ಶ್ರೀನಗರ/ಹೊಸದಿಲ್ಲಿ: 8 ತಿಂಗಳ ಕಾಲ ಗೃಹಬಂಧನದಲ್ಲಿದ್ದ ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಮಂಗಳವಾರ ಬಿಡುಗಡೆಗೊಳಿಸಲಾಗಿದೆ. ಇದರ ಜತೆಗೆ ಸಾರ್ವಜನಿಕ ಭದ್ರತಾ ಕಾಯ್ದೆ (ಪಿಎಸ್‌ಎ ಆ್ಯಕ್ಟ್) ವಿರುದ್ಧ ದಾಖಲಿಸಲಾಗಿರುವ ಕೇಸು ಹಿಂಪಡೆಯಲಾಗಿದೆ. 2019ರ ಆ. 5ರಂದು ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಡಾ| ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಪ್ರಮುಖ ರಾಜಕೀಯ ನಾಯಕರನ್ನು ಗೃಹಬಂಧನಕ್ಕೆ ತಳ್ಳಲಾಗಿತ್ತು.
ಬಿಡುಗಡೆ ಬಳಿಕ ಟ್ವೀಟ್ ಮಾಡಿರುವ ಒಮರ್, 232 ದಿನಗಳ ಕಾಲ ಹರಿ ನಿವಾಸ ಅತಿಥಿ ಗೃಹದಲ್ಲಿ ಬಂಧನದಲ್ಲಿದ್ದ ನಾನು ಅಲ್ಲಿಂದ ಹೊರಬಂದಿದ್ದೇನೆ. 2019ರ ಆ. 5ರ ವರೆಗೆ ಇದ್ದ ಪ್ರಪಂಚಕ್ಕಿಂತ ಇದು ಸಂಪೂರ್ಣ ಹೊಸ ಪ್ರಪಂಚದಂತೆ ಕಾಣುತ್ತಿದೆ ಎಂದಿದ್ದಾರೆ.
ಬಿಡುಗಡೆವರೆಗೂ ಕೂದಲು ಕತ್ತರಿಸುವುದಿಲ್ಲ ಎಂದು ಶಪಥ ಹಾಕಿದ್ದ ಒಮರ್ ಉದ್ದನೆಯ ಬಿಳಿ ದಾಡಿಯೊಂದಿಗೆ ಜನರ ಎದುರಾದರು. ಮೆಹಬೂಬಾ ಮುಫ್ತಿ ಸೇರಿ ಇನ್ನೂ ಹಲವರು ಬಂಧನದಲ್ಲೇ ಇದ್ದಾರೆ. ಸರಕಾರ ಅವರನ್ನೂ ಬಿಡುಗಡೆಗೊಳಿಸಬೇಕು ಎಂದರು.
ಅಬ್ದುಲ್ಲಾ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಅವರ ತಂಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಒಮರ್ ಬಿಡುಗಡೆಗೆ ಕೇಂದ್ರ ತೆಗೆದುಕೊಂಡಿರುವ ನಿರ್ಧಾರದ ಕುರಿತು ವಾರದ ಒಳಗೆ ತಿಳಿಸಲು ನಿರ್ದೇಶಿಸಿತ್ತು. ಆ ಬೆನ್ನಲ್ಲೇ ಈ ಬಿಡುಗಡೆ ನಡೆದಿದೆ.