ನವದೆಹಲಿ: ಶಿಕ್ಷಕರ ನೇಮಕಾತಿ ಹಗರಣದಲ್ಲಿ ಹತ್ತು ವರ್ಷಗಳ ಕಾಲ ಜೈಲುಶಿಕ್ಷೆಗೊಳಗಾಗಿದ್ದ ಹರ್ಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಅವರನ್ನು ಜೈಲು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಶುಕ್ರವಾರ(ಜುಲೈ 02) ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ:ಚಿಕ್ಕಮಗಳೂರು ಡಿಸಿ ಕಚೇರಿ ಎದುರು ಮಾಜಿ ಶಾಸಕ ವೈ.ಎಸ್.ವಿ ದತ್ತ ಮೌನ ಪ್ರತಿಭಟನೆ
ಪ್ರಕರಣದಲ್ಲಿ ಪೆರೋಲ್ ಮೇಲೆ ಹೊರಗಿದ್ದ 86ವರ್ಷದ ಚೌಟಾಲಾ ಶುಕ್ರವಾರ ತಿಹಾರ್ ಜೈಲು ಅಧಿಕಾರಿಗಳನ್ನು ಭೇಟಿಯಾಗಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಬಿಡುಗಡೆಗೊಳಿಸಲಾಯಿತು ಎಂದು ತಿಹಾರ್ ಜೈಲಿನ ಅಧಿಕಾರಿ ತಿಳಿಸಿದ್ದಾರೆ.
ಅಗತ್ಯ ಕಾನೂನು ಪ್ರಕ್ರಿಯೆ ಮುಗಿದ ನಂತರ ಚೌಟಾಲಾ ಅವರನ್ನು ತಿಹಾರ್ ಜೈಲಿನಿಂದ ಬಿಡುಗಡೆ ಮಾಡಿದ ನಂತರ ಅವರ ಬೆಂಬಲಿಗರು ಅವರನ್ನು ಸ್ವಾಗತಿಸಿರುವುದಾಗಿ ತಿಹಾರ್ ಕಾರಾಗೃಹದ ಡೈರೆಕ್ಟರ್ ಜನರಲ್ ಸಂದೀಪ್ ಗೋಯೆಲ್ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
ಕೋವಿಡ್ ಸೋಂಕು ಪ್ರಕರಣದ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ಕಳೆದ ತಿಂಗಳು ಹತ್ತು ವರ್ಷಗಳ ಜೈಲುಶಿಕ್ಷೆಯಲ್ಲಿ ಒಂಬತ್ತು ವರ್ಷ ಆರು ತಿಂಗಳ ಕಾಲ ಜೈಲುವಾಸ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಉಳಿದ ಆರು ತಿಂಗಳ ಕಾಲ ವಿಶೇಷ ವಿನಾಯ್ತಿ ನೀಡಿ ಜೈಲುಶಿಕ್ಷೆಯನ್ನು ಕಡಿತಗೊಳಿಸಿ ನಿರ್ಣಯ ಕೈಗೊಂಡು ತಿಹಾರ್ ಜೈಲಿಗೆ ಆದೇಶ ರವಾನಿಸಿತ್ತು.
ಶಿಕ್ಷಕರ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಒಪಿ ಚೌಟಾಲಾ ಅವರು 2013ರಿಂದ ಜೈಲುಶಿಕ್ಷೆ ಅನುಭವಿಸುತ್ತಿದ್ದರು. ಕೋವಿಡ್ ಸೋಂಕು ಹಿನ್ನೆಲೆಯಲ್ಲಿ 2020ರ ಮಾರ್ಚ್ 26ರಿಂದ ಚೌಟಾಲಾ ಪೆರೋಲ್ ನಲ್ಲಿದ್ದು, 2021ರ ಫೆಬ್ರುವರಿ 21ರಂದು ಜೈಲಿಗೆ ಶರಣಾಗಲು ಸೂಚಿಸಲಾಗಿತ್ತು. ಏತನ್ಮಧ್ಯೆ ದೆಹಲಿ ಹೈಕೋರ್ಟ್ ಪೆರೋಲ್ ಅನ್ನು ವಿಸ್ತರಿಸಿ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಉಳಿದ ಶಿಕ್ಷೆಯನ್ನು ವಿನಾಯ್ತಿ ಮಾಡಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.