ನವದೆಹಲಿ: ಪರಿತ್ಯಕ್ತ ಪತ್ನಿ ಪಾಯಲ್ ಅಬ್ದುಲ್ಲಾ ಅವರಿಂದ ವಿಚ್ಛೇದನ ನೀಡುವಂತೆ ಕೋರಿ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೋಮವಾರ (ಜುಲೈ 15) ಪಾಯಲ್ ಗೆ ನೋಟಿಸ್ ಜಾರಿಗೊಳಿಸಿದೆ.
ಓಮರ್ ಅಬ್ದುಲ್ಲಾ ಸಲ್ಲಿಸಿದ್ದ ವಿಚ್ಛೇದನ ಅರ್ಜಿಗೆ ಸಂಬಂಧಿಸಿದಂತೆ ಪಾಯಲ್ ಆರು ವಾರದೊಳಗೆ ಉತ್ತರ ನೀಡುವಂತೆ ಸುಪ್ರೀಂಕೋರ್ಟ್ ಜಸ್ಟೀಸ್ ಸುಧಾಂಶು ಧುಲಿಯಾ ಮತ್ತು ಜಸ್ಟೀಸ್ ಅಸಾನುದ್ದೀನ್ ಅಮಾನುಲ್ಲಾ ಪೀಠ ನೋಟಿಸ್ ಜಾರಿ ಮಾಡಿದೆ.
ಅಬ್ದುಲ್ಲಾ ದಂಪತಿಯ ವಿವಾಹ ಮುಗಿದು ಹೋದ ಅಧ್ಯಾಯವಾಗಿದೆ. ಇಬ್ಬರೂ ಕಳೆದ 15 ವರ್ಷಗಳಿಂದ ಪ್ರತ್ಯೇಕವಾಗಿ ವಾಸವಾಗಿದ್ದಾರೆ ಎಂದು ಓಮರ್ ಪರ ವಕೀಲರಾದ ಕಪಿಲ್ ಸಿಬಲ್ ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.
ವಿಚ್ಛೇದನ ಪಡೆಯುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಸಂವಿಧಾನದ ಕಲಂ 142ರ ಪ್ರಕಾರ ಮಧ್ಯಪ್ರವೇಶಿಸಿ, ಆದೇಶ ನೀಡುವ ಮೂಲಕ ಪ್ರಕರಣಕ್ಕೆ ನ್ಯಾಯ ಒದಗಿಸಿಕೊಡಬೇಕು. ಈ ಹಿಂದೆಯೂ ವಿಚ್ಛೇದನ ನೀಡುವಲ್ಲಿ ಸುಪ್ರೀಂಕೋರ್ಟ್ ಸಂವಿಧಾನದ 142ನೇ ಕಲಂ ಅನ್ನು ಬಳಸಿಕೊಂಡಿರುವುದಾಗಿ ಕಪಿಲ್ ವಾದ ಮಂಡಿಸಿದರು.
ಕ್ರೌರ್ಯದ ಆರೋಪದ ನೆಲೆಗಟ್ಟಿನಲ್ಲಿ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಓಮರ್ ಅಬ್ದುಲ್ಲಾ ಅವರ ಮೇಲ್ಮನವಿಯನ್ನು ವಜಾಗೊಳಿಸಿತ್ತು. ಪಾಯಲ್ ವಿರುದ್ಧದ ಕ್ರೌರ್ಯದ ಆರೋಪವನ್ನು ಸಾಬೀತುಪಡಿಸುವಲ್ಲಿ ಅಬ್ದುಲ್ಲಾ ವಿಫಲರಾಗಿದ್ದರಿಂದ 2016ರಲ್ಲಿ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡುವುದನ್ನು ನಿರಾಕರಿಸಿತ್ತು.
ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದ್ದ ದೆಹಲಿ ಹೈಕೋರ್ಟ್, ಓಮರ್ ಅಬ್ದುಲ್ಲಾ ಪತ್ನಿ ಪಾಯಲ್ ಗೆ ಪ್ರತಿ ತಿಂಗಳು 1.5 ಲಕ್ಷ ರೂಪಾಯಿ ಪಾವತಿಸಬೇಕು, ಅಲ್ಲದೇ ಇಬ್ಬರು ಗಂಡು ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ತಿಂಗಳು ತಲಾ 60,000 ಸಾವಿರ ರೂಪಾಯಿ ಜೀವನಾಂಶ ನೀಡಬೇಕೆಂದು ನಿರ್ದೇಶನ ನೀಡಿತ್ತು.
ಓಮರ್ ಅಬ್ದುಲ್ಲಾ ಮತ್ತು ಪಾಯಲ್ 1994ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, 2009ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇದೀಗ ಪತ್ನಿಯಿಂದ ವಿಚ್ಛೇದನ ಕೊಡಿಸಬೇಕೆಂದು ಕೋರಿ ಓಮರ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.