Advertisement

ಒಲಿಂಪಿಕ್ಸ್ ಮುಂದೂಡಿಕೆಯಾಗಿದ್ದು ಈ ಕ್ರೀಡಾಳುಗಳಿಗೆ ವರವಾಗಿದೆ !

04:09 PM Apr 15, 2020 | keerthan |

ಹೊಸದಿಲ್ಲಿ: ಈ ವರ್ಷ ಜು.24ರಿಂದ ಆ.9ರವರೆಗೆ ಜಪಾನ್‌ನ ಟೋಕ್ಯೋದಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್‌ ಮುಂದಿನ ವರ್ಷ ಜುಲೈಗೆ ಮುಂದೂಡಿಕೆಯಾಗಿದೆ. ಕೋವಿಡ್-19 ವೈರಾಣು ಜಗತ್ತಿನಲ್ಲೆಲ್ಲ ಹಬ್ಬಿದ್ದರಿಂದ ಈ ಕ್ರಮ ಅನಿವಾರ್ಯವಾಯಿತು. ಇದೇ ಹೊತ್ತಿನಲ್ಲಿ ಹಲವು ಅಥ್ಲೀಟ್‌ಗಳಿಗೆ ಇದೇ ವರ ! ಅದು ಹೇಗೆ ಅಂತೀರಾ? ಈ ವರ್ಷ ಜುಲೈ ಆಸುಪಾಸಲ್ಲಿ ಉದ್ದೀಪನ ಸೇವನೆ ನಿಷೇಧದಿಂದ ಬಿಡುಗಡೆಯಾಗುವ ಹಲವರಿಗೆ ಮತ್ತೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಸಾಧ್ಯವಾಗಲಿದೆ.

Advertisement

ಮುಂದಿನ ವರ್ಷ ಜು.23ರೊಳಗೆ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸಲು ಅವರಿಗೆ ಬೇಕಾದಷ್ಟು ಸಮಯ ಸಿಗಲಿದೆ! ಇದು ಅನ್ಯಾಯ ಎಂದು ಹಲವರು ಬೇಸರಿಸಿದ್ದಾರೆ.

ಉದಾಹರಣೆಗೆ ಟರ್ಕಿಯ ಓಟಗಾರ್ತಿ ಗರ್ಮೆ ಬುಲುತ್‌. ಆಕೆ 2012ರ ಲಂಡನ್‌ ಒಲಿಂಪಿಕ್ಸ್‌ ನಲ್ಲಿ 1500 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ನಂತರ ಆಕೆ ಉದ್ದೀಪನ ಸೇವಿಸಿದ್ದು ಸಾಬೀತಾಗಿದ್ದರಿಂದ ಪದಕ ಕಳೆದುಕೊಂಡಿದ್ದರು. ಸುದೀರ್ಘ‌ ವಿಚಾರಣೆ ನಡೆದು 2016ರಲ್ಲಿ ಆಕೆಗೆ ನಿಷೇಧ ಹೇರಲಾಗಿತ್ತು. ಈ ವರ್ಷ ಮೇ 29ಕ್ಕೆ ಆಕೆಯ ನಿಷೇಧ ಮುಗಿಯುತ್ತದೆ. ಒಲಿಂಪಿಕ್ಸ್ ನಿಗದಿತವಾಗಿ ಇದೇ ವರ್ಷ ಜುಲೈನಲ್ಲಿ ನಡೆದಿದ್ದರೆ ಗರ್ಮೆ ಸ್ಪರ್ಧಿಸುವ ಸಾಧ್ಯತೆಯೇ ಇರಲಿಲ್ಲ. ಇದೀಗ ಆಕೆಗೆ ಒಂದು ವರ್ಷ ಸಮಯ ದಕ್ಕಿದೆ.

ಹೀಗೆ ಉದ್ದೀಪನದಿಂದ ನಿಷೇಧಿತರಾಗಿರುವ 200 ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ಅಥ್ಲೀಟ್‌ಗಳ ಪೈಕಿ 40 ಮಂದಿಗಂತೂ ಸ್ಪರ್ಧಿಸುವ ಅವಕಾಶ ಲಭ್ಯವಾಗಲಿದೆ. ಇನ್ನಿತರ ಕ್ರೀಡೆಗಳಲ್ಲಿ ಯಾರ್ಯಾರಿಗೆ ಅವಕಾಶ ಸಿಗುತ್ತದೆ ಎಂದು ಕಾದು ನೋಡಬೇಕು

ಹಲವರ ವಿರೋಧ
ವಾಸ್ತವವಾಗಿ ಉದ್ದೀಪನ ಸೇವನೆಯಿಂದ ನಿಷೇಧಕ್ಕೊಳಗಾದ ಬಹುತೇಕರಿಗೆ ಒಲಿಂಪಿಕ್ಸ್‌ ನಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ನಿಷೇಧದ ದಿನಾಂಕವೇ ಹಾಗಿರುತ್ತದೆ. ಇದೀಗ ಅದೃಷ್ಟವಶಾತ್‌ ಅವರಿಗೆ ಅಂತಹ ಅವಕಾಶ ಲಭ್ಯವಾಗಿದೆ. ಇದು ವಂಚನೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐರ್ಲೆಂಡ್‌ನ‌ ವೇಗದ ನಡಿಗೆ ಸ್ಪರ್ಧಿ ಬ್ರ್ಯಾಂಡನ್‌ ವಾಯ್ಸ ಬಹಿರಂಗವಾಗಿಯೇ ಈ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ. ಲೆಕ್ಕಾಚಾರದ ಪ್ರಕಾರ ಅವರಿಗೆಲ್ಲ ಒಲಿಂಪಿಕ್ಸ್‌ ಅವಕಾಶ ತಪ್ಪಿಹೋಗಬೇಕು. ಈಗ ಹಾಗಾಗುತ್ತಿಲ್ಲ, ಹಾಗಾದರೆ ನಿಷೇಧಕ್ಕೆ ಅರ್ಥವೇನು? ಒಂದು ವೇಳೆ ಯಾರೋ ಅನಾಮಿಕ ವ್ಯಕ್ತಿ ಬಂದು ಈಗ ನನ್ನ ಅವಕಾಶ ತಪ್ಪಿಸಿದರೆ ನಾನೇನು ಮಾಡಬೇಕು ಎಂದು ವಾಯ್ಸ ಪ್ರಶ್ನಿಸಿದ್ದಾರೆ. ಅವರಿಗೆ ಹಲವರು ಬೆಂಬಲ ನೀಡಿದ್ದಾರೆ. ಹಾಗಂತ ವಾಯ್ಸ ದೂರನ್ನುದಾಖಲಿಸಲು ಹೋಗಿಲ್ಲ.

Advertisement

ನರಸಿಂಗ್‌ಗೆ ಅವಕಾಶ?
ಭಾರತದ ಖ್ಯಾತ ಕುಸ್ತಿಪಟು ನರಸಿಂಗ್‌ ಯಾದವ್‌ 2016ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಕಡೆಯಕ್ಷಣದಲ್ಲಿ ಅವರು ಉದ್ದೀಪನ ಸೇವನೆ ಪ್ರಕರಣಕ್ಕೆ ಸಿಲುಕಿ ನಿಷೇಧಗೊಂಡರು. ವಸ್ತುಸ್ಥಿತಿಯಲ್ಲಿ ಅವರು ಉದ್ದೀಪನ ಸೇವಿಸಿಲ್ಲ, ಎದುರಾಳಿಯೊಬ್ಬರು ತಮಗೆ ಅವಕಾಶ ಸಿಕ್ಕಬೇಕು ಎಂಬ ಉದ್ದೇಶದಿಂದ ಹೀಗೆ ಮಾಡಿದ್ದಾರೆಂದು ಸ್ವತಃ ನಾಡಾ (ಭಾರತ ಉದ್ದೀಪನ ನಿಗ್ರಹ ಸಂಸ್ಥೆ) ಹೇಳಿತು. ಆದರೆ ವಾಡಾ ಅದನ್ನು ಪುರಸ್ಕರಿಸಲಿಲ್ಲ. ಅವರ ಮೇಲಿನ ನಿಷೇಧ ಜುಲೈಗೆ ಮುಕ್ತಾಯಗೊಳ್ಳಲಿದೆ. ನರಸಿಂಗ್‌ 74 ಕೆಜಿ ವಿಭಾಗದ ಸ್ಪರ್ಧಿಯಾಗಿದ್ದಾರೆ. ಅವರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುತ್ತಾ ಕಾದು ನೋಡಬೇಕು! ಈಗಾಗಲೇ ಜಿತೇಂದರ್‌ ಕುಮಾರ್‌ 74 ಕೆಜಿ ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದಾರೆ. ಆದ್ದರಿಂದ ಜಿತೇಂದರ್‌ರನ್ನು ಮೀರಿ, ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದು ನರಸಿಂಗ್‌ಗೆ ಅಸಾಧ್ಯವೆಂದೇ ಹೇಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next