Advertisement

Olympics; ಹೊರಬಿದ್ದ ಸಾತ್ವಿಕ್-ಚಿರಾಗ್ ಜೋಡಿ: ಹಾಕಿಯಲ್ಲಿ ಬೆಲ್ಜಿಯಂ ವಿರುದ್ಧ ಸೋಲು

11:58 PM Aug 01, 2024 | Team Udayavani |

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾರತ ಗುರುವಾರ ಒಂದು ಕಂಚಿನ ಪದಕ ಗೆದ್ದು ಸಂಭ್ರಮಿಸಿದರೆ ಕೆಲವು ಆಘಾತಕಾರಿ ಸೋಲುಗಳನ್ನು ಅನುಭವಿಸಿತು. ಶೂಟಿಂಗ್ ನಲ್ಲಿ ಸ್ವಪ್ನಿಲ್ ಕುಸಾಲೆ ಕಂಚು ಗೆದ್ದ ಸಂಭ್ರಮದ ಬೆನ್ನಲ್ಲೇ ಸೋಲುಗಳು ಶಾಕ್ ನೀಡಿವೆ.

Advertisement

ಕಮರಿದ ಪದಕದ ಕನಸು
ಬ್ಯಾಡ್ಮಿಂಟನ್ ಪುರುಷರ ಡಬಲ್ಸ್‌ನಲ್ಲಿ ಭಾರತಕ್ಕೆ ಪದಕ ನಿರೀಕ್ಷೆ ಮೂಡಿಸಿದ್ದ ಸಾತ್ವಿಕ್‌ ಸಾಯಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಲೇಷ್ಯಾ ದ ಆರೋನ್ ಚಿಯಾ ಮತ್ತು ವೂಯಿ ಯಿಕ್ ಸೊಹ್ ವಿರುದ್ಧ ಆಘಾತಕಾರಿ ಸೋಲು ಕಂಡಿದ್ದಾರೆ. ಮಲೇಷಿಯನ್ನರಿಂದ ಪುರುಷರ ಡಬಲ್ಸ್‌ನ ಪದಕದ ಭರವಸೆ ಭಗ್ನಗೊಂಡಿದೆ. ಕ್ವಾರ್ಟರ್ ಫೈನಲ್‌ ರೋಚಕ ಪಂದ್ಯದಲ್ಲಿ 21-13, 14-21, 16-21 ರಿಂದ ಸೋತು ಅಗ್ರ ನಾಲ್ಕರ ಸುತ್ತಿನ ಕನಸು ಕೊಚ್ಚಿ ಹೋಯಿತು.

ನಿಖತ್ ಜರೀನ್ ಗೆ ಅನಿರೀಕ್ಷಿತ ಸೋಲು

ಒಲಂಪಿಕ್ ಬಾಕ್ಸಿಂಗ್ ಸ್ಪರ್ಧೆಯ ದೊಡ್ಡ ಆಘಾತ ಎಂಬಂತೆ ಗುರುವಾರ ನಡೆದ ಪಂದ್ಯದಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ ಜರೀನ್ (50 ಕೆಜಿ) ಅವರು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಚೀನಾದ ವು ಯು ವಿರುದ್ಧ 0-5 ಅಂತರದಿಂದ ಆಘಾತಕಾರಿ ಸೋಲನುಭವಿಸಿದರು. ಭಾರತದ ಪ್ರಬಲ ಪದಕ ಸ್ಪರ್ಧಿಗಳಲ್ಲಿ ಒಬ್ಬರಾದ ನಿಖತ್ ಜರೀನ್ ಸೋಲಿನ ಬಳಿಕ ಭಾವುಕರಾಗಿ ‘ಕ್ಷಮಿಸಿ ಗೆಳೆಯರೇ’ ಎಂದು ಹೇಳಿದ್ದಾರೆ.

Advertisement

ಹಾಕಿಯಲ್ಲೂ ಸೋಲು
ಭಾರತ ಪೂಲ್ ಬಿ ಹಾಕಿ ಮುಖಾಮುಖಿಯಲ್ಲಿ ಬೆಲ್ಜಿಯಂ ವಿರುದ್ಧ 2-1 ಅಂತರದಿಂದ ಸೋತಿತು. ಅಭಿಷೇಕ್ ಭಾರತದ ಪರ ಮೊದಲ ಗೋಳು ದಾಖಲಿಸಿದ ನಂತರ ಬೆಲ್ಜಿಯಂ ಪರ ತಿಬ್ಯೂ ಸ್ಟಾಕ್‌ಬ್ರೋಕ್ಸ್ ಮತ್ತು ಜಾನ್-ಜಾನ್ ಡೊಹ್ಮೆನ್ ಗೋಲು ಗಳಿಸಿದರು. ಭಾರತ ಪೂಲ್ ಬಿ ಅಂಕಪಟ್ಟಿಯಲ್ಲಿ ಇದೀಗ ಬೆಲ್ಜಿಯಂ ನಂತರ ಎರಡನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿವೆ. ಭಾರತ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಇಂಡಿಯಾ vs ಇಂಡಿಯಾದಲ್ಲಿ ಗೆದ್ದ ಲಕ್ಷ್ಯ ಸೆನ್!

ಭಾರತದ ಸ್ಪರ್ಧಿಗಳೇ ಪರಸ್ಪರ ಸೆಣಸಬೇಕಾದ ಸಂಧರ್ಭ ಗುರುವಾರ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ನ ರೌಂಡ್ ಆಫ್ 16 ನಲ್ಲಿ ಬಂದೊದಗಿತು. 32 ರ ಸುತ್ತಿನ ಪಂದ್ಯದಲ್ಲಿ ಇಂಡೋನೇಷ್ಯಾದ ಪ್ರಬಲ ಎದುರಾಳಿ ಜೊನಾತನ್ ಕ್ರಿಸ್ಟಿಯನ್ನು ಸೋಲಿಸಿದ್ದ ಲಕ್ಷ್ಯ ಸೇನ್ ಅವರು ಆಲ್-ಇಂಡಿಯನ್ ಹಣಾಹಣಿಯಲ್ಲಿ ಎಚ್‌. ಎಸ್. ಪ್ರಣಯ್ ಅವರ ವಿರುದ್ಧ 21-12, 21-6 ಸೆಟ್ ಗಳಿಂದ ಗೆದ್ದು ಕ್ವಾರ್ಟರ್ ಫೈನಲ್ ತಲುಪಿ ಪದಕದ ಭರವಸೆ ಮೂಡಿಸಿದ್ದಾರೆ.

ರೇಸ್‌ ವಾಕ್‌ನಲ್ಲಿ ನಿರಾಸೆ: ವಿಕಾಸ್‌ಗೆ 30ನೇ ಸ್ಥಾನ
ಪುರುಷರ 20 ಕಿ.ಮೀ. ರೇಸ್‌ ವಾಕ್‌ನಲ್ಲಿ ಭಾರತ ನಿರಾಸೆ ಅನುಭವಿಸಿದೆ. ದೇಶವನ್ನು ಪ್ರತಿನಿಧಿಸಿದ್ದ ವಿಕಾಸ್‌ ಸಿಂಗ್‌ 30ನೇ ಸ್ಥಾನ ಪಡೆದರೆ, ಮತ್ತೂಬ್ಬ ಸ್ಪರ್ಧಿ ಪರಮ್‌ಜೀತ್‌ ಸಿಂಗ್‌ 37ನೇ ಸ್ಥಾನ ಪಡೆದರು. ಇನ್ನು ಮಹಿಳೆಯರ ರೇಸ್‌ವಾಕ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಪ್ರಿಯಾಂಕಾ ಗೋಸ್ವಾಮಿ ಕೂಡ ನೀರಸ ಪ್ರದರ್ಶನ ನೀಡಿದರು. ಅವರು 41ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು.

ಪುರುಷರ ವಿಭಾಗದ 20 ಕಿ.ಮೀ. ರೇಸ್‌ ವಾಕ್‌ನಲ್ಲಿ ಸ್ಪರ್ಧಿಸಿದ್ದ ಮತ್ತೂಬ್ಬ ಆ್ಯತ್ಲೀಟ್‌, ರಾಷ್ಟ್ರೀಯ ದಾಖಲೆ ಹೊಂದಿರುವ ಅಕ್‌Òದೀಪ್‌ ಸಿಂಗ್‌, ಸ್ಪರ್ಧೆಯನ್ನೇ ಪೂರ್ಣಗೊಳಿಸದೆ ಹಿಂದೆ ಸರಿದರು. 6 ಕಿ.ಮೀ. ವರೆಗೆ ಸ್ಪರ್ಧಿಸಿದ ಅವರು ಬಳಿಕ ಸ್ನಾಯು ಸೆಳೆತದ ಕಾರಣ ವೇಗದ ನಡಿಗೆಯನ್ನು ನಿಲ್ಲಿಸಿದರು. ಅಕ್ಷದೀಪ್‌ ಕಳೆದೆರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು ಎಂದು ಅವರ ಕೋಚ್‌ ತಿಳಿಸಿದ್ದಾರೆ.

ಆರ್ಚರಿ: ಮೊದಲ ಸುತ್ತಲ್ಲೇ ಸೋತು ಪ್ರವೀಣ್‌ ಹೊರಕ್ಕೆ
ಪುರುಷರ ವೈಯಕ್ತಿಕ ಆರ್ಚರಿಯಲ್ಲಿ ಮೊದಲ ಸುತ್ತಿನಲ್ಲೇ ಸೋತಿರುವ ಭಾರತದ ಪ್ರವೀಣ್‌ ಜಾಧವ್‌, ಕೂಟದಿಂದ ಹೊರ ಬಿದ್ದಿದ್ದಾರೆ. ಅವರು ಚೀನಾದ ಕಾವೊ ವೆಂಚಾವೊ ವಿರುದ್ಧ 6-0 (29-28, 30-29, 28-27) ಅಂತರದಿಂದ ಸೋತು ನಿರಾಸೆ ಅನುಭವಿಸಿದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ 2ನೇ ಸುತ್ತಿಗೆ ಪ್ರವೇಶಿಸಿದ್ದ ಜಾಧವ್‌ ಪ್ಯಾರಿಸ್‌ನಲ್ಲಿ ಇನ್ನೂ ಕಳಪೆ ಪ್ರದರ್ಶನ ನೀಡಿದರು. ಇದರೊಂದಿಗೆ ಆರ್ಚರಿಯಲ್ಲಿ ಭಾರತದ ಪುರುಷರ ಸವಾಲು ಅಂತ್ಯಗೊಂಡಿದೆ.

ಅಂಜುಮ್‌, ಸಿಫ್ಟ್ ಫೈನಲಿಗೇರಲು ವಿಫ‌ಲ
ಭಾರತೀಯ ಶೂಟರ್‌ಗಳಾದ ಅಂಜುಮ್‌ ಮೌದ್ಗಿಲ್‌ ಮತ್ತು ಸಿಫ್ಟ್ ಕೌರ್‌ ಸಮ್ರಾ ಅವರು ವನಿತೆಯರ 50 ಮೀ. ರೈಫ‌ಲ್‌ ತ್ರಿ ಪೊಸಿಸನ್‌ನಲ್ಲಿ ಫೈನಲ್‌ ಹಂತಕ್ಕೇರಲು ವಿಫ‌ಲರಾಗಿದ್ದಾರೆ. ಅವರು ಗುರುವಾರ ನಡೆದ ಸ್ಪರ್ಧೆಯಲ್ಲಿ ಅನುಕ್ರಮವಾಗಿ 18ನೇ ಮತ್ತು 31ನೇ ಸ್ಥಾನ ಪಡೆದಿದ್ದಾರೆ.

ತನ್ನ ದ್ವಿತೀಯ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಅಂಜುಮ್‌ ಅವರು ಒಟ್ಟಾರೆ 584 ಅಂಕ ಗಳಿಸಲು ಯಶಸ್ವಿಯಾಗಿದ್ದರೆ ಸಿಫ್ಟ್ ಅವರು 575 ಅಂಕ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next