Advertisement

17 ವರ್ಷಗಳ ನಂತರ ಓಂ ಪ್ರಕಾಶ್‌ ಸ್ವಮೇಕ್‌ ಸಿನಿಮಾ

11:16 AM Apr 02, 2018 | Team Udayavani |

“ನಾನು ಸ್ವಮೇಕ್‌ ಕಥೆ ಹೇಳ್ಳೋಕೆ ಹೋದರೆ ಯಾವ ನಿರ್ಮಾಪಕ, ಹೀರೋ ಕೂಡ ಕಥೆ ಕೇಳ್ಳೋಕೆ ರೆಡಿ ಇಲ್ಲ. ಕಾರಣ ಗೊತ್ತಿಲ್ಲ. ಒಂದು ಸಿಡಿ ಕೊಡ್ತಾರೆ ಇದನ್ನ ಮಾಡಿ ಅಂತಾರೆ. ನಾನೇನು ಮಾಡಲಿ…? ಇದು ನಿರ್ದೇಶಕ ಓಂ ಪ್ರಕಾಶ್‌ರಾವ್‌ ಅವರ ಮಾತು. ಸತತ ಹದಿನೇಳು ವರ್ಷಗಳಿಂದಲೂ ರಿಮೇಕ್‌ ಚಿತ್ರಗಳನ್ನೇ ನಿರ್ದೇಶಿಸಿಕೊಂಡು ಬಂದಿರುವ ಓಂ ಅವರಿಗೆ ಸ್ವಮೇಕ್‌ ಮಾಡುವ ಆಸೆ ಇದ್ದರೂ, ಯಾರೂ ಕಥೆ ಕೇಳ್ಳೋಕೆ ಸಿದ್ಧರಿಲ್ಲವಂತೆ.

Advertisement

ಆದರೂ, ಹದಿನೇಳು ವರ್ಷಗಳ ಬಳಿಕ ಸ್ವಮೇಕ್‌ ಚಿತ್ರ ನಿರ್ದೇಶಿಸುತ್ತಿರುವ ಖುಷಿ ಅವರದು. “ಚಂದ್ರಲೇಖ ರಿಟರ್ನ್ಸ್’ ಎಂಬ ಚಿತ್ರವನ್ನು ಈಗಾಗಲೇ ಶೇ.70 ರಷ್ಟು ಮುಗಿಸಿದ್ದಾರೆ ಓಂ. ಅದು ಪಕ್ಕಾ ಸ್ವಮೇಕ್‌ ಕಥೆ. ಅದರಲ್ಲೂ ನಿರ್ಮಾಪಕ ಉಮೇಶ್‌ರೆಡ್ಡಿ ಅವರೊಂದಿಗೆ ಹ್ಯಾಟ್ರಿಕ್‌ ಚಿತ್ರ ಮಾಡುತ್ತಿರುವ ಹೆಮ್ಮೆ. ಓಂ ಪ್ರಕಾಶ್‌ರಾವ್‌ ಅವರಿಗೆ ಸುದೀಪ್‌ ಅವರೇ ರಿಮೇಕ್‌ ಮಾಡೋಕೆ ಕಾರಣವಾದರಂತೆ. ರಿಮೇಕ್‌ ಮಾಡೋದಿಲ್ಲ.

ಅದು ನನ್ನತನಕ್ಕೆ ಒಗ್ಗುವುದಿಲ್ಲ ಅಂತ ಹೇಳಿದರೂ, ಸುದೀಪ್‌ ಕರೆದುಕೊಂಡು ಬಂದು ನನಗೋಸ್ಕರ ನೀವು ರಿಮೇಕ್‌ ಮಾಡಿ ಅಂದರಂತೆ. ತಮಿಳಿನ “ಸೇತು’ವನ್ನು ಇಲ್ಲಿಗೆ “ಹುಚ್ಚ’ ಮಾಡಿದ ನಂತರ ಸ್ವಮೇಕ್‌ ಗೋಜಿಗೆ ಹೋಗಿಲ್ಲ ಓಂ ಪ್ರಕಾಶ್‌ರಾವ್‌. ಅದಕ್ಕೆ ಕಾರಣ ಕೊಡುವ ಅವರು, ಸ್ವಮೇಕ್‌ ಕಥೆ ಹೇಳಿದರೆ, ಯಾರೊಬ್ಬರೂ ಕಥೆ ಕೇಳಲು ತಯಾರೇ ಇಲ್ಲ.

ಹಾಗಾಗಿ ಅವರು ಸ್ವಮೇಕ್‌ ಜೊತೆಗೆ ರೀಮಿಕ್ಸ್‌ ಮಾಡೋಕೂ ಮುಂದಾದರಂತೆ. ಅದೇನೋ ದೇವರ ದಯೆ, ಈಗ “ಚಂದ್ರಲೇಖ ರಿಟರ್ನ್ಸ್’ ಚಿತ್ರ ಪಕ್ಕ ಸ್ವಮೇಕ್‌ ಆಗಿ ರೆಡಿಯಾಗುತ್ತಿದೆ ಎಂಬ ಖುಷಿ ಅವರದು. ಎಲ್ಲವೂ ಸರಿ, ದರ್ಶನ್‌, ಸುದೀಪ್‌ ಅವರಿಗೆ ಹಿಟ್‌ ಸಿನಿಮಾ ಮಾಡಿದ ಓಂ, ಈಗ ಯಾಕೆ ಸಿನಿಮಾ ಮಾಡಲು ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ, ಎಲ್ಲದ್ದಕ್ಕೂ ಕಾಲ ಕೂಡಿಬರಬೇಕು ಎನ್ನುತ್ತಾರೆ. ಹಿಟ್‌ ಸಿನಿಮಾ ಆಯ್ತು.

