ದಯಾಳ್ ನಿರ್ದೇಶನದ, “ಲೂಸ್ ಮಾದ’ ಯೋಗಿ ನಾಯಕರಾಗಿ ನಟಿಸಿರುವ “ಒಂಬತ್ತನೇ ದಿಕ್ಕು’ ಚಿತ್ರ ಡಿ.31ಕ್ಕೆ ಬಿಡುಗಡೆಯಾಗಲು ಅಣಿಯಾಗಿತ್ತು. ಆದರೆ, ಈಗ ಚಿತ್ರತಂಡ ಬಿಡುಗಡೆಯ ದಿನಾಂಕದಲ್ಲಿ ಬದಲಾವಣೆ ಮಾಡಿಕೊಂಡಿದೆ. ಚಿತ್ರವನ್ನು ಜನವರಿ 28ರಂದು ತೆರೆಗೆ ತರಲು ನಿರ್ಧರಿಸಿದೆ. ಈ ವಿಷಯನ್ನು ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿದೆ.
ಇದಕ್ಕೆ ಕಾರಣ ಡಿ.31ರಂದು ಬಿಡುಗಡೆಯಾಗುತ್ತಿರುವ ಚಿತ್ರಗಳು. “ಲವ್ ಯು ರಚ್ಚು’, “ಅರ್ಜುನ್ ಗೌಡ’, “ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರಗಳು ಡಿ.31ರಂದು ತೆರೆಕಾಣುತ್ತಿದೆ. ಜೊತೆಗೆ ಕರ್ನಾಟಕದ ಅನೇಕ ಚಿತ್ರಮಂದಿರಗಳಲ್ಲಿ ಪುಷ್ಪ ಸೇರಿದಂತೆ ಪರಭಾಷಾ ಚಿತ್ರಗಳಿವೆ. ಹೀಗಾಗಿ ಚಿತ್ರಮಂದಿರದ ಕೊರತೆ ಎದುರುವುದರಿಂದ ನಿರ್ದೇಶಕ ದಯಾಳ್ ಪದ್ಮನಾಭನ್ ತಮ್ಮ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದಾರೆ.
ಈ ಬಗ್ಗೆ ಮಾತನಾಡುವ ದಯಾಳ್, “ಚಿತ್ರಮಂದಿರದ ಲಭ್ಯತೆಯಲ್ಲಿ ಸ್ವಲ್ಪ ಸಮಸ್ಯೆಯಾಗುವುದರಿಂದ ಹಾಗೂ ನಮ್ಮ ಸಿನಿಮಾವನ್ನು ನಾವೇ ಸಾಯಿಸಬಾರದೆಂಬ ಕಾರಣಕ್ಕೆ ಚಿತ್ರದ ಬಿಡುಗಡೆಯನ್ನು ಜ.28ಕ್ಕೆ ಮಾಡುತ್ತಿದ್ದೇವೆ’ ಎನ್ನುತ್ತಾರೆ.
ಇದನ್ನೂ ಓದಿ:ಕಲಾವಿದರ ಸಂಘವನ್ನು ಭೂತ ಬಂಗಲೆ ಮಾಡಬೇಡಿ: ಮುಖ್ಯಮಂತ್ರಿ ಚಂದ್ರು
ಇನ್ನು ತಮ್ಮ “ಒಂಬತ್ತನೇ ದಿಕ್ಕು’ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ದಯಾಳ್ ಪದ್ಮನಾಭನ್, “ಇತ್ತೀಚೆಗೆ ನನ್ನ ಸಿನಿಮಾಗಳೆಲ್ಲವೂ, ಎಕ್ಸ್‌ಪೆರಿಮೆಂಟಲ್ ಆಗಿದ್ದವು. “ಯಶವಂತ್’, “ಸರ್ಕಸ್’ ಸಿನಿಮಾದ ನಂತರ ನಾನು ಮಾಡುತ್ತಿರುವ ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಸಿನಿಮಾ ಇದು. ನಾನು ಇಲ್ಲಿಯವರೆಗೆ ಮಾಡಿದ ಸಿನಿಮಾಗಳಿಗಿಂತ ಹೊರತಾಗಿರುವ, ಹೊಸಥರದ ಸಬೆjಕ್ಟ್‌ನ ಸಿನಿಮಾ ಮಾಡಬೇಕು ಅಂತ ಅಂದುಕೊಳ್ಳುತ್ತಿದ್ದಾಗ ಈ ಸಿನಿಮಾ ಮಾಡುವ ಐಡಿಯಾ ಬಂತು. ಇದೊಂದು ಇಂದಿನ ಸ್ಟೈಲ್‌ನ ಪಕ್ಕಾ ಕಮರ್ಶಿಯಲ್ ಎಲಿಮೆಂಟ್ಸ್ ಇರುವ ಆ್ಯಕ್ಷನ್ ಕಂ ಕ್ರೈಂ-ಥ್ರಿಲ್ಲರ್ ಸಬ್ಜೆಕ್ಟ್ ಸಿನಿಮಾ. ನಮ್ಮ ಕಾನೂನಿನಲ್ಲಿ ಬರುವ ಸೆನ್ಸಿಟಿವ್ ವಿಷಯವೊಂದನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ. ಅದೇನು ಅನ್ನೋದನ್ನ ಸ್ಕ್ರೀನ್ ಮೇಲೆ ನೋಡ್ಬೇಕು. ಈ ಸಿನಿಮಾದಲ್ಲಿ ಸಾಂಗ್ಸ್, ಆ್ಯಕ್ಷನ್, ಕಾಮಿಡಿ, ಎಮೋಶನ್ಸ್ ಎಲ್ಲವೂ ಇರುತ್ತದೆ. ಒಂದು ದಿನದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವ ಕಥೆಯನ್ನ ಸ್ಕ್ರೀನ್ ಮೇಲೆ ಹೇಳಿದ್ದೇವೆ’ ಎಂದು ಚಿತ್ರದ ಕಥಾಹಂದರದ ಬಗ್ಗೆ ವಿವರಣೆ ಕೊಡುತ್ತಾರೆ.