Advertisement

ನಿಷ್ಪಕ್ಷದ ಅಭಯದಡಿ ಒಮ್ಮತದ ಆಯ್ಕೆ

01:03 AM Jun 20, 2019 | mahesh |

ನವದೆಹಲಿ: ಎನ್‌ಡಿಎ ಸೂಚಿಸಿರುವ ಓಂ ಬಿರ್ಲಾ ಅವರು ಲೋಕಸಭೆಯ ಸ್ಪೀಕರ್‌ ಆಗಿ ಬುಧವಾರ ಸರ್ವಾನುಮತದಿಂದ ಆಯ್ಕೆಯಾಗಿದ್ದು, ಸಂಸತ್‌ನ ಸುಗಮ ಕಲಾಪಕ್ಕೆ ಹೃದಯಪೂರ್ವಕ ಬೆಂಬಲ ನೀಡುವುದಾಗಿ ಅವರಿಗೆ ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರು ಅಭಯ ನೀಡಿದ್ದಾರೆ.

Advertisement

ಯುಪಿಎ ಮಿತ್ರಪಕ್ಷಗಳು ಕೂಡ ಎನ್‌ಡಿಎ ಅಭ್ಯರ್ಥಿಯಾದ ಓಂ ಬಿರ್ಲಾ ಅವರಿಗೆ ಬೆಂಬಲ ಘೋಷಿಸಿದ ಪರಿಣಾಮ, ಬಿರ್ಲಾ ಅವರು ಅವಿರೋಧವಾಗಿ ಸ್ಪೀಕರ್‌ ಹುದ್ದೆಗೇರಿದರು. ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ಡಿಎಂಕೆ ನಾಯಕ ಟಿ.ಆರ್‌.ಬಾಲು, ಟಿಎಂಸಿ ನಾಯಕರಾದ ಸುದೀಪ್‌ ಬಂಡೋಪಾಧ್ಯಾಯ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಕೂಡ ಬಿರ್ಲಾ ಅವರಿಗೆ ಬೆಂಬಲವಾಗಿ ನಿಂತಿದ್ದು, ಲೋಕಸಭೆಯ ಸ್ಪೀಕರ್‌ ಆಗಿ ನಿಷ್ಪಕ್ಷವಾಗಿ ನಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ನೂತನ ಸ್ಪೀಕರ್‌ ಬಿರ್ಲಾ ಕೂಡ ಸಮ್ಮತಿಸಿದ್ದು, ಎಲ್ಲ ಸದಸ್ಯರ ಹಿತಾಸಕ್ತಿಯನ್ನೂ ಕಾಪಾಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಮಿತಿ ಮೀರಿದರೆ ಸುಮ್ಮನಿರಬೇಡಿ: ಸ್ಪೀಕರ್‌ ಆಗಿ ನೇಮಕಗೊಂಡ ಓಂ ಬಿರ್ಲಾ ಅವರನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ, ‘ಸದನವನ್ನು ಮುನ್ನಡೆಸುವಲ್ಲಿ ನಿಮಗೆ ಸಂಪೂರ್ಣ ಬೆಂಬಲ ನೀಡುವುದಾಗಿ ನಾನು ಈ ಮೂಲಕ ಸರ್ಕಾರದ ಪರವಾಗಿ ಘೋಷಿಸುತ್ತೇನೆ. ಜತೆಗೆ, ಆಡಳಿತ ಪಕ್ಷದ ಸದಸ್ಯರು ತಪ್ಪಾಗಿ ನಡೆದುಕೊಂಡರೆ, ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಿ’ ಎಂಬ ಸಲಹೆಯನ್ನೂ ನೀಡಿದರು. ಇದೇ ವೇಳೆ, ಓಂ ಬಿರ್ಲಾ ಅವರ ಹಿನ್ನೆಲೆಯನ್ನು ಪ್ರಸ್ತಾಪಿಸಿದ ಮೋದಿ, ರಾಜಸ್ಥಾನದ ಕೋಟಾದಲ್ಲಿ ನಡೆಸಿದ ಸಾಮಾಜಿಕ ಕಾರ್ಯಗಳಿಂದ ಹಿಡಿದು ಗುಜರಾತ್‌ನ ಭೂಕಂಪ, ಉತ್ತರಾಖಂಡದ ಪ್ರವಾಹದಂಥ ಸಂದರ್ಭದಲ್ಲಿ ಬಿರ್ಲಾ ಅವರು ಕೈಗೊಂಡ ಕಾರ್ಯಗಳನ್ನು ಸ್ಮರಿಸಿ, ಶ್ಲಾಘಿಸಿದರು. ಜತೆಗೆ, ರಾಜಸ್ಥಾನದ ಕೋಟಾ(ಓಂ ಬಿರ್ಲಾ ಅವರ ಕ್ಷೇತ್ರ) ಈಗ ‘ಶಿಕ್ಷಣ ಕಾಶಿ’ಯಾಗಿ ಮಾರ್ಪಟ್ಟಿದೆ. ಇದಕ್ಕೆ ಬಿರ್ಲಾರ ನಾಯಕತ್ವವೇ ಕಾರಣ ಎಂದೂ ಮೋದಿ ಹೇಳಿದರು.

ಪ್ರತಿಪಕ್ಷಗಳಿಗೆ ಅವಕಾಶ ಕೊಡಿ: ಸದನದ ಅಧ್ಯಕ್ಷರಾದವರು ದೇಶವನ್ನು ಮತ್ತು ದೇಶದ ಸ್ವಾತಂತ್ರ್ಯವನ್ನು ಪ್ರತಿನಿಧಿಸುವವರಾಗಿರುತ್ತಾರೆ ಎಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಹೇಳುತ್ತಿದ್ದರು. ನಾವೀಗ ನಿಮಗೆ(ಬಿರ್ಲಾ) ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ. ಪ್ರತಿಪಕ್ಷಗಳಿಗೆ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳನ್ನು ಎತ್ತಲು ಸಾಕಷ್ಟು ಸಮಯಾವಕಾಶ ನೀಡಿ ಎಂದು ನಾವು ಕೋರುತ್ತೇವೆ ಎಂದು ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಕೋರಿಕೊಂಡರು. ಪ್ರಾದೇಶಿಕ ಪಕ್ಷಗಳಿಗೂ ಚರ್ಚೆಗೆ ಸಾಕಷ್ಟು ಕಾಲಾವಕಾಶ ನೀಡಬೇಕು ಎಂದು ಅಕಾಲಿದಳದ ನಾಯಕ ಸುಖ್‌ಬೀರ್‌ ಸಿಂಗ್‌ ಬಾದಲ್ ಕೇಳಿಕೊಂಡಾಗ, ಅದಕ್ಕೆ ಅಪ್ನಾ ದಳ್‌, ಎಲ್ಜೆಪಿ, ಟಿಆರ್‌ಎಸ್‌, ಬಿಎಸ್‌ಪಿ ನಾಯಕರೂ ಧ್ವನಿಗೂಡಿಸಿದರು.

ಎಲ್ಲ ಸದಸ್ಯರ ಹಿತಾಸಕ್ತಿ ಕಾಪಾಡುವೆ: ಯಾವುದೇ ಕಾರಣಕ್ಕೂ ಪಕ್ಷಪಾತ ಮಾಡದೇ, ಲೋಕಸಭೆಯ ಎಲ್ಲ ಸದಸ್ಯರ ಹಿತಾಸಕ್ತಿಯನ್ನೂ ಕಾಪಾಡುವೆ ಎಂದು ನೂತನ ಸ್ಪೀಕರ್‌ ಓಂ ಬಿರ್ಲಾ ಭರವಸೆ ನೀಡಿದ್ದಾರೆ. ಎಲ್ಲ ನೀತಿ-ನಿಯಮಗಳಿಗೆ ಅನುಸಾರವಾಗಿ ಸದನವನ್ನು ಮುನ್ನಡೆಸುತ್ತೇನೆ ಮತ್ತು ಪಕ್ಷಗಳ ಸಂಖ್ಯಾಬಲವನ್ನು ಪರಿಗಣಿಸದೇ ಎಲ್ಲ ಸದಸ್ಯರಿಗೂ ಕಿವಿಯಾಗುತ್ತೇನೆ ಎಂದಿದ್ದಾರೆ ಬಿರ್ಲಾ.

Advertisement

ಸದಸ್ಯತ್ವ ಕಳೆದುಕೊಳ್ಳುವ ಭೀತಿಯಲ್ಲಿ ಡಿಯೋಲ್
ನವದೆಹಲಿ:
ಬಿಜೆಪಿ ಟಿಕೆಟ್‌ನಲ್ಲಿ ಪಂಜಾಬ್‌ನ ಗುರುದಾಸ್ಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ, ಗೆದ್ದಿರುವ ಬಾಲಿವುಡ್‌ ನಟ ಸನ್ನಿ ಡಿಯೋಲ್ಗೆ ಈಗ ಸಂಸದ ಸ್ಥಾನವನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಚುನಾವಣಾ ಆಯೋಗವು ನಿಗದಿಪಡಿಸಿದ್ದ 70 ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೊತ್ತವನ್ನು ಚುನಾವಣೆ ವೇಳೆ ಪ್ರಚಾರಕ್ಕಾಗಿ ಬಳಸಿರುವ ಆರೋಪ ಸನ್ನಿ ಮೇಲಿದೆ. ಸನ್ನಿ ಡಿಯೋಲ್ ಅವರು ಪ್ರಚಾರಕ್ಕಾಗಿ ಒಟ್ಟು 86 ಲಕ್ಷ ರೂ.ಗಳನ್ನು ವೆಚ್ಚ ಮಾಡಿದ್ದರು ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಸನ್ನಿಗೆ ಚುನಾವಣಾ ಆಯೋಗವು ಬುಧವಾರ ನೋಟಿಸ್‌ ಜಾರಿ ಮಾಡಿದ್ದು, ವಿವರಣೆ ನೀಡುವಂತೆ ಸೂಚಿಸಿದೆ. ಒಂದು ವೇಳೆ ಆಯೋಗವು ಈ ತಪ್ಪಿಗಾಗಿ ಸನ್ನಿ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇ ಆದಲ್ಲಿ, ಸನ್ನಿ ಡಿಲೋಲ್ ತಮ್ಮ ಸಂಸತ್‌ ಸದಸ್ಯತ್ವವನ್ನೇ ಕಳೆದುಕೊಳ್ಳಲಿದ್ದಾರೆ. ಆಯೋಗವು ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ವೆಚ್ಚ ಮಾಡಿದಂಥ ಅಭ್ಯರ್ಥಿಗಳ ಸಂಸತ್‌ ಸದಸ್ಯತ್ವವನ್ನು ರದ್ದು ಮಾಡಿ, ಅವರನ್ನು ರನ್ನರ್‌ ಅಪ್‌ ಎಂದು ಘೋಷಿಸುವ ಅಧಿಕಾರ ಆಯೋಗಕ್ಕಿದೆ.

ಸುಷ್ಮಾ, ಸುಮಿತ್ರಾ ಇನಿಂಗ್ಸ್‌ ಅಂತ್ಯ
ವಿದೇಶಾಂಗ ಇಲಾಖೆ ಮಾಜಿ ಸಚಿವೆ ಸುಷ್ಮಾ ಸ್ವರಾಜ್‌ ಹಾಗೂ ಲೋಕಸಭೆ ಮಾಜಿ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ ಎಂಬ ವದಂತಿಗೆ ತೆರೆ ಬಿದ್ದಿದೆ. ಸುಮಿತ್ರಾ ಅವರಿಗೆ ಈಗಾಗಲೇ ‘ಮಾಜಿ ಸಂಸದೆ ಗುರುತಿನ ಚೀಟಿ’ ರವಾನಿಸಲಾಗಿದ್ದು, ಸುಷ್ಮಾ ಅವರೂ ಇದೇ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. 16ನೇ ಲೋಕಸಭೆಯಲ್ಲಿ ಸುಷ್ಮಾ ಮಧ್ಯಪ್ರದೇಶದ ವಿದಿಶಾವನ್ನು, ಸುಮಿತ್ರಾ ಮಧ್ಯಪ್ರದೇಶದ ಇಂದೋರ್‌ ಅನ್ನು ಪ್ರತಿನಿಧಿಸಿದ್ದರು.

ನಗೆ ಉಕ್ಕಿಸಿದ ರಾಮ್‌ದಾಸ್‌ ಅಠಾವಳೆ

ಓಂ ಬಿರ್ಲಾ ನೇಮಕ ಸ್ವಾಗತಿಸಿ ಮಾತನಾಡಿದ ರಾಜ್ಯಸಭೆ ಸದಸ್ಯ ರಾಮ್‌ದಾಸ್‌ ಅಠಾವಳೆ ಸದನದಲ್ಲಿ ನಗೆ ಬುಗ್ಗೆ ಉಕ್ಕಿಸಿದರು. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ 49ನೇ ಜನ್ಮದಿನದ ಶುಭಾಶಯ ಹೇಳಿದ ಅವರು, ‘ರಾಹುಲ್ಜೀ, ನಿಮಗೆ ಇಲ್ಲೊಂದು ಕುರ್ಚಿ ಸಿಕ್ಕಿರುವುದಕ್ಕೆ, ನಾನು ಅಭಿನಂದಿಸುತ್ತೇನೆ’ ಎನ್ನುವ ಮೂಲಕ ಅಮೇಠಿಯಲ್ಲಿ ಸೋತು, ವಯನಾಡ್‌ನ‌ಲ್ಲಿ ಜಯ ಸಾಧಿಸಿದ ರಾಹುಲ್ರ ಕಾಲೆಳೆದರು. ಇಷ್ಟಕ್ಕೇ ನಿಲ್ಲಿಸದ ಅಠಾವಳೆ, ‘ಚುನಾವಣೆಗೆ ಮುನ್ನ ನಮ್ಮ ಕಡೆಗೆ ಬನ್ನಿ ಎಂದು ಕಾಂಗ್ರೆಸ್‌ ನನ್ನನ್ನು ಕೋರಿಕೊಂಡಿತ್ತು. ಆದರೆ, ನಾನು ಎನ್‌ಡಿಎಯಲ್ಲೇ ಉಳಿದೆ. ಏಕೆಂದರೆ, ಗಾಳಿ ಯಾವ ಕಡೆ ಬೀಸುತ್ತಿತ್ತು ಎಂಬುದು ನನಗೆ ಗೊತ್ತಿತ್ತು. ಈಗ ನಮ್ಮ ಸರ್ಕಾರ 5 ವರ್ಷ ಮಾತ್ರವಲ್ಲ, ಮತ್ತೂ 10 ವರ್ಷ ಆಡಳಿತ ನಡೆಸಲಿದೆ. ನೀವು ಆಡಳಿತಪಕ್ಷದ ಬದಿಗೆ ಅಷ್ಟು ಸುಲಭವಾಗಿ ಬರಲು ನಾವು ಬಿಡುವುದಿಲ್ಲ’ ಎಂದು ಹೇಳುತ್ತಿದ್ದಂತೆ, ರಾಹುಲ್- ಸೋನಿಯಾ, ಪ್ರಧಾನಿ ಮೋದಿ ಸೇರಿದಂತೆ ಸದಸ್ಯರೆಲ್ಲ ನಗಲಾರಂಭಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next