿತು, ಏನಿದರ ವಿಶೇಷತೆ? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.

ಸಬ್ ಏರ್ ಸಿಸ್ಟಂನ ಸಹಾಯದಿಂದ ಮೈದಾನವನ್ನು ನಿರ್ವಹಿಸಲು ಕೆಎಸ್ ಸಿಎ ಸಮರ್ಥವಾಗಿದೆ, ಅದರ ಕಾರ್ಯಾಚರಣೆಗಳು ಸಂಪೂರ್ಣವಾಗಿ ಡಿಜಿಟಲ್ ಆಗಿವೆ. ಸಾಂಪ್ರದಾಯಿಕ ಮಣ್ಣಿನ ಮೈದಾನಲ್ಲಿ ಸಬ್ ಏರ್ ಸಿಸ್ಟಂ ಕೆಲಸ ಮಾಡುವುದಿಲ್ಲ. ಇದಕ್ಕೆ ಮರಳಿನ ಕೆಳ ಪದರ ಹೊಂದಿದ ಮೈದಾನದ ಅಗತ್ಯವಿದೆ.

Advertisement

ಈ ವಿಡಿಯೋ ನೀವು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. ಇದು ಚಿನ್ನಸ್ವಾಮಿಯ ಯ ವ್ಯವಸ್ಥೆಯ ಒಂದು ತುಣುಕು.

ಸಬ್‌ಏರ್ ಸಿಸ್ಟಮ್‌ಗೆ ನಿರ್ಣಾಯಕ ವೈಶಿಷ್ಟ್ಯವೆಂದರೆ ಅದು ಸ್ಥಳದಲ್ಲಿ ಮಳೆ ಪ್ರಾರಂಭವಾದಾಗಲೇ ನೀರನ್ನು ಸೆಳೆಯಲು ಪ್ರಾರಂಭಿಸುತ್ತದೆ. ಅಲ್ಲದೆ ಇದು ಒಣಗಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಹೊರಾಂಗಣದಲ್ಲಿ ಕೆಸರು ಉಂಟಾಗುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

“ಸಾಮಾನ್ಯ ಮಣ್ಣಿಗೆ ನೀರು ಬಿದ್ದರೆ ಗಡ್ಡೆಯಾಗುತ್ತದೆ, ಇಲ್ಲವೇ ಮೈದಾನ ಊದಿಕೊಳ್ಳುತ್ತದೆ. ಆದರೆ ಇದು ಮರಳಿನಲ್ಲಿ ಸಾಧ್ಯವಿಲ್ಲ. ಒಳಚರಂಡಿ ವ್ಯವಸ್ಥೆಯು ನೀರನ್ನು ಹೊರಹಾಕುತ್ತದೆ. ಇತರ ರೀತಿಯ ಮಣ್ಣಿನಲ್ಲಿ ಮೇಲ್ಮೈ ತೇವಾಂಶವನ್ನು ಉಳಿಸಿಕೊಳ್ಳಲಾಗುತ್ತದೆ. ಆದರೆ ಮರಳು ಅದನ್ನು ಮಾಡುವುದಿಲ್ಲ. ಸಬ್‌ಏರ್ ವ್ಯವಸ್ಥೆಯು ನೀರನ್ನು ಒಳಕ್ಕೆ ಎಳೆದು ಕೊಳ್ಳಲು ಮಾಡಲು ಅನುವು ಮಾಡಿಕೊಡುತ್ತದೆ, ಇದರರ್ಥ ಔಟ್‌ಫೀಲ್ಡ್ ಕಡಿಮೆ ಜಾರುತ್ತದೆ ಮತ್ತು ಗಾಯದ ಅಪಾಯವನ್ನು ಕಡಿಮೆ ಮಾಡುತ್ತದೆ. ಮರಳಿನ ನಿರ್ವಹಣೆಯಲ್ಲಿ ತುಂಬಾ ಜಾಗೃತಿ ವಹಿಸಬೇಕು, ವಿಶೇಷವಾಗಿ ಬೆಂಗಳೂರಿನಂತಹ ತಂಪಾದ ವಾತಾವರಣದಲ್ಲಿ” ಎನ್ನುತ್ತಾರೆ ಬಿಸಿಸಿಐ ದಕ್ಷಿಣ ವಲಯದ ಕ್ಯುರೇಟರ್ ಪಿ.ಆರ್. ವಿಶ್ವನಾಥನ್.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿರುವ ನೀರು ತೆರವು ಸೌಲಭ್ಯವನ್ನು 200-ಅಶ್ವಶಕ್ತಿಯ ಯಂತ್ರದಿಂದ ನಡೆಸಲಾಗುತ್ತಿದೆ. ಇದು ನಿಮಿಷಕ್ಕೆ 10,000 ಲೀಟರ್ ನೀರನ್ನು ಹರಿಸುತ್ತದೆ. ಭಾರೀ ಮಳೆಯ ನಂತರವೂ ಕೆಲವೇ ನಿಮಿಷಗಳಲ್ಲಿ ಆಟಕ್ಕೆ ಮೈದಾನವನ್ನು ಸಿದ್ಧಪಡಿಸುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ.

ಇದನ್ನು ಯುಎಸ್ ಮೂಲದ ಸಬ್ ಏರ್ ಎಂಬ ಕಂಪನಿ ಅಭಿವೃದ್ಧಿಪಡಿಸಿದೆ. ಸಿಸ್ಟಂ ಎರಡು ವಿಧಾನಗಳಲ್ಲಿ ಕಾರ್ಯನಿರ್ವಹಿಸುತ್ತದೆ; ಪ್ರೆಶರ್ ಮೋಡ್ ಮತ್ತು ಹೀರುವ ಮೋಡ್.

ಸಬ್ ಏರ್ ಸಿಸ್ಟಂನ ಪ್ರೆಶರ್ ಮೋಡ್ ತಳಮಟ್ಟದ ಜನರಿಗೆ ತಾಜಾ ಗಾಳಿಯನ್ನು ಒದಗಿಸಲು ಸಹಾಯ ಮಾಡುತ್ತದೆ.

ಅಳವಡಿಕೆಯ ಸಮಯದಲ್ಲಿ, ಚಿನ್ನಸ್ವಾಮಿ ಕ್ರೀಡಾಂಗಣದ ಮೈದಾನದ ವಿವಿಧ ಭಾಗಗಳಲ್ಲಿ ರಿಮೋಟ್ ಸೆನ್ಸಾರ್‌ ಗಳನ್ನು ಅಳವಡಿಸಲಾಗಿದ್ದು, ನೆಲದ ಮೇಲೆ ಬಿದ್ದ ನೀರಿನ ಪ್ರಮಾಣವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ನೀರು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾದ ನಂತರ, ಸೆನ್ಸಾರ್ ಗಳು ಯಂತ್ರಕ್ಕೆ ಸಂಕೇತವನ್ನು ಕಳುಹಿಸುತ್ತವೆ, ಅದು ಸ್ವಯಂಚಾಲಿತವಾಗಿ ಹೀರಿಕೊಳ್ಳುವ ಮೋಡ್‌ಗೆ ಬದಲಾಗುತ್ತದೆ.

ಅಳವಡಿಸಿದ್ದು ಯಾವಾಗ?

2015ರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಬೆಂಗಳೂರಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಐದು ದಿನದ ಪಂದ್ಯದಲ್ಲಿ ನಡೆದಿದ್ದು ಕೇವಲ ಒಂದು ದಿನ ಮಾತ್ರ. ಈ ಘಟನೆಯಿಂದಾಗಿ ಚಿನ್ನಸ್ವಾಮಿ ಸ್ಟೇಡಿಯಂನ್ನು ನಿರ್ವಹಿಸುವ ಕೆಎಸ್ ಸಿಎ ಬದಲಾವಣೆಗೆ ಮುಂದಾಯಿತು. ಸ್ಟೇಡಿಯಂನಲ್ಲಿ ಹೊಸ ಡ್ರೈನೇಜ್ ಸಿಸ್ಟಂ ತರಲು ಮುಂದಾಯಿತು.

ಪರಿಣಾಮವಾಗಿ, ಜೂನ್ 2016 ರಿಂದ ಜನವರಿ 2017 ರ ನಡುವೆ ಮೈದಾನದಲ್ಲಿ ಆಟದ ಮೈದಾನದ ಸಂಪೂರ್ಣ ಪರಿಷ್ಕರಣೆ ಪೂರ್ಣಗೊಂಡಿತು. ಮೈದಾನದಲ್ಲಿ ನೀರನ್ನು ಪತ್ತೆಹಚ್ಚುವ ಸ್ಮಾರ್ಟ್ ಸೆನ್ಸಾರ್ ಗಳನ್ನು ಕೂಡಾ ಅಳವಡಿಸಲಾಗಿದೆ.

ಈ ವ್ಯವಸ್ಥೆಯನ್ನು ಒಟ್ಟು ಸುಮಾರು ರೂ. 4.25 ಕೋಟಿ ರೂ ಖರ್ಚು ಮಾಡಿ ನಿರ್ಮಿಸಲಾಗಿದೆ. ಸುಮಾರು 4.5 ಕಿಲೋಮೀಟರ್ ಉದ್ದದ ಪೈಪ್ ಬಳಕೆ ಮಾಡಲಾಗಿದೆ.

ಇದರ ಬಳಿಕ ಬೆಂಗಳೂರಿನಲ್ಲಿ ಮಳೆಯ ಕಾರಣದಿಂದ ಪಂದ್ಯ ರದ್ದಾಗಿಲ್ಲ. 2023ರ ಐಪಿಎಲ್ ನಲ್ಲಿ ಗುಜರಾತ್ ಮತ್ತು ಆರ್ ಸಿಬಿ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾದರೂ ಯಾವುದೇ ಓವರ್ ಕಡಿತವಾಗದೆ ಇಲ್ಲಿ ಪಂದ್ಯ ನಡೆಸಲಾಗಿತ್ತು. ದಿನವಿಡೀ ಮಳೆ ಬಂದರೂ, ಹನಿ ನಿಂತ ಕೆಲವೇ ನಿಮಿಷಗಳಲ್ಲಿ ಮೈದಾನ ಪಂದ್ಯ ನಡೆಸಲು ಅನುವು ಮಾಡಿಕೊಡುತ್ತದೆ. ಇದು ಚಿನ್ನಸ್ವಾಮಿಯ ವಿಶೇಷತೆ.

Advertisement

Udayavani is now on Telegram. Click here to join our channel and stay updated with the latest news.

Next