ಹಾಗಂತ ಅವರು ಕರೆದು, ಸಿನಿಮಾ ಮಾಡೋಣ ಅಂತ ಹೇಳಬೇಕಲ್ವಾ? ಎಲ್ಲರಿಗೂ ಅನಿಸಿದ್ದು ಅವರಿಗೂ ಅನಿಸಬೇಕಲ್ವಾ? ಎಂಬ ಪ್ರಶ್ನೆ ಇಡುತ್ತಾರೆ. ಈಗ ಅವರಿಗೆ ನಮ್ಮ ಮ್ಯಾನರಿಸಂ ಮ್ಯಾಚ್‌ ಆಗುತ್ತೋ ಇಲ್ಲವೋ ಗೊತ್ತಿಲ್ಲ. ನನ್ನ ಉದ್ದೇಶವಿಷ್ಟೇ. ನಾನೊಬ್ಬ ನಿರ್ದೇಶಕ. ಕನ್ನಡ ಚಿತ್ರರಂಗಕ್ಕೆ ನಾನು ಒಂದಷ್ಟು ಒಳ್ಳೆಯ ಚಿತ್ರ ಕೊಡಬೇಕಿತ್ತು. ಕೊಟ್ಟಿದ್ದೇನೆ. ಒಳ್ಳೆಯ ಚಿತ್ರ ಕೊಡುವಂತಹ ಯೋಗ್ಯತೆ ನನಗೆ ಸಿಕ್ಕಿದೆ.

Advertisement

ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡದ್ದೇನೋ ಇರಬಹುದೇನೋ ಯಾರಿಗೆ ಗೊತ್ತು. ನಾನು ಯಾವತ್ತಿಗೂ ಸ್ಟಾರ್‌ ಮೇಕರ್‌ ಆಗೋಕೆ ಇಷ್ಟಪಡ್ತೀನಿ. ಅವಕಾಶ ಬಂದಂತೆ ಕೆಲಸ ಮಾಡುತ್ತ ಹೋಗುವುದು ನನ್ನ ಜಾಯಮಾನ ಎಂಬುದು ಓಂ ಮಾತು. “ಹುಚ್ಚ 2′ ನನ್ನ ಕನಸಿನ ಚಿತ್ರ. ಇದು ತಡವಾಗಿದೆ. ಅದಕ್ಕೆ ನಾನೇ ಕಾರಣ. ಈ ಹಿಂದೆ ನಿರ್ಮಾಪಕರ ಜತೆ ಮಾಡಿದ “ಕಟ್ಟೆ’ ಪ್ಲಾಫ್ ಆಯ್ತು.

ಮುಂದೆ ಜತೆಗೂಡಿ ಈ ಚಿತ್ರ ಮಾಡಲು ಹೊರಟಾಗ, ನಿಧಾನವಾದರೂ ನೀಟ್‌ ಆಗಿ ಮಾಡಬೇಕು ಅಂತ ಕೆಲಸ ಮಾಡಿದ್ದೇವೆ. ಒಳ್ಳೆಯ ಶ್ರಮಕ್ಕೆ ಎಂದಿದ್ದರೂ ಫ‌ಲ ಸಿಗುತ್ತೆ ಎಂದು ನಂಬಿಕೊಂಡು ಬಂದವನು ನಾನು. “ಹುಚ್ಚ 2′ ನನ್ನ ಹಿಂದಿನ ದಿನಗಳಿಗೆ ಕರೆದೊಯ್ಯುವುದು ನಿಜ ಎಂಬ ಗ್ಯಾರಂಟಿ ಕೊಡುತ್ತಾರೆ ಓಂ ಪ್ರಕಾಶ್‌ರಾವ್‌. ಸದ್ಯಕ್ಕೆ ಓಂ ಪ್ರಕಾಶ್‌ರಾವ್‌ ಅವರು 50 ನೇ ಚಿತ್ರದ ಜಪದಲ್ಲಿದ್ದಾರೆ.

ಓಂ ಅವರ  50 ನೇ ಚಿತ್ರ “ತ್ರಿವಿಕ್ರಮ’ದಲ್ಲಿ ಶಿವರಾಜ್‌ಕುಮಾರ ನಟಿಸಲಿದ್ದಾರೆ. ಐದು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ. ಈಗ 47 ನೇ ಚಿತ್ರವಾಗಿ “ಚಂದ್ರಲೇಖ’ , 48 ನೇ ಚಿತ್ರದ ಮಾತುಕತೆ ನಡೆಯುತ್ತಿದೆ. 49 ನೇ ಚಿತ್ರ “ಅಯ್ಯ 2′ ಆಗಲಿದೆ. ಸಾಯಿಕುಮಾರ್‌ ಅವರನ್ನು “ಅಯ್ಯ 2′ ಚಿತ್ರಕ್ಕೆ ಆಯ್ಕೆ ಮಾಡುವ ಯೋಚನೆಯೂ ಅವರಿಗಿದೆ.

Advertisement

Udayavani is now on Telegram. Click here to join our channel and stay updated with the latest news.

Next