ನವದೆಹಲಿ: ಒಲಂಪಿಕ್ಸ್ ಕಂಚಿನ ಪದಕ ವಿಜೇತ ಖ್ಯಾತ ಕುಸ್ತಿಪಟು ಯೋಗೇಶ್ವರ್ ದತ್ ಹಾಗೂ ಭಾರತೀಯ ಹಾಕಿ ತಂಡದ ಮಾಜೀ ಕಪ್ತಾನ ಸಂದೀಪ್ ಸಿಂಗ್ ಅವರು ಗುರುವಾರದಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇವರಿಬ್ಬರನ್ನು ಹರ್ಯಾಣದ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಸುಭಾಶ್ ಬರಾಲ ಅವರು ಪಕ್ಷಕ್ಕೆ ಬರಮಾಡಿಕೊಂಡರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನಪರ ಕೆಲಸಗಳಿಂದ ಪ್ರಭಾವಿತನಾಗಿ ತಾನು ಬಿಜೆಪಿಗೆ ಸೇರಲು ನಿರ್ಧರಿಸಿದೆ ಎಂದು ಯೋಗೇಶ್ವರ್ ದತ್ ಅವರು ಬಳಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ನಾನು ಜನರ ಸೇವೆಯನ್ನು ಮಾಡಲು ಉದ್ದೇಶಿಸಿದ್ದೇನೆ. ಇದಕ್ಕೆ ನನಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಸ್ಪೂರ್ತಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ನಾನು ಅವರ ಕೆಲಸಗಳನ್ನು ನೋಡುತ್ತಿದ್ದೇನೆ ಮತ್ತು ಸಮಾಜಕ್ಕೆ ಒಳ್ಳೆಯದನ್ನು ಮಾಡಲು ನಾವೆಲ್ಲರೂ ಮುಂದೆ ಬರಬೇಕಾಗಿದೆ ಇದರಲ್ಲಿ ಕ್ರೀಡಾಪಟುಗಳೂ ಕೈಜೋಡಿಸಬೇಕು’ ಎಂದು ದತ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ತಿಳಿಸಿದರು.
ಅಕ್ಟೋಬರ್ ತಿಂಗಳಿನಲ್ಲಿ ಹರ್ಯಾಣ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಈ ಚುನಾವಣೆಯಲ್ಲಿ ಯೋಗೇಶ್ವರ್ ದತ್ ಮತ್ತು ಸಂದೀಪ್ ಸಿಂಗ್ ಅವರು ಜಿಜೆಪಿ ಟಿಕೆಟ್ ಅಡಿಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇದರಲ್ಲಿ ಯೋಗೇಶ್ವರ್ ದತ್ ಅವರು ರಾಜ್ಯದ ಸೋನೇಪತ್ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳು ಬಲವಾಗಿವೆ ಎನ್ನಲಾಗುತ್ತಿದೆ. ಬಿಜೆಪಿಗೆ ಸೇರ್ಪಡೆಗೊಂಡ ಹಿನ್ನಲೆಯಲ್ಲಿ ಯೋಗೇಶ್ವರ್ ದತ್ ಅವರು ಹರ್ಯಾಣ ಪೊಲೀಸ್ ಇಲಾಖೆಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಖ್ಯಾತ ಕುಸ್ತಿಪಟು ಆಗಿರುವ ಯೋಗೇಶ್ವರ್ ದತ್ ಅವರು 2014ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು. ಸಂದೀಪ್ ಸಿಂಗ್ ಮತ್ತು ದತ್ ಅವರೊಂದಿಗೆ ಶಿರೋಮಣಿ ಅಕಾಲಿದಳದ ಶಾಸಕ ಬಲ್ಕೌರ್ ಸಿಂಗ್ ಅವರೂ ಸಹ ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.