ಲಂಡನ್: ಜಮೈಕಾದ ಒಮರ್ ಮೆಕ್‌ಲೋಡ್ ವಿಶ್ವ ಆ್ಯತ್ಲೆಟಿಕ್ಸ್ 110 ಮೀ. ಹರ್ಡಲ್ಸ್ ನಲ್ಲಿ ಮಿಂಚಿನ ಓಟ ದಾಖಲಿಸಿ ಚಿನ್ನದ ಪದಕದಿಂದ ಸಿಂಗಾರಗೊಂಡಿದ್ದಾರೆ. ತಮ್ಮ ಈ ಸಾಧನೆಯನ್ನು ಅಮ್ಮ ಹಾಗೂ ನಾಡಿನ ಸೂಪರ್‌ಸ್ಟಾರ್ ಉಸೇನ್ ಬೋಲ್ಟ್ ಅವರಿಗೆ ಅರ್ಪಿಸಿದ್ದಾರೆ.
ಮೆಕ್‌ಲೋಡ್ ಅವರ ಈ ಸಾಧನೆಯಿಂದ ಅಮೆರಿಕದ ಅರೀಸ್ ಮೆರಿಟ್ಸ್ ಅವರ ಕನಸು ನುಚ್ಚುನೂರಾಯಿತು. 2012ರ ಒಲಿಂಪಿಕ್ ಚಾಂಪಿ ಯನ್ ಆಗಿದ್ದ ಮೆರಿಟ್ಸ್ 110 ಮೀ. ಹರ್ಡಲ್ಸ್ ನ ವಿಶ್ವದಾಖಲೆಯ ಒಡೆಯನೂ ಹೌದು. ಮೂತ್ರ ಪಿಂಡ ಕಸಿ ಮಾಡಿಕೊಂಡ 2 ವರ್ಷಗಳ ಬಳಿಕ ಪದಕವೊಂದನ್ನು ಗೆಲ್ಲುವುದು ಮೆರಿಟ್ಸ್ ಕನಸಾಗಿತ್ತು. ಆದರೆ ಅವರು 5ನೇ ಸ್ಥಾನಕ್ಕೆ ಕುಸಿಯಲ್ಪಟ್ಟರು.
23ರ ಹರೆಯದ ಮೆಕ್‌ಲೋಡ್ ಆರಂಭ ದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದರು. ಅಂತಿಮವಾಗಿ 13.04 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಕಳೆದ ಬಾರಿಯ ಚಾಂಪಿಯನ್ ರಶ್ಯದ ಸಗೇìಯಿ ಶುಬೆಂಕೋವ್ ಬೆಳ್ಳಿ ಹಾಗೂ ಹಂಗೇರಿಯ ಬಲಾಝ್ ಬಾಜಿ ಅಚ್ಚರಿಯ ಕಂಚು ಗೆದ್ದರು. ರಶ್ಯಕ್ಕೆ ಆ್ಯತ್ಲೆಟಿಕ್ಸ್ ನಿಷೇಧವಿದ್ದುದರಿಂದ ಶುಬೆಂಕೋವ್ ಸ್ವತಂತ್ರವಾಗಿ ಸ್ಪರ್ಧಿಸಿದ್ದರು.
“ನನ್ನ ಅಮ್ಮ ಅರ್ನೆಲ್ಲಾ ನೈಟ್ ಮಾರಿಸ್ ಈ ಸ್ಪರ್ಧೆಯನ್ನು ಸ್ಟಾಂಡ್‌ನಲ್ಲಿ ಕುಳಿತು ವೀಕ್ಷಿಸುತ್ತಿದ್ದಳು. ಹೀಗಾಗಿ ನಾನಿಂದು ಚಾಂಪಿಯನ್ ಆಗಲೇಬೇಕಿತ್ತು. ಇದರಲ್ಲಿ ಯಶಸ್ಸು ಕಂಡಿದ್ದೇನೆ. ಈ ಯಶಸ್ಸನ್ನು ಅಮ್ಮನಿಗೆ ಅರ್ಪಿಸುತ್ತೇನೆ. ಲೆಜೆಂಡ್ರಿ ಉಸೇನ್ ಬೋಲ್ಟ್, ನಿಮಗೂ ಅರ್ಪಿಸುತ್ತಿದ್ದೇನೆ…’ ಎಂದು ಮೆಕ್‌ಲೋಡ್ ಹೇಳಿದರು.
ಉಸೇನ್ ಬೋಲ್ಟ್ ಮತ್ತು ಡಬಲ್ ಒಲಿಂಪಿಕ್ ಚಾಂಪಿಯನ್ ವನಿತಾ ಸ್ಪ್ರಿಂಟರ್ ಎಲೈನ್ ಥಾಮ್ಸನ್ 100 ಮೀ. ವಿಭಾಗದಲ್ಲಿ ಚಿನ್ನ ತರಲು ವಿಫಲರಾದ ಬಳಿಕ ಜಮೈಕಾ, ಮೆಕ್‌ಲೋಡ್ ಮೇಲೆ ನಿರೀಕ್ಷೆಯ ಮೂಟೆಯನ್ನೇ ಇರಿಸಿತ್ತು.
“ಜಮೈಕಾದ ಬಾವುಟವನ್ನು ಬಾನೆತ್ತರಕ್ಕೆ ಹಾರಿಸಬೇಕೆಂಬ ಅಭಿಲಾಷೆ ಹೊತ್ತು ನಾನಿಲ್ಲಿಗೆ ಬಂದಿದ್ದೆ. ತೀವ್ರ ಒತ್ತಡದಲ್ಲಿದ್ದೆ. ಇದನ್ನು ನಾನು ಸವಾಲಾಗಿ ತೆಗೆದುಕೊಂಡೆ. ವೀಕ್ಷಕರ ಪ್ರೋತ್ಸಾಹ ಕೂಡ ಅಮೋಘ ಮಟ್ಟದಲ್ಲಿತ್ತು…’ ಎಂದು ಮೆಕ್‌ಲೋಡ್ ನುಡಿದರು.