ಮುಂಬಯಿ : ಮುಂಬಯಿ – ಮಸ್ಕತ್ ಹಾರಾಟದ ಓಮನ್ ಏರ್ ವಿಮಾನ ಇಂದು ಬುಧವಾರ ಇಲ್ಲಿನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಸ್ವಲ್ಪವೇ ಹೊತ್ತಿನಲ್ಲಿ ಅದರ ಒಂದು ಇಂಜಿನ್‌ನಲ್ಲಿ ದೋಷ ಕಾಣಿಸಿಕೊಂಡ ಕಾರಣ ತುರ್ತು ಲ್ಯಾಂಡಿಗ್ ಮಾಡಿದ ಘಟನೆ ವರದಿಯಾಗಿದೆ.
ವಿಮಾನದಲ್ಲಿದ್ದ 200 ಮಂದಿ ಪ್ರಯಾಣಿಕರು ಸುರಕ್ಷಿತರಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಒಮಾನ್ ಏರ್‌ನ WY 204 ವಿಮಾನ ಇಂದು ಬುಧವಾರ ಸಂಜೆ 4.58ರ ಹೊತ್ತಿಗೆ ಮುಂಬಯಿ ಏರ್ ಪೋರ್ಟ್ ನಿಂದ ಟೇಕಾಫ್ ಆದ ಕೆಲವೇ ಕ್ಷಣದಲ್ಲಿ ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ತುರ್ತಾಗಿ ಇಳಿಯಿತು ಎಂದು ವರದಿಗಳು ತಿಳಿಸಿವೆ.
ವಿಮಾನ ಟೇಕಾಫ್ ಆದ ಹತ್ತೇ ನಿಮಿಷದಲ್ಲಿ ತುರ್ತು ಲ್ಯಾಂಡಿಂಗ್ ನಡೆದದ್ದು ಪ್ರಯಾಣಿಕರಲ್ಲಿ, ವಿಮಾನ ನಿಲ್ದಾಣದ ಅಧಿಕಾರಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. 4.50ರ ಸುಮಾರಿಗೆ ವಿಮಾನ ಮರಳಿ ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ ಮಾಡಿದ ತತ್‌ಕ್ಷಣವೇ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಸ್ಥಿತಿಯನ್ನು ಘೋಷಿಸಲಾಯಿತು ಎಂದು ವರದಿಗಳು ತಿಳಿಸಿವೆ.
ವಿಮಾನದಲ್ಲಿ ಪ್ರಯಾಣಿಕರು ಮತ್ತು ಚಾಲಕ ಸಿಬಂದಿಗಳ ಸಹಿತ ಒಟ್ಟು 205 ಮಂದಿ ಇದ್ದು ಅವರೆಲ್ಲರೂ ತುರ್ತು ಲ್ಯಾಂಡಿಂಗ್ ಹೊರತಾಗಿಯೂ ಸಂಪೂರ್ಣವಾಗಿ ಸುರಕ್ಷಿತರಿದ್ದಾರೆ ಎಂದು ವರದಿಗಳು ತಿಳಿಸಿವೆ.