ಕಲ್ಯಾಣ್: ಓಂ ಶಕ್ತಿ ಮಹಿಳಾ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಕೊಡುವ ಶೈಕ್ಷಣಿಕ ನೆರವನ್ನು ಮಕ್ಕಳು ಕೀಳರಿಮೆ ಇಲ್ಲದೆ ದೇವರ ಪ್ರಸಾದ ಎಂದು ತಿಳಿದು ಸ್ವೀಕರಿಸಬೇಕು. ಮಕ್ಕಳು ಕೇವಲ ಶಿಕ್ಷಣವನ್ನು ಪಡೆದರೆ ಸಾಲದು. ಅದರೊಂದಿಗೆ ಸುಸಂಸ್ಕೃತರಾಗಿ ಬೆಳೆಯ ಬೇಕು. ಮಕ್ಕಳು ಜೀವನದಲ್ಲಿ ಯಶಸ್ಸನ್ನು ಕಂಡು ಉತ್ತಮ ಹುದ್ದೆಯನ್ನು ಅಲಂ ಕರಿಸಿ ಸಂಸ್ಥೆಯ ಋಣ ತೀರಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್ ಇದರ ಸ್ಥಾಪಕಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ ನುಡಿದರು.
ಜು. 15ರಂದು ಕಲ್ಯಾಣ್ ಪಶ್ಚಿಮದ ಸಾಗರ್ ಇಂಟರ್‌ನ್ಯಾಷನಲ್ ಹೊಟೇಲ್ ಸಭಾಂಗಣದಲ್ಲಿ ನಡೆದ ಓಂ ಶಕ್ತಿ ಮಹಿಳಾ ಸಂಸ್ಥೆಯ ಕಲ್ಯಾಣ್ ಇದರ ವಾರ್ಷಿಕ ಶೈಕ್ಷಣಿಕ ದತ್ತು ಸ್ವೀಕಾರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ 5 ವರ್ಷಗಳಿಂದ ಮಕ್ಕಳ ದತ್ತು ಸ್ವೀಕಾರ ಕಾರ್ಯಕ್ರಮ ಮಾಡುತ್ತಿದ್ದೇವೆ. ಯಾವುದೇ ಜಾತಿ, ಮತ, ಭೇದವಿಲ್ಲದೆ ತುಳು-ಕನ್ನಡಿಗರ ಮಹಿಳೆಯರನ್ನೊಳಗೊಂಡ ಈ ಸಂಸ್ಥೆಯು 13 ವರ್ಷಗಳ ಹಿಂದೆ ಸ್ಥಾಪನೆಗೊಂಡು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಇನ್ನಿತರ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದೆ. ಓಂ ಶಕ್ತಿ ಮಹಿಳಾ ಸಂಸ್ಥೆಯು ಕಲ್ಯಾಣ್, ಥಾಣೆ ಪರಿಸರದಲ್ಲಿ ಒಂದು ಆದರ್ಶ ಸಂಸ್ಥೆಯಾಗಿ ಜನಾನುರಾಗಿದೆ. ಶಿಸ್ತುಬದ್ಧ ಮುಂದಾಳತ್ವ, ದಾನಿಗಳ ಸಹಾಯಹಸ್ತ ಹಾಗೂ ಮಹಿಳೆಯರ ಪ್ರೀತಿ ಪೂರ್ವಕ ಸಹಕಾರದಿಂದಲೇ ಮುಂದುವರಿಯು ತ್ತಿರುವ ಈ ಸಂಸ್ಥೆ ಭವಿಷ್ಯದಲ್ಲಿ ಹತ್ತು ಹಲವಾರು ಸಕಾರಾತ್ಮಕ ಯೋಜನೆ ಗಳನ್ನು ಹೊಂದಿಕೊಂಡಿದೆ. ಸಂಸ್ಥೆಯ ವತಿಯಿಂದ ಅಂಬರ್‌ನಾಥ್ ನಿಜಲಿಂಗಪ್ಪ ಕನ್ನಡ ಶಾಲೆ ಮತ್ತು ಕನ್ನಡ ನಗರ ಪಾಲಿಕೆಯ ಶಾಲೆಯ 370 ಮಕ್ಕಳಿಗೆ ಶಾಲಾ ಪರಿಕರಗಳ ವಿತರಣೆ, ಬೋನಾರ್‌ನ ಜಿಲ್ಲಾ ಪರಿಷತ್‌ನ 101 ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಲಾಗಿದೆ. ಆಶ್ರಮವೊಂದರ 45 ಮಕ್ಕಳನ್ನು ದತ್ತು ಸ್ವೀಕರಿಸಿ ಅವರ ಶಾಳೆಯ ಶುಲ್ಕವನ್ನು ತುಂಬಿಸಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಥಾಣೆ ಪ್ರೈಮರಿ ಸ್ಕೂಲ್ ಟೀಚರ್ ಅಸೋಸಿಯೇಶನ್ ಇದರ ಸ್ಥಾಪಕ ವಸಂತ ಪುರೋಹಿತ್ ಅವರು ಮಾತ ನಾಡಿ, ಮಹಿಳೆಯರನ್ನು ಒಗ್ಗೂಡಿಸಿ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳನ್ನು ಮಾಡಿ ಆರ್ಥಿಕವಾಗಿ ಹಿಂದುಳಿದವರ ಕಣ್ಣೀರೊರೆಸುತ್ತಿರುವುದನ್ನು ಕಂಡಾಗ ಆನಂದವಾಗುತ್ತಿದೆ. ಧಾರ್ಮಿಕವಾಗಿ ಕೆಲವೊಂದು ಸುವಿಚಾರಗಳನ್ನು ತಿಳಿಸಿ, ಪ್ರತಿ ವೃತ್ತಿಗೂ ಗೌರವ ಸಲ್ಲಬೇಕು. ಕಾಯಕ ನಿರತರಾಗಿರುವುದೇ ನಿಜ ವಾದ ಧರ್ಮವಾಗಿದೆ ಎಂದು ನುಡಿದರು.
ಗೌರವ ಅತಿಥಿಯಾಗಿ ಆಗಮಿಸಿದ ಸಮಾಜ ಸೇವಕಿ ವನಜಾ ಕರುಣಾಕರ ಅವರು ಮಾತನಾಡಿ, ಈ ಸಂಸ್ಥೆಯ ಸ್ಥಾಪನೆಯಾದಾಗ ಸಂಸ್ಥೆ ಕಟ್ಟುವುದು ಸುಲಭ, ಅದನ್ನು ಬೆಳೆಸಿಕೊಂಡು ಹೋಗಬೇಕು ಎಂದು ತಿಳಿಸಿದ್ದೆ. ಓಂ ಶಕ್ತಿ ಸಂಸ್ಥೆ ಮುಂಬಯಿಯಾದ್ಯಂತ ತುಂಬಾ ಹೆಸರುವಾಸಿಯಾಗಿರವುದು ಎಂದು ಹೇಳಲು ತುಂಬ ಹೆಮ್ಮೆಯಾಗುತ್ತಿದೆ. ಸಮಾಜದ ಬಹುಮುಖ ಕ್ಷೇತ್ರಗಳಲ್ಲಿ ಆಸಕ್ತಿದಾಯಕವಾಗಿ ತೊಡಗಿಸಿ ಕೊಂಡು ಸೇವೆ ಸಲ್ಲಿಸುವ ಕೈಂಕರ್ಯವು ಅವ್ಯಾಹತವಾಗಿ ಈ ಸಂಸ್ಥೆ ಮೂಲಕ ನಡೆಯುತ್ತಿರಲಿ ಎಂದು ನುಡಿದು ಶುಭಹಾರೈಸಿದರು.
ಇನ್ನೋರ್ವ ಅತಿಥಿ ಜಾಸ್ಮಿàನ್ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕಿ ಬೇಬಿ ಸುರೇಂದ್ರ ಶೆಟ್ಟಿ ಅವರು ಮಾತ ನಾಡಿ, ನಮ್ಮದೇ ಮಹಿಳೆಯರ ಕಾರ್ಯವೈಖರಿ ನಿಜವಾಗಿಯೂ ಪ್ರಶಂಸನೀಯ ವಾಗಿದೆ. ಈ ಸಂಸ್ಥೆಗೆ ನಮ್ಮ ಸಹಕಾರ, ಪ್ರೋತ್ಸಾಹ ಸದಾಯಿದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಕೆಜಿಯಿಂದ ಪದವಿಯವರೆಗೆ ಶಿಕ್ಷಣ ಪಡೆಯುತ್ತಿರುವ ಕಲ್ಯಾಣ್ ಪರಿಸರದ 30 ಮಕ್ಕಳನ್ನು ದತ್ತು ಸ್ವೀಕರಿಸಲಾಯಿತು. ಎಸ್‌ಎಸ್‌ಸಿ ಮತ್ತು ಎಚ್‌ಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬಿಕಾಂನಲ್ಲಿ ಶೇ. 91.43 ಅಂಕಗಳನ್ನು ಪಡೆದ ಸ್ವಾತಿ ಶೇಖರ್ ಶೆಟ್ಟಿ ಅವರನ್ನು ಅತಿಥಿಗಳ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.
ಎತೆ ಕೋಶಾಧಿಕಾರಿ ಗ್ರೀಷ್ಮಾ ಪಿ. ಶೆಟ್ಟಿ ಪ್ರಾರ್ಥನೆಗೈದರು. ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಆಶಾವರಿ ಎಸ್. ಹೆಗ್ಡೆ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯದರ್ಶಿ ಶಾಲಿನಿ ಎಸ್. ಶೆಟ್ಟಿ ಮತ್ತು ಕೋಶಾಧಿಕಾರಿ ಸುರೇಖಾ ಎಚ್. ಶೆಟ್ಟಿ ವಿದ್ಯಾರ್ಥಿಗಳು ಮತ್ತು ದಾನಿಗಳ ಯಾದಿಯನ್ನು ಓದಿದರು. ಶಶಿ ಪಿ. ಶೆಟ್ಟಿ, ಸುಚಿತಾ ಜೆ. ಶೆಟ್ಟಿ, ಯಶೋದಾ ಆರ್. ಶೆಟ್ಟಿ, ಜಯಂತಿ ಜಿ. ಹೆಗ್ಡೆ, ಜ್ಯೋತಿ ಎಸ್. ಶೆಟ್ಟಿ, ಜಯಶ್ರೀ ಕೆ. ಶೆಟ್ಟಿ, ಉಷಾ ಎ. ಶೆಟ್ಟಿ, ಯಶೋದಾ ಎಸ್. ಶೆಟ್ಟಿ, ಕುಶಲಾ ಜಿ. ಶೆಟ್ಟಿ, ಹರಿಣಿ ಎಸ್. ಶೆಟ್ಟಿ, ಸುಪ್ರೀತಾ ಎಂ. ಭಂಡಾರಿ, ಪ್ರಕೃತಿ ಎಸ್. ಶೆಟ್ಟಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.