ನಿರ್ದೇಶಕ ಜನಾರ್ದನ್ ಚಿಕ್ಕಣ್ಣ “ಗುಳ್ಟು’ ನಂತರ ರವಿಬೆಳಗೆರೆ ಅವರು ಬರೆದಿರುವ “ಒಮರ್ಟಾ’ ಪುಸ್ತಕ ಆಧರಿಸಿದ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತು. ಆ ಚಿತ್ರಕ್ಕೆ ಅನೀಶ್ ತೇಜೇಶ್ವರ್ ಹೀರೋ ಅನ್ನೋದು ಗೊತ್ತಿದೆ. ಆದರೆ, ಸಿನಿಮಾ ಯಾವಾಗ ಶುರು ಆಗುತ್ತೆ ಎಂಬುದು ಮಾತ್ರ ಗೊತ್ತಿರಲಿಲ್ಲ. “ಒಮರ್ಟಾ’ ಚಿತ್ರಕ್ಕೆ ಜನವರಿಯಲ್ಲಿ ಚಾಲನೆ ಸಿಗಲಿದೆ. ಈ ಕುರಿತು ಸ್ವತಃ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಅವರೇ
“ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
“ಒಮರ್ಟಾ’ ಹೆಸರಿನ ಹಿಂದಿ ಚಿತ್ರ 2017 ರಲ್ಲಿ ಬಂದಿದೆ. ಹಾಗಂತ, ಆ ಚಿತ್ರಕ್ಕೂ ಈ ಸಿನಿಮಾಗೂ ಸಂಬಂಧವಿಲ್ಲ. ಅದು ಕೂಡ ಅಂಡರ್‌ವರ್ಲ್ಡ್ ಕುರಿತ ವಿಷಯ ಹೊಂದಿದ್ದ ಚಿತ್ರ. ರವಿಬೆಳಗೆರೆ ಬರೆದಿರುವ “ಒಮರ್ಟಾ’ ಪುಸ್ತಕಕ್ಕೂ ಹಿಂದಿಯ “ಒಮರ್ಟಾ’ ಚಿತ್ರಕ್ಕೂ ಸಂಬಂಧವಿಲ್ಲ. ಎರಡೂ ಅಂಡರ್‌ವರ್ಲ್ಡ್ ಕಥೆ ಹೊಂದಿದ್ದರೂ, ಜನಾರ್ದನ್ ಚಿಕ್ಕಣ್ಣ, ಈಗ ಕೈಗೆತ್ತಿಕೊಂಡಿರುವ ರವಿಬೆಳಗೆರೆ ಅವರ “ಒಮರ್ಟಾ’ ಕಥೆಯ ಜೊತೆಯಲ್ಲಿ ಚಿತ್ರಕಥೆಯನ್ನು ರೋಚಕ ಎನಿಸುವಂತೆ ಹೆಣೆದಿದ್ದು, ಸ್ಕ್ರಿಪ್ಟ್ ಈಗ ಪೂರ್ಣಗೊಂಡಿದೆ.
ಎಲ್ಲಾ ಸರಿ, ಚಿತ್ರಕ್ಕೆ “ಒಮರ್ಟಾ’ ಶೀರ್ಷಿಕೆ ಇರುವುದಿಲ್ಲ. ಈ ಕುರಿತು ಹೇಳುವ ಜನಾರ್ದನ್ ಚಿಕ್ಕಣ್ಣ, ಚಿತ್ರಕ್ಕೆ ಬೇರೆ ಶೀರ್ಷಿಕೆ ಇಡುವ ಕುರಿತು ಚರ್ಚೆ ನಡೆಯುತ್ತಿದೆ. ಅದೊಂದು ಅಂಡರ್‌ವರ್ಲ್ಡ್ ಕಥೆ ಆಗಿರುವುದರಿಂದ ಪಕ್ಕಾ ಮಾಸ್ ಆಗಿರುವಂತಹ ಶೀರ್ಷಿಕೆ ಇಡಲು ಚಿಂತನೆ ನಡೆಯುತ್ತಿದೆ. “ಒಮರ್ಟಾ’ ಹೆಸರಿನ ಚಿತ್ರ ಬಾಲಿವುಡ್‌ನಲ್ಲಿ ಬಂದಿರುವುದರಿಂದ, ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕೆ, ಟೈಟಲ್ ಬೇರೆ ಇಡಲಾಗುವುದು. ಇನ್ನುಳಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಶೇ.25 ರಷ್ಟು ಚಿತ್ರೀಕರಣ ನಡೆಯಲಿದೆ.
ನಂತರ ಬೆಂಗಳೂರು ಇತರೆ ಸ್ಥಳಗಳಲ್ಲಿ ನಡೆಸಲಾಗುವುದು. ಸದ್ಯಕ್ಕೆ ಅನೀಶ್ ತೇಜೇಶ್ವರ್ ಹೀರೋ. ಉಳಿದಂತೆ ರಂಗಾಯಣ ರಘು ಅವರಿಗೆ ಕಥೆ, ಪಾತ್ರ ವಿವರಿಸಬೇಕಿದೆ. ಚಿತ್ರಕ್ಕಿನ್ನೂ ತಂತ್ರಜ್ಞರ ಆಯ್ಕೆ ನಡೆದಿಲ್ಲ. ನಾನು ಹಾಗು ಹರಿಕೃಷ್ಣ ಜೊತೆಗೂಡಿ ಚಿತ್ರಕಥೆ, ಸಂಭಾಷಣೆ ಮಾಡಿದ್ದೇನೆ. ಚಿತ್ರಕ್ಕೆ “ಗುಳ್ಟು’ ಪ್ರಶಾಂತ್‌ರೆಡ್ಡಿ ಹಾಗು ಚೇತನ್ ನಿರ್ಮಾಪಕರು. ಜನವರಿ ಅಂತ್ಯಕ್ಕೆ ಚಿತ್ರ ಶುರುವಾಗಲಿದೆ’ ಎಂದು ವಿವರ ಕೊಡುತ್ತಾರೆ ಜನಾರ್ದನ್ ಚಿಕ್ಕಣ್ಣ